
ಶಿವಮೊಗ್ಗ: ಮಲೆನಾಡಿನ ಸಾಹಿತ್ಯ, ಜಾನಪದ ಹಾಗೂ ಸಮಾಜವಾದಿ ರಾಜಕಾರಣದ ಪಡಸಾಲೆಯಲ್ಲಿ ಗುರುವಾರ ಸಂಭ್ರಮ ಮನೆ ಮಾಡಿತ್ತು. ಯಾವುದೇ ಅರ್ಜಿ ಹಾಕದಿದ್ದರೂ ಜಿಲ್ಲೆಯ ಮೂವರು ಅರ್ಹರನ್ನು ಗುರುತಿಸಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿ ಗೌರವ ಸಲ್ಲಿಸಿರುವ ಸರ್ಕಾರದ ಕ್ರಮ ಈ ಖುಷಿಗೆ ಕಾರಣವಾಗಿತ್ತು.
ಸಾಹಿತ್ಯ ಕ್ಷೇತ್ರದ ಸಾಧನೆಗೆ ಶಿವಮೊಗ್ಗದ ನೆಚ್ಚಿನ ಮೇಷ್ಟ್ರು ಪ್ರೊ.ರಾಜೇಂದ್ರ ಚೆನ್ನಿ, ಜಾನಪದ ಕ್ಷೇತ್ರದಲ್ಲಿನ ಸಾಧನೆಗೆ ಹಿರಿಯ ಕಲಾವಿದ ಸಾಗರದ ಬಿ.ಟಾಕಪ್ಪ ಕಣ್ಣೂರು ಹಾಗೂ ಶಾಂತವೇರಿ ಗೋಪಾಲಗೌಡರ ಅಂತಃಕರಣದ ರಾಜಕಾರಣದ ಛಾಯೆ ಆಗಿರುವ ಕೋಣಂದೂರು ಲಿಂಗಪ್ಪ ಅವರಿಗೆ ‘ಸಮಾಜಸೇವೆ’ ಕ್ಷೇತ್ರದಲ್ಲಿ ಗುರುತಿಸಿ ರಾಜ್ಯ ಸರ್ಕಾರ ಈ ಪ್ರಶಸ್ತಿ ಘೋಷಿಸಿದೆ.
ಪ್ರೊ.ರಾಜೇಂದ್ರ ಚೆನ್ನಿ..:
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ನಾಗರಗಾಳಿಯಲ್ಲಿ 1955ರಲ್ಲಿ ಜನಿಸಿದ ಪ್ರೊ.ರಾಜೇಂದ್ರ ಚೆನ್ನಿ ಅಗಾಧ ಓದು, ಅಧ್ಯಾಪನ, ನೆಲದನಿಯ ಹೋರಾಟಗಳಲ್ಲಿ ಗುರುತಿಸಿಕೊಂಡು ಬಂದವರು. ಅಧ್ಯಾಪನ ವೃತ್ತಿಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಹೇಳಿದ್ದು ಮಾತ್ರವಲ್ಲದೇ ಜೀವಪರ ಬದುಕಿನ ಆಶಯಗಳನ್ನು ಕಲಿಸಿಕೊಟ್ಟವರು ಚೆನ್ನಿ. ಅದೇ ಕಾರಣಕ್ಕೆ ಮಲೆನಾಡಿನ ಮಕ್ಕಳ ಪಾಲಿಗೆ ನೆಚ್ಚಿನ ಮೇಷ್ಟ್ರು ಕೂಡ ಆಗಿದ್ದವರು.
ಇಂಗ್ಲಿಷ್ ಸಾಹಿತ್ಯದ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮರಾಗಿ ತೇರ್ಗಡೆಗೊಂಡು ಚಿನ್ನದ ಪದಕ ಪುರಸ್ಕೃತರಾಗಿದ್ದಾರೆ. ಕನ್ನಡ, ಹಿಂದಿ, ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆಗಳಲ್ಲಿ ಓದುವ, ಮಾತನಾಡುವ ಸಾಮರ್ಥ್ಯವುಳ್ಳ ಅವರು ಕುವೆಂಪು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ವಿಚಾರ ಗೋಷ್ಠಿಗಳು, ಕನ್ನಡ ವಿಮರ್ಶೆ ಕುರಿತ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಈ ಹಿಂದೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡ ಅವರಿಗೆ ಸಂದಿದೆ.
‘ಇದೊಂದು ಗುರುತಿಸುವ ಕಾರ್ಯ. ಪ್ರಶಸ್ತಿ ಬಂದದ್ದು ಸಂತೋಷವಾಗಿದೆ’ ಎಂದು ಪ್ರೊ.ರಾಜೇಂದ್ರ ಚೆನ್ನಿ ಪ್ರತಿಕ್ರಿಯಿಸಿದರು.
ಕೋಣಂದೂರು ಲಿಂಗಪ್ಪ..:
ತೀರ್ಥಹಳ್ಳಿ ಕ್ಷೇತ್ರದಿಂದ 1972ರಲ್ಲಿ ಮೊದಲ ಬಾರಿಗೆ ಪ್ರಜಾ ಸೋಷಿಯಲಿಸ್ಟ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದವರು ಕೋಣಂದೂರು ಲಿಂಗಪ್ಪ. ಶಾಂತವೇರಿ ಗೋಪಾಲಗೌಡರ ನೆರಳಿನಲ್ಲಿ ಹೋರಾಟದ ಹಾದಿಯಲ್ಲಿ ಸಾಗಿ ಬಂದವರು. ಕೋಣಂದೂರಿನ ರಾಮಪ್ಪ ಹಾಗೂ ಗೌರಮ್ಮ ದಂಪತಿಯ ಪುತ್ರ ಲಿಂಗಪ್ಪ ಅತ್ಯಂತ ಬಡತನದ ಹಿನ್ನೆಲೆಯ ಕುಟುಂಬದಿಂದ ಬಂದವರು. ಮೈಸೂರಿನಲ್ಲಿ ಬಿಎ, ಬೆಂಗಳೂರಿನಲ್ಲಿ ಕಾನೂನು ಪದವಿ ಓದಿದ್ದ ಅವರು, ಕೆಲಕಾಲ ಬೆಂಗಳೂರು ಮಹಾನಗರ ಪಾಲಿಕೆ ಪ್ರೌಢಶಾಲೆಗಳಲ್ಲಿ ಕನ್ನಡ ಶಿಕ್ಷಕರಾಗಿಯೂ ಕೆಲಸ ಮಾಡಿದ್ದರು.
ತಮ್ಮ ಗುರು ಶಾಂತವೇರಿ ಗೋಪಾಲಗೌಡರೊಂದಿಗೆ 1971ರಲ್ಲಿ ಉಳುವವನೇ ಹೊಲದೊಡೆಯ ಹೋರಾಟದಲ್ಲಿ ಗುರುತಿಸಿಕೊಂಡಿದ್ದರು. ಗೋಪಾಲಗೌಡರು ಅನಾರೋಗ್ಯದಿಂದ ಹಾಸಿಗೆ ಹಿಡಿದಾಗ ಅವರ ಸ್ಥಾನಕ್ಕೆ ಪ್ರಜಾ ಸೋಶಿಯಲಿಸ್ಟ್ ಪಕ್ಷದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದವರು ಕೋಣಂದೂರು ಲಿಂಗಪ್ಪ.
ಕನ್ನಡ ಯುವಜನಸಭಾದ ಸಂಚಾಲಕರಾಗಿದ್ದ ಕೋಣಂದೂರು ಲಿಂಗಪ್ಪ 1957ರ ನಂತರ ಕನ್ನಡ ಚಳವಳಿಯಲ್ಲಿ ಭಾಗವಹಿಸಿ ಹೋರಾಟವು ರಾಜ್ಯದೆಲ್ಲೆಡೆ ವಿಸ್ತರಿಸಲು ಶ್ರಮಿಸಿದ್ದರು. ಮುಖ್ಯಮಂತ್ರಿ ದೇವರಾಜ ಅರಸು ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ಶಾಸನಸಭೆಯಲ್ಲಿ ಪುನರ್ ನಾಮಕರಣಗೊಂಡ ಕ್ಷಣಕ್ಕೂ ಅವರು ಸಾಕ್ಷಿಯಾಗಿದ್ದರು.
1983ರಲ್ಲಿ ವಿಧಾನಪರಿಷತ್ ಸದಸ್ಯರಾಗಿಯೂ ಕೆಲಸ ಮಾಡಿದ್ದ ಕೋಣಂದೂರು ಲಿಂಗಪ್ಪ ಅವರಿಗೆ 2013ರಲ್ಲಿ ದೇವರಾಜ ಅರಸು ಪ್ರಶಸ್ತಿಯ ಗೌರವ ಸಂದಿತ್ತು. 95 ವರ್ಷದ ಕೋಣಂದೂರು ಲಿಂಗಪ್ಪ ಸದ್ಯ ಜೀವನದ ಸಂಧ್ಯಾಕಾಲದಲ್ಲಿದ್ದಾರೆ. ಶಿವಮೊಗ್ಗದ ವಿನೋಬನಗರದಲ್ಲಿ ಕುಟುಂಬದೊಂದಿಗೆ ನೆಲೆಸಿದ್ದಾರೆ.

ಅರ್ಜಿಯನ್ನೇ ಹಾಕದೇ ಯಾವುದೇ ಪ್ರಭಾವ ಬೀರದೇ ಪ್ರಶಸ್ತಿ ಬಂದಿದೆ. ಮಾಧ್ಯಮ ಪ್ರತಿನಿಧಿಯೊಬ್ಬರು ಕರೆ ಮಾಡಿ ಹೇಳಿದಾಗಲೇ ಅಪ್ಪನಿಗೆ ಪ್ರಶಸ್ತಿ ಬಂದಿರುವುದು ಗೊತ್ತಾಯಿತು. ಬಹಳ ಖುಷಿ ಆಗಿದೆಡಾ.ವೇಣುಗೋಪಾಲ್ ಕೋಣಂದೂರು ಲಿಂಗಪ್ಪ ಅವರ ಪುತ್ರ
- ಜಾನಪದ ಗಾರುಡಿಗ ಬಿ.ಟಾಕಪ್ಪನಿಗೆ ಅರ್ಹ ಗೌರವ
ಸಾಗರ: ತಾಲ್ಲೂಕಿನ ಕಣ್ಣೂರು ಗ್ರಾಮದ ಬಿ.ಟಾಕಪ್ಪ ಅವರಿಗೆ ಜಾನಪದ ಕ್ಷೇತ್ರದಲ್ಲಿನ ಸಾಧನೆಗಾಗಿ ಈ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭ್ಯವಾಗಿದೆ. ಡೊಳ್ಳು ಕುಣಿತದ ಕಲಾವಿದರಾಗಿ ತರಬೇತುದಾರರಾಗಿ ಈ ಕಲೆಗೆ ಪ್ರಸಿದ್ಧಿಯನ್ನು ತಂದುಕೊಡುವುದರಲ್ಲಿ ಟಾಕಪ್ಪ ಕಳೆದ ಐದು ದಶಕಗಳಿಂದ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. 1985-86 ರಲ್ಲಿ ಕಣ್ಣೇಶ್ವರ ಜಾನಪದ ಕಲಾ ಸಂಘವನ್ನು ಹುಟ್ಟು ಹಾಕಿದ ಟಾಕಪ್ಪ ಅವರು 1987 ರಲ್ಲಿ ರಷ್ಯಾದಲ್ಲಿ ನಡೆದ ಭಾರತೋತ್ಸವದಲ್ಲಿ ಪಾಲ್ಗೊಂಡ 16 ಸದಸ್ಯರ ಡೊಳ್ಳು ಕುಣಿತ ತಂಡದ ಸದಸ್ಯರಾಗಿದ್ದರು. ಅಮೆರಿಕದ ಅಕ್ಕ ಸಮ್ಮೇಳನ ಇಂಗ್ಲೆಂಡ್ ಚೀನಾ ಭೂತಾನ್ ಸ್ಕಾಟ್ಲೆಂಟ್ ಮೊದಲಾದ ದೇಶಗಳಿಗೆ ಡೊಳ್ಳು ಕುಣಿತದ ತಂಡವನ್ನು ಕೊಂಡೊಯ್ದ ಹೆಗ್ಗಳಿಕೆ ಟಾಕಪ್ಪ ಅವರದ್ದು. 2017ರಿಂದ 2019ವರೆಗೆ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾಗಿದ್ದ ಟಾಕಪ್ಪ ಅವರಿಗೆ ಕರ್ನಾಟಕ ಸರ್ಕಾರ ‘ಜಾನಪದ ಶ್ರೀ’ ಪುರಸ್ಕಾರ ನೀಡಿ ಗೌರವಿಸಿದೆ.

ದೀರ್ಘಕಾಲ ಜಾನಪದ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿರುವ ನನ್ನನ್ನು ಸರ್ಕಾರ ಗುರುತಿಸಿ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆಬಿ.ಟಾಕಪ್ಪ ಕೊಣ್ಣೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.