ಶಿವಮೊಗ್ಗ: ‘ಬಿಜೆಪಿಯ 18 ಶಾಸಕರ ಅಮಾನತು ಆದೇಶ ವಾಪಸ್ ಪಡೆದ ವಿಧಾನಸಭೆ ಸ್ಪೀಕರ್ ನಿರ್ಧಾರ ಸಂವಿಧಾನ ವಿರೋಧಿ ನಡೆ. ದೇಶದ ಸಂಸದೀಯ ನಡವಳಿಕೆಗೆ ಇದೊಂದು ಕಪ್ಪು ಚುಕ್ಕೆ’ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದರು.
ಶಾಸಕರ ಅಮಾನತು ತೀರ್ಮಾನವು ಸದನದಲ್ಲಿ ತೆಗೆದುಕೊಂಡದ್ದು. ಅದನ್ನು ಅಲ್ಲಿಯೇ ವಾಪಸ್ ಪಡೆಯಬೇಕಿತ್ತು. ಹೊರಗಡೆ ಎಲ್ಲಿಯೋ ತೀರ್ಮಾನಿಸುವ ಅವಕಾಶ ಸಂವಿಧಾನದಲ್ಲಿ ಇಲ್ಲ ಎಂದು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಅಮಾನತು ಆದೇಶ ವಾಪಸ್ ಪಡೆಯಲು ತೀರ್ಮಾನಿಸಿರುವ ಸ್ಪೀಕರ್, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರು ಸುಪ್ರೀಂ ಅಲ್ಲ. ಸದನದ ಭಾಗವಷ್ಟೇ. ಸದನದ ಸಂಪ್ರದಾಯಗಳನ್ನು ಮೀರಿ ವರ್ತಿಸುವ ಹಾಗಿಲ್ಲ. ಸದನದಲ್ಲಿ ಕೈಗೊಂಡ ತೀರ್ಮಾನ ಬದಲಿಸುವ ಕಿಂಚಿತ್ ಅಧಿಕಾರವೂ ಅವರಿಗೆ ಇಲ್ಲ. ಈ ವಿಚಾರದಲ್ಲಿ ಅವರು ಎಡವಿದ್ದಾರೆ. ದೊಡ್ಡವರೆಲ್ಲ ಕುಳಿತು ಮಾಡಿದ ತಪ್ಪು ಇದು. ಯಾಕಿಷ್ಟು ತುರ್ತಾಗಿ ನಿರ್ಧಾರ ಕೈಗೊಂಡರು? ಈಗ ಸದನ ನಡೆಯುತ್ತಿದೆಯೇ? ಅಮಾನತುಗೊಂಡ ಶಾಸಕರ ತುಟ್ಟಿಭತ್ಯೆಗೆ ತೊಂದರೆ ಆಗಿದ್ದು ಬಿಟ್ಟರೆ ಮತ್ತೇನೂ ಆಗಿರಲಿಲ್ಲ’ ಎಂದರು.
‘ನಿಯಮ 348 ಪ್ರಕಾರ ಅಮಾನತು ಮಾಡಲಾಗಿತ್ತು. ಈಗ ಯಾವ ನಿಯಮದ ಪ್ರಕಾರ ಅಮಾನತು ಆದೇಶ ರದ್ದು ಮಾಡಲಾಗಿದೆ?’ ಎಂದು ಪ್ರಶ್ನಿಸಿದ ಅವರು, ‘ಅಮಾನತು ರದ್ದು ಆದೇಶ ಜಾರಿಯಾದಲ್ಲಿ ಸಂವಿಧಾನದ ಆಶಯಗಳಿಗೆ ದೊಡ್ಡ ಅಪಚಾರ ಆಗಲಿದೆ. ಬೇಕಿದ್ದರೆ ನಿಯಮಾವಳಿಯಂತೆ ಸದನದಲ್ಲಿಯೇ ತೀರ್ಮಾನ ವಾಪಸ್ ಪಡೆಯಲಿ’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.