ADVERTISEMENT

Ranji Trophy: ಶಿವಮೊಗ್ಗದ ನಾಳೆಯಿಂದ ರಣಜಿ ಕ್ರಿಕೆಟ್ ಜ್ವರ

ನವುಲೆಯ ಕೆಎಸ್‌ಸಿಎ ಕ್ರೀಡಾಂಗಣ: ಕರ್ನಾಟಕ, ಗೋವಾ ತಂಡಗಳ ನಡುವೆ ಹಣಾಹಣಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 2:03 IST
Last Updated 24 ಅಕ್ಟೋಬರ್ 2025, 2:03 IST
ಶಿವಮೊಗ್ಗದ ನವುಲೆಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಕರ್ನಾಟಕ ತಂಡದ ನಾಯಕ ಮಯಂಕ್ ಅಗರ್‌ವಾಲ್ ಗುರುವಾರ ನೆಟ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡಿದರು
ಶಿವಮೊಗ್ಗದ ನವುಲೆಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಕರ್ನಾಟಕ ತಂಡದ ನಾಯಕ ಮಯಂಕ್ ಅಗರ್‌ವಾಲ್ ಗುರುವಾರ ನೆಟ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡಿದರು   

ಶಿವಮೊಗ್ಗ: ಚಿತ್ತೆ ಮಳೆಯ ತಂಪಿನ ನಡುವೆ ಶಿವಮೊಗ್ಗದ ನಗರದಲ್ಲಿ ಅ.25ರಿಂದ ಕರ್ನಾಟಕ ಹಾಗೂ ಗೋವಾ ತಂಡಗಳ ನಡುವೆ ರಣಜಿ ಟ್ರೋಫಿ ಕ್ರಿಕೆಟ್‌ ಜ್ವರ ಗರಿಗೆದರಲಿದೆ.

ರಣಜಿ ಟ್ರೋಫಿ ಎಲೈಟ್ ವಿಭಾಗದ ‘ಬಿ’ ಗುಂಪಿನಲ್ಲಿ ಮಯಂಕ್ ಅಗರ್‌ವಾಲ್ ನಾಯಕತ್ವದ ಕರ್ನಾಟಕ ತಂಡ ಹಾಗೂ ದೀಪರಾಜ್ ಗಾಂವ್ಕರ್ ನೇತೃತ್ವದ ಗೋವಾ ತಂಡಗಳು ಮುಖಾಮುಖಿಯಾಗಲಿವೆ. ಅ.25ರಿಂದ 28ರವರೆಗೆ ನಾಲ್ಕು ದಿನಗಳ ಕಾಲ ನವುಲೆಯ ಕೆಎಸ್‌ಸಿಯ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ ಎಂದು ರಾಜ್ಯ ಕ್ರಿಕೆಟ್ ಸಂಸ್ಥೆಯ ಶಿವಮೊಗ್ಗ ವಲಯದ ಹಿಂದಿನ ಸಂಚಾಲಕರೂ ಆದ ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಅ.25ರಂದು ಬೆಳಿಗ್ಗೆ 8.45ಕ್ಕೆ ಪಂದ್ಯದ ಉದ್ಘಾಟನೆ ಕಾರ್ಯಕ್ರಮ ಸಾಂಕೇತಿಕವಾಗಿ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್‌.ಬಂಗಾರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಡಾ.ಧನಂಜಯ ಸರ್ಜಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ADVERTISEMENT

ಕ್ರಿಕೆಟ್ ಪಂದ್ಯ ವೀಕ್ಷಣೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ಅಂತರರಾಷ್ಟ್ರೀಯ ಟೂರ್ನಿಗಳ ಅಬ್ಬರದ ನಡುವೆ ರಣಜಿ ಕ್ರಿಕೆಟ್ ಬಗ್ಗೆ ಆಸಕ್ತಿ ಮೂಡಿಸಲು ಶಿವಮೊಗ್ಗದಂತಹ ಎರಡನೇ ಹಂತದ ನಗರದಲ್ಲಿ ರಣಜಿ ಕ್ರಿಕೆಟ್ ಅನ್ನು ಬಿಸಿಸಿಐ ಆಯೋಜಿಸಿದೆ. ಇದರಿಂದ ಇಲ್ಲಿನ ಮಕ್ಕಳಲ್ಲಿ ಹೆಚ್ಚಿನ ಆಸಕ್ತಿ ಮೂಡಲಿದೆ. ಅವರಿಗಾಗಿ ವಿಶೇಷ ಸ್ಟ್ಯಾಂಡ್ ಕೂಡಾ ವ್ಯವಸ್ಥೆ ಮಾಡಲಾಗಿದೆ. ವಿಐ‍ಪಿ ಹಾಗೂ ವಿವಿಐಪಿ ಸ್ಟ್ಯಾಂಡ್ ಕೂಡಾ ಇದ್ದು, ಅದಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಮಳೆಯ ಪರಿಸ್ಥಿತಿ ನಿಭಾಯಿಸಲಿದ್ದೇವೆ

ಪಂದ್ಯಕ್ಕೆ ಮಳೆಯ ಆತಂಕ ಇದ್ದರೂ ಪರಿಸ್ಥಿತಿ ನಿಭಾಯಿಸಲು ಎರಡು ಸೂಪರ್ ಸಾಪರ್ ಯಂತ್ರ, 20 ಗ್ರೌಂಡ್ಸ್‌ಮನ್‌ಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಕೆಎಸ್‌ಸಿಎ ವಲಯ ಸಂಚಾಲಕ ಎಚ್.ಎಸ್.ಸದಾನಂದ ತಿಳಿಸಿದರು.

ಐದಾರು ತಿಂಗಳಿನಿಂದ ಶಿವಮೊಗ್ಗದಲ್ಲಿ ಮಳೆ ಇದೆ. ನವುಲೆ ಕೆರೆ ತುಂಬಿದರೂ, ಅದು ಮೈದಾನಕ್ಕೆ ಹರಿಯದೇ ಹೊರಗೆ ಹೋಗಲು ವ್ಯವಸ್ಥೆ ಮಾಡಲಾಗಿದೆ. ಮಹಾನಗರ ಪಾಲಿಕೆಯಿಂದ ಹಣ ನೀಡಿ ಈ ಕಾಮಗಾರಿ ಕೈಗೊಳ್ಳಲಾಗಿದೆ. ಈ ಹಿಂದೆ ರಸ್ತೆ ನಿರ್ಮಾಣದ ವೇಳೆ ಅವೈಜ್ಞಾನಿಕ ಕಾಮಗಾರಿಯಿಂದ ಈ ತೊಂದರೆ ಎದುರಾಗಿತ್ತು. ಆರು ತಿಂಗಳ ಹಿಂದೆ ಕಾಮಗಾರಿ ಪೂರ್ಣಗೊಂಡಿದೆ. ಮಳೆ ಬಂದರೆ 17 ಗಂಟೆ ಅವಧಿಯೊಳಗೆ ನೀರು ಖಾಲಿಯಾಗಲಿದೆ ಎಂದು ಅರುಣ್ ತಿಳಿಸಿದರು.

ಐದು ವರ್ಷಗಳ ನಂತರ ರಣಜಿ ಪಂದ್ಯ

ಶಿವಮೊಗ್ಗದಲ್ಲಿ 2020ರ ಜನವರಿ 4ರಿಂದ 7ರವರೆಗೆ ಕರ್ನಾಟಕ ಹಾಗೂ ಮಧ್ಯಪ್ರದೇಶ ತಂಡಗಳ ನಡುವೆ ಇದೇ ಮೈದಾನದಲ್ಲಿ ರಣಜಿ ಪಂದ್ಯ ನಡೆದಿತ್ತು. ಈಗ ಮತ್ತೆ ಐದು ವರ್ಷಗಳ ನಂತರ ಈ ಮಹತ್ವದ ಪಂದ್ಯಕ್ಕೆ ಕೆಎಸ್‌ಸಿಎ ಮೈದಾನ ಸಾಕ್ಷಿಯಾಗಲಿದೆ. 1974ರ ನವೆಂಬರ್ 9ರಿಂದ 11ರವರೆಗೆ ಮೂರು ದಿನಗಳ ಕಾಲ ಮೊದಲ ಬಾರಿಗೆ ಶಿವಮೊಗ್ಗದ ನೆಹರೂ ಮೈದಾನದಲ್ಲಿ ಕರ್ನಾಟಕ ಹಾಗೂ ಅಂಧ್ರಪ್ರದೇಶ ತಂಡಗಳ ನಡುವೆ ರಣಜಿ ಟ್ರೋಫಿ ಕ್ರಿಕೆಟ್ ಆಯೋಜನೆಗೊಂಡಿತ್ತು. 1985ರ ಡಿಸೆಂಬರ್ 7ರಿಂದ 9ರವರೆಗೆ ಭದ್ರಾವತಿಯ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ರಣಜಿ ಟ್ರೋಫಿ ಕ್ರಿಕೆಟ್ ಕಲರವ ಕೇಳಿಬಂದಿತ್ತು. 50 ವರ್ಷಗಳ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆ ಈಗ 10ನೇ ಬಾರಿಗೆ ರಣಜಿ ಟ್ರೋಫಿ ಟೂರ್ನಿಗೆ ಆತಿಥ್ಯ ವಹಿಸುತ್ತಿದೆ ಎಂದು ಡಿ.ಎಸ್.ಅರುಣ್ ಹರ್ಷ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ವಲಯ ಸಂಚಾಲಕ ಡಿ.ಆರ್.ನಾಗರಾಜ್, ವಲಯಾಧ್ಯಕ್ಷ ರಾಜೇಶ್ ಕಾಮತ್ ಉಪಸ್ಥಿತರಿದ್ದರು.

ಮಯಂಕ್, ಕರುಣ್ ಮಿಂಚು..

ಈ ಬಾರಿಯ ರಣಜಿ ಟ್ರೋಫಿಯಲ್ಲಿ ರಾಜ್‌ಕೋಟ್‌ನಲ್ಲಿ ನಡೆದ ತನ್ನ ಮೊದಲ ಪಂದ್ಯದಲ್ಲಿ ಕರ್ನಾಟಕ ತಂಡವು ಸೌರಾಷ್ಟ್ರ ವಿರುದ್ಧ ಡ್ರಾ ಮಾಡಿಕೊಂಡಿತ್ತು. ಚಂಡೀಗಢ ತಂಡದ ವಿರುದ್ಧ ಗೆಲುವು ಸಾಧಿಸಿ ಶುಭಾರಂಭ ಮಾಡಿರುವ ಗೋವಾ ತಂಡ ಉತ್ಸಾಹದಲ್ಲಿದೆ.

ಕರ್ನಾಟಕ ತಂಡದಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದ ಮಯಂಕ್ ಅಗರ್‌ವಾಲ್ ಹಾಗೂ ಕರುಣ್ ನಾಯರ್ (ಉಪನಾಯಕ) ಮಿಂಚು ಹರಿಸಲಿದ್ದಾರೆ.

ಆರ್.ಸಮರನ್ ಕೆ.ಎಲ್.ಶ್ರೀಜಿತ್ (ವಿಕೆಟ್ ಕೀಪರ್) ಶ್ರೇಯಸ್ ಗೋಪಾಲ್ ವಿದ್ವತ್ ಕಾವೇರಪ್ಪ ಯಶೋವರ್ಧನ ಪರಾಂತಪ್‌ ಅಭಿಲಾಷ್ ಶೆಟ್ಟಿ ಎಂ.ವೆಂಕಟೇಶ ಎಸ್.ಜೆ.ನಿಕಿನ್ ಜೋಸ್ ಅಭಿನವ್ ಮನೋಹರ್ ಕೃತಿಕ್ ಕೃಷ್ಣಾ (ವಿಕೆಟ್ ಕೀಪರ್‌) ಕೆ.ವಿ.ಅನೀಶ್ ಮೊಹಸಿನ್ ಖಾನ್ ಶಿಖರ್ ಶೆಟ್ಟಿ ತಂಡದ ಉಳಿದ ಆಟಗಾರರು.

ಗೋವಾ ತಂಡದಲ್ಲಿ ಅರ್ಜುನ್ ತೆಂಡೂಲ್ಕರ್..
ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ಗೋವಾ ತಂಡದಲ್ಲಿದ್ದಾರೆ. ದೀಪರಾಜ್ ಗಾಂವ್ಕರ್ (ನಾಯಕ) ಲಲಿತ್ ಯಾದವ್ ಸಮರ್ ದುಭಾಷಿ (ಉಪನಾಯಕ) ಸುಯೇಶ್ ಎಸ್.ಪ್ರಭುದೇಸಾಯಿ ಮಂಥನ್ ಕುತ್ಕರ್ ಕಧ್ಯಪ್ ಬಾಕಳೆ ದರ್ಶನ್ ಮಿಸಳ್‌ ಮೋಹಿತ್ ರೇಡಕರ್ ಅಭಿನವ್ ತೇಜರಾಣ ಹೇರಂಬ ಪರಬ್ ವಿಕಾಸ್ ಸಿಂಗ್ ಇಶಾನ್ ಗಡೇಕರ್ ರಾಜಶೇಖರ್ ಹರಿಕಾಂತ್ ವಿಜೇಶ್ ಪ್ರಭುದೇಸಾಯಿ ವಾಸುಕಿ ಕೌಶಿಕ್‌ ಸ್ನೇಹಲ್ ಕವಟನ್‌ಕರ್ ಗೋವಾ ತಂಡದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.