ADVERTISEMENT

ಸಂಸ್ಕಾರಯುಕ್ತ ಜೀವನದಿಂದ ಬದುಕು ಉಜ್ವಲ: ರಂಭಾಪುರಿ ಶ್ರೀ

ಧರ್ಮ ಜಾಗೃತಿ ಸಮಾರಂಭದಲ್ಲಿ ರಂಭಾಪುರಿ ಶ್ರೀ

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 13:49 IST
Last Updated 10 ಜೂನ್ 2025, 13:49 IST
ಹೊಳೆಹೊನ್ನೂರು ಸಮೀಪದ ಹನುಮಂತಾಪುರದ ಗ್ರಾಮದಲ್ಲಿ ಬಾಳೆಹೊನ್ನೂರು ರಂಭಾಪುರಿ ಶ್ರೀ ಇಷ್ಠಲಿಂಗ ಪೂಜೆ ನೆರೆವೇರಿಸಿದರು
ಹೊಳೆಹೊನ್ನೂರು ಸಮೀಪದ ಹನುಮಂತಾಪುರದ ಗ್ರಾಮದಲ್ಲಿ ಬಾಳೆಹೊನ್ನೂರು ರಂಭಾಪುರಿ ಶ್ರೀ ಇಷ್ಠಲಿಂಗ ಪೂಜೆ ನೆರೆವೇರಿಸಿದರು   

ಹೊಳೆಹೊನ್ನೂರು: ಮಾನವ ಜೀವನದ ಶ್ರೇಯಸ್ಸಿಗೆ ನೀತಿ ನಿಯಮಗಳು ಅವಶ್ಯ. ಮಾತು, ಮನ, ಕೃತಿ ಒಂದಾಗಿದ್ದರೆ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ. ಸಂಸ್ಕಾರಯುಕ್ತ ಜೀವನದಿಂದ ಬದುಕು ಉಜ್ವಲಗೊಳ್ಳುತ್ತದೆ ಎಂದು ಬಾಳೆಹೊನ್ನೂರು ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು. 

ಸಮೀಪದ ಹನುಮಂತಾಪುರ ಗ್ರಾಮದಲ್ಲಿ ಮಂಗಳವಾರ ನಡೆದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.  

ಮನುಷ್ಯ ಜೀವನದಲ್ಲಿ ಕಲಿಯಬೇಕಾದದ್ದು ಬಹಳಷ್ಟಿದೆ. ಕಲಿತಿರುವುದು ಸ್ವಲ್ಪ ಮಾತ್ರ. ಅರಿತು ಬಾಳಿದರೆ ಬಾಳು ಬಂಗಾರ. ಮರೆತು ಬಾಳಿದರೆ ಬದುಕು ಬಂಧನಕಾರಿ. ಮನುಷ್ಯ ಜೀವನದಲ್ಲಿ ದೇವರು ಮತ್ತು ಮರಣ ಇವೆರಡನ್ನೂ ಮರೆಯಬಾರದು. ನಾವು ಮಾಡಿದ ಉಪಕಾರ ಮತ್ತು ಪರರು ಮಾಡಿದ ಅಪಕಾರ ಮರೆತು ಬಾಳಬೇಕು. ಸಕಲ ಜೀವಾತ್ಮರಿಗೆ ಒಳಿತನ್ನೇ ಬಯಸಿದ ವೀರಶೈವ ಧರ್ಮ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿಕೊಟ್ಟಿದೆ ಎಂದರು. 

ADVERTISEMENT

ರಾಜ್ಯ ರೈತ ಸಂಘದ ಅಧ್ಯಕ್ಷ ಬಸವರಾಜಪ್ಪ, ರಾಜಕೀಯ ವಾತಾವರಣ ಬಹಳಷ್ಟು ಕೆಟ್ಟಿದೆ. ಧರ್ಮ ಸಂಸ್ಕೃತಿ ಎತ್ತಿ ಹಿಡಿದ ಕೀರ್ತಿ, ಗೌರವ ಪೀಠ, ಮಠಗಳಿಗೆ ಸಲ್ಲುತ್ತದೆ ಎಂದರು. 

ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ, ಕಡೇನಂದಿಹಳ್ಳಿ- ದುಗ್ಲಿ ಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ, ಚನ್ನಗಿರಿ ಹಿರೇಮಠದ ಕೇದಾರ ಶಿವಶಾಂತವೀರ ಶಿವಾಚಾರ್ಯ, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯ ಉಪಸ್ಥಿತರಿದ್ದರು. 

ಬೆಳಿಗ್ಗೆ ಶಿವದೀಕ್ಷಾ ಅಯ್ಯಾಚಾರ ಹಾಗೂ ಲೋಕ ಕಲ್ಯಾಣಾರ್ಥಕ್ಕಾಗಿ ಬಾಳೆಹೊನ್ನೂರು ರಂಭಾಪುರಿ ಶ್ರೀ ಇಷ್ಠಲಿಂಗ ಮಹಾಪೂಜೆ ನೆರವೇರಿಸಿದರು.

ಸಮಾರಂಭಕ್ಕೂ ಮುನ್ನ ಹನುಮಂತಾಪುರ ಗ್ರಾಮದ ಈಶ್ವರ, ವೀರಭದ್ರೇಶ್ವರ ಮತ್ತು ವೀರಾಂಜನೇಯ ದೇವಸ್ಥಾನಗಳಿಗೆ ಬಾಳೆಹೊನ್ನೂರು ರಂಭಾಪುರಿ ಶ್ರೀ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.