ಶಿವಮೊಗ್ಗ: ‘ಜಿಲ್ಲೆಯ ಸಾಕ್ಷರತಾ ಪ್ರಮಾಣ, ಕೃಷಿ ಚಟುವಟಿಕೆ ಮತ್ತು ತಲಾ ಆದಾಯದ ಮೇಲೆ ಅಭಿವೃದ್ಧಿ ಸೂಚ್ಯಂಕ ನಿರ್ಧಾರಗೊಳಿಸಿ, ಹಿಂದುಳಿದ ಪ್ರದೇಶವನ್ನು ಗುರುತಿಸಿ, ಅಲ್ಲಿನ ಸರ್ವಾಂಗೀಣ ವಿಕಾಸಕ್ಕಾಗಿ ಎಲ್ಲ ರೀತಿಯ ಪ್ರಾತಿನಿಧ್ಯ ಕಲ್ಪಿಸಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು’ ಎಂದು ಪ್ರಾದೇಶಿಕ ಅಸಮತೋಲನ ನಿವಾರಣಾ ಆಯೋಗದ ಅಧ್ಯಕ್ಷ ಪ್ರೊ.ಎಂ.ಗೋವಿಂದರಾವ್ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘2002ರಲ್ಲಿ ಡಾ.ಡಿ.ಎಂ.ನಂಜುಂಡಪ್ಪ ವರದಿ ಅನ್ವಯ ರಾಜ್ಯದ ಹಿಂದುಳಿದ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಶಿಫಾರಸು ಮಾಡಿದ ಪ್ರಮಾಣದ ಮೊತ್ತ ಸಕಾಲದಲ್ಲಿ ಬಿಡುಗಡೆಯಾಗಲಿಲ್ಲ. ಅಲ್ಲದೇ ಬಿಡುಗಡೆಯಾದ ಮೊತ್ತದಲ್ಲಿ ನಿರೀಕ್ಷಿತ ಪ್ರಮಾಣದ ಅಭಿವೃದ್ಧಿ ಕಾರ್ಯಗಳು ನಡೆಯದಿರುವುದು ಕೂಡ ಅಭಿವೃದ್ಧಿ ಸೂಚ್ಯಂಕದಲ್ಲಿ ಏರಿಕೆ ಕಂಡಿಲ್ಲ’ ಎಂದರು.
‘ರಾಜ್ಯ ಸರ್ಕಾರ 2024ರಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಆರ್ಥಿಕ ತಜ್ಞರನ್ನೊಳಗೊಂಡ ಸಮಿತಿ ರಚಿಸಿದ್ದು, ಈ ಸಮಿತಿಯು ಕೃಷಿ, ಕೈಗಾರಿಕೆ, ಆರ್ಥಿಕ ಮೂಲಸೌಲಭ್ಯ, ಸಾಮಾಜಿಕ ಸೌಲಭ್ಯ, ಹಣಕಾಸಿನ ಮತ್ತು ತಾಂತ್ರಿಕ ಮೂಲಸೌಕರ್ಯ ಮುಂತಾದ ವಲಯಗಳ ಅಭಿವೃದ್ಧಿಯನ್ನು ಗುರುತಿಸಿ, ಸೂಚ್ಯಂಕ ನಿಗದಿಪಡಿಸಲಿದೆ’ ಎಂದು ಹೇಳಿದರು.
‘ಇದರೊಂದಿಗೆ ಸ್ಥಳೀಯ ಜನರಲ್ಲಿನ ವಾಸ್ತವ ವಿಷಯಗಳ ಕುರಿತ ವಿಷಯಾಧಾರಿತ ಚರ್ಚೆ ನಡೆಸಿ, ಅವರ ಅನುಭವದ ಮಾತುಗಳನ್ನಾಲಿಸಿ, ಮಾಡಬಹುದಾದ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಪಡೆದುಕೊಳ್ಳಲಾಗುವುದು’ ಎಂದ ಅವರು, ‘ಈಗಾಗಲೇ ಸಮಿತಿಯು ಗುರುತಿಸಿರುವ ವಿಷಯಗಳಲ್ಲದೇ ಇನ್ನೂ ಅನೇಕ ವಿಷಯಗಳನ್ನು ಈ ನಿಯೋಗವು ಗಮನಿಸಲಿದೆ’ ಎಂದರು.
‘ಪ್ರೊ.ಡಿ.ಎಂ. ನಂಜುಂಡಪ್ಪ ಅವರು ವರದಿ ಸಲ್ಲಿಸಿದ್ದ ಅವಧಿಯ ಅಂದಿನ ಮತ್ತು ಇಂದಿನ ಸ್ಥಿತಿಗತಿಗಳ ಕುರಿತೂ ಸಮಿತಿ ವಿಶೇಷ ಗಮನಹರಿಸಲಿದೆ. ಅಲ್ಲದೇ ಆಗಿರಬಹುದಾದ ಲಾಭ– ನಷ್ಟಗಳ ಬಗ್ಗೆಯೂ ಬೆಳಕು ಚೆಲ್ಲಲಿದೆ’ ಎಂದ ಅವರು, ‘ಈಗಾಗಲೇ ರಾಜ್ಯದಲ್ಲಿ ವಲಯಾಧಾರಿತವಾಗಿ ಅನೇಕ ನಿಗಮ ಮಂಡಳಿಗಳನ್ನು ರಚಿಸಿ, ಕೋಟ್ಯಂತರ ಅನುದಾನ ಬಿಡುಗಡೆಗೊಳಿಸಲಾಗಿದೆ. ಇದರಿಂದ ಆಗಿರಬಹುದಾದ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆಯೂ ಗಮನಹರಿಸಲಿದೆ. ಇದರೊಂದಿಗೆ ದೇಶದ ಅಭಿವೃದ್ಧಿ ಸೂಚ್ಯಂಕದಲ್ಲಿ ರಾಜ್ಯದ ಸ್ಥಾನಮಾನ, ವಿವಿಧ ಕ್ಷೇತ್ರಗಳ ಅಭಿವೃದ್ಧಿ ಮುಂತಾದವುಗಳ ಮಾಹಿತಿ ಕಲೆ ಹಾಕಲಾಗುವುದು’ ಎಂದು ತಿಳಿಸಿದರು.
ಸಭೆಯಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಸದಸ್ಯ ಎಂ.ಎಚ್. ಸೂರ್ಯನಾರಾಯಣ,ಸಿಇಒ ಎನ್.ಹೇಮಂತ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ದಲಿಂಗರೆಡ್ಡಿ ಉಪಸ್ಥಿತರಿದ್ದರು.
ಕರ್ನಾಟಕವು ದೇಶದ ಪ್ರಗತಿ ಸೂಚ್ಯಂಕದಲ್ಲಿ ತೆಲಂಗಾಣದ ನಂತರದ ಸ್ಥಾನದಲ್ಲಿದೆ.
ಬೆಳೆಯುತ್ತಿರುವ ದೇಶದ ಬೇರೆ ಬೇರೆ ರಾಜ್ಯಗಳಿಗೆ ಹೋಲಿಸಿದಲ್ಲಿ ಶೇ 67ರಷ್ಟು ಪ್ರಗತಿಯಲ್ಲಿದೆ. ಕೃಷಿಯಲ್ಲಿ ಶೇ 10ರಷ್ಟು ಮತ್ತು ಕೈಗಾರಿಕೆಯಲ್ಲಿ ಶೇ 20.05ರಷ್ಟು ಅಭಿವೃದ್ಧಿ ಹೊಂದಿದೆ. ಜಿಲ್ಲೆಯು ತಲಾ ಆದಾಯ ಗಳಿಕೆಯಲ್ಲಿ ತಕ್ಕಮಟ್ಟಿನ ಪ್ರಗತಿಯಲ್ಲಿದೆ. ಆದರೆ ಆರೋಗ್ಯದ ಕಾಳಜಿ ವಹಿಸುವಲ್ಲಿ ಹಾಗೂ ಶಿಕ್ಷಣ ಕ್ಷೇತ್ರದ ವಿಕಾಸದಲ್ಲಿ ನಿರೀಕ್ಷಿತ ಪ್ರಗತಿ ಕಂಡಿಲ್ಲ’ ಎಂದು ಪ್ರೊ.ಎಂ.ಗೋವಿಂದರಾವ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.