
ತೀರ್ಥಹಳ್ಳಿ: ತೀರ್ಥರಾಜಪುರ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆಯ ಅಂಗವಾಗಿ ಶನಿವಾರ ರಥೋತ್ಸವ ನಡೆಯಿತು.
ಮಧ್ಯಾಹ್ನ ಉತ್ಸವ ಮೂರ್ತಿಯ ಪುರ ಸಂಚಾರದ ನಂತರ ರಥೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸಾವಿರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ದೇವರಿಗೆ ಹಣ್ಣುಕಾಯಿ ಅರ್ಪಿಸಿ ಪೂಜೆ ಸಲ್ಲಿಸಿದರು.
ಮಧ್ಯಾಹ್ನ ರಾಮೇಶ್ವರ ದೇವಸ್ಥಾನದ ರಥಕೊಟ್ಟಿಗೆಯಿಂದ ರಥಬೀದಿಯ ರಾಮಚಂದ್ರಪುರ ಮಠದ ವರೆಗೆ ರಥವನ್ನು ಎಳೆಯಲಾಯಿತು. ರಾತ್ರಿ ರಥಬೀದಿಯಿಂದ ಹೊರಟ ರಥೋತ್ಸವ ಗಾಂಧಿಚೌಕ ಮಾರ್ಗವಾಗಿ ಚರ್ಚ್ ಸರ್ಕಲ್‌ವರೆಗೆ ನಡೆಯಿತು. ಅಲ್ಲಿಂದ ಪುನಃ ದೇವಸ್ಥಾನದ ವರೆಗೆ ರಥ ಎಳೆಯುವ ಮೂಲಕ ರಥೋತ್ಸವ ಸಂಪನ್ನಗೊಂಡಿತು.
ರಥ ನಿಲ್ಲುವ ವಿವಿಧ ಭಾಗಗಳಲ್ಲಿ ದುಷ್ಟಶಕ್ತಿಗಳ ನಿವಾರಣೆಗಾಗಿ ರಥಕ್ಕೆ ಓಡುಬಲಿ (ಬೆರಕೆ ಸೊಪ್ಪಿನ ಚೆರು) ಹಾಕಲಾಯಿತು. ರಥೋತ್ಸವಕ್ಕೆ ಸಹಕರಿಸಿದ ನಾಗರಿಕರು, ರಥ ಕಟ್ಟುವವರಿಗೆ, ಜಾತ್ರೆಯಲ್ಲಿ ವಿದ್ಯುತ್ ದೀಪ ಅಲಂಕರಿಸಿದವರು ಸೇರಿದಂತೆ ಸಹಕರಿಸಿದವರನ್ನು ಗುರುತಿಸಿ ಗೌರವಿಸಲಾಯಿತು.
ತೆಪ್ಪೋತ್ಸವದ ಸಂದರ್ಭ ಜನದಟ್ಟಣೆ ಹೆಚ್ಚಾಗುವ ಕಾರಣ ಈಗಿರುವ ರಸ್ತೆಗಳು ಸಾಲುತ್ತಿರಲಿಲ್ಲ. ಸಿಡಿಮದ್ದು ಪ್ರದರ್ಶನದ ನಂತರ ಇಕ್ಕಟ್ಟು ಹೆಚ್ಚಾಗುವ ಕಾರಣ ಛತ್ರಕೇರಿ ಮಾರ್ಗವಾಗಿ ರಾಮೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ಮತ್ತೊಂದು ಪರ್ಯಾಯ ರಸ್ತೆ ಮಾರ್ಗ ಆರಂಭಿಸಿದ್ದೇವೆ. ಸಾರ್ವಜನಿಕರು ರಸ್ತೆಯನ್ನು ಬಳಕೆ ಮಾಡಿಕೊಳ್ಳಬೇಕೆಂದು ಜಾತ್ರಾ ಸಮಿತಿ ಸಂಚಾಲಕ ಸೊಪ್ಪುಗುಡ್ಡೆ ರಾಘವೇಂದ್ರ ಕೋರಿದ್ದಾರೆ.
ರಾಮೇಶ್ವರ ಅನ್ನದಾಸೋಹ ಮಿತ್ರವೃಂದದ ವತಿಯಿಂದ ಅನ್ನಸಂತರ್ಪಣೆ ನಡೆಯಿತು. 15 ಸಾವಿರಕ್ಕೂ ಹೆಚ್ಚಿನ ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿದರು. ಆರೋಗ್ಯ ಇಲಾಖೆ ಆಹಾರದ ಶುಚಿತ್ವದ ಬಗ್ಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಿತು.
ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ಶಾಸಕ ಆರಗ ಜ್ಞಾನೇಂದ್ರ, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ರಾಮೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹಾಲಿಗೆ ನಾಗರಾಜ್, ಜಾತ್ರ ಸಮಿತಿ ಸಂಚಾಲಕ ಸಂಚಾಲಕ ಸೊಪ್ಪುಗುಡ್ಡೆ ರಾಘವೇಂದ್ರ, ಸಹ ಸಂಚಾಲಕ ಟಿ.ಎಲ್.ಸುಂದರೇಶ್, ಪಟ್ಟಣ ಪಂಚಾಯಿತಿ ಅಧಕ್ಷೆ ಗೀತಾ ರಮೇಶ್, ತಹಶೀಲ್ದಾರ್ ರಂಜಿತ್ ಎಸ್. ವಿಶೇಷವಾಗಿ ಪೂಜೆ ಸಲ್ಲಿಸಿದರು.
ವೇದಮೂರ್ತಿ ಲಕ್ಷ್ಮೀಶ ತಂತ್ರಿ ನೇತೃತ್ವದಲ್ಲಿ ರಥೋತ್ಸವ ಜರುಗಿತು. ಪ್ರಧಾನ ಅರ್ಚಕ ಎಸ್.ರಾಜಶೇಖರ ಭಟ್ ಇದ್ದರು. ಆರ್‌ಜಿ ಫಿಟ್ನೆಸ್ ಸಂಸ್ಥೆಯಿಂದ ದೇಹದಾರ್ಢ್ಯ ಸ್ಪರ್ಧೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.