ಪ್ರಜಾವಾಣಿ ವಾರ್ತೆ
ರಿಪ್ಪಸ್‌ಪೇಟೆ: ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಗಣಪನ ವಿಸರ್ಜನಾ ಮೆರವಣಿಗೆ ನಿರಂತರ 19 ಗಂಟೆಗಳು ನಡೆಯಿತು. ಶನಿವಾರ ಸಂಜೆ ಆರಂಭವಾದ ಮೆರವಣಿಗೆ ಭಾನುವಾರ ಮಧ್ಯಾಹ್ನದ ವರೆಗೂ ಸಾಗಿತು. ನಂತರ ಸಾವಿರಾರು ಭಕ್ತರ ಸಮ್ಮುಖದಲ್ಲಿ 12.15ಕ್ಕೆ ಗವಟೂರಿನ ತಾವರೆಕೆರೆಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು.
ಸಮಿತಿಯ ಆಶ್ರಯದಲ್ಲಿ 11 ದಿನಗಳು ವಿವಿಧ ಜಾನಪ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ ನೀಡಲಾಗಿತ್ತು. ಅಂದಾಜು 20 ಸಾವಿರಕ್ಕೂ ಅಧಿಕ ಸಂಖ್ಯೆಯ ಜನಸ್ತೋಮದ ನಡುವೆ ನಾಡಿನ ವಿವಿಧಡೆಯಿಂದ ಆಗಮಿಸಿದ ಜಾನಪದ ಕಲಾತಂಡಗಳು ಆಹೋರಾತ್ರಿ ಕಲಾ ಪ್ರದರ್ಶನ ನೀಡಿ ರಂಜಿಸಿದವು.
ಮೆರವಣಿಗೆಯ ಮಾರ್ಗದುದ್ದಕ್ಕೂ ಹೆಂಗೆಳೆಯರ ಕೈಚಳಕದಲ್ಲಿ ಮೂಡಿದ ರಂಗೋಲಿ, ತಳಿರು ತೋರಣಗಳ ಶೃಂಗಾರ, ಸಿಡಿಮದ್ದುಗಳ ಬಣ್ಣ ಬಣ್ಣದ ಚಿತ್ತಾರಗಳು ಜನಮನ ಸೆಳೆಯಿತು. ರಾಜಬೀದಿಯಾ ಪ್ರಮುಖ ವೃತ್ತಗಳು ಕೇಸರಿಮಯ ಬಟ್ಟಿಂಗ್ಸ್ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದವು.
ಡೊಳ್ಳು ಚಂಡೆ ವಾದ್ಯಗಳ ತಾಳಕ್ಕೆ ತಕ್ಕಂತೆ ಮಕ್ಕಳು, ಯುವಕ–ಯುವತಿಯರು ಕುಣಿದು ಕುಪ್ಪಳಿಸಿದರು. ಅಯೋಧ್ಯೆಯ ಶ್ರೀರಾಮ ಮಂದಿರ ಮಾದರಿಯ ರಥ ಜನರ ಗಮನ ಸೆಳೆಯಿತು.
ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪಿ. ಸುದೀರ್, ಕಾರ್ಯದರ್ಶಿ ಮುರುಳಿಧರ, ಹಾಗೂ ಪದಾಧಿಕಾರಿಗಳು ಶನಿವಾರ ಮಧ್ಯಾಹ್ನದಿಂದ ತಡ ರಾತ್ರಿವರೆಗೂ ಸಾಮೂಹಿಕ ಅನ್ನ ಸಂತರ್ಪಣೆ ಏರ್ಪಡಿಸಿದ್ದರು. ಮಾಜಿ ಸಚಿವ ಎಚ್. ಹಾಲಪ್ಪ ಹರತಾಳು ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಜಾತಿ ಮತ ಪಂಥ ಭೇದವಿಲ್ಲದೆ ನಡೆದ ಭವ್ಯ ಗಣೇಶ ವಿಸರ್ಜನಾ ಮೆರವಣಿಗೆಯ ಸಂಭ್ರಮ ಸಂಸ್ಕೃತಿ ಹಾಗೂ ಭಕ್ತಿ ಸಮನ್ವಯಕ್ಕೆ ಸಾಕ್ಷಿಯಾಗಿ ರಾಜ್ಯಮಟ್ಟದ ಗಮನ ಸೆಳೆಯಿತು.
ಭಾವೈಕ್ಯ ಸಂಗಮವಾದ ದಾಸೋಹ ಮೆರವಣಿಗೆ
ಸಾಗಿದ ಎಲ್ಲಾ ಮಾರ್ಗಗಳಲ್ಲಿಯೂ ವಿವಿಧ ಸಂಘಟನೆಯ ಪ್ರಮುಖರು ಮಜ್ಜಿಗೆ, ಪಾನಕ, ಉಪಹಾರದ ವ್ಯವಸ್ಥೆ ಮಾಡಿದ್ದರು. ಶಾಂತಿ–ಸೌಹಾರ್ದದ ಸಂಕೇತವಾಗಿ ಮುಸ್ಲಿಂ ಜುಮ್ಮಾ ಮಸೀದಿ, ಮಕ್ಕಾ ಮಸೀದಿ, ಆಲ್ ಬದ್ರಿಯಾ ಮಸೀದಿ, ಎಸ್‌ವೈಎಸ್ ಹಾಗೂ ಎಸ್‌ಎಸ್‌ಎಫ್ ಸಂಘಟನೆಯ ಮುಸ್ಲಿಂ ಬಾಂಧವರಿಂದ ನೆಹರು ಬಡಾವಣೆಯ ಬಳಿ ಗಣಪನಿಗೆ ಮಾಲಾರ್ಪಣೆ ಮಾಡಿ ತಂಪು ಪಾನೀಯ ಹಾಗೂ ಲಘು ಉಪಹಾರದ ವ್ಯವಸ್ಥೆ ಮಾಡಿದ್ದರು. ಗವಟೂರಿನ ಗ್ರಾಮಸ್ಥರು ವಿಸರ್ಜನಾ ಸ್ಥಳದಲ್ಲಿ ಗಣಪನಿಗೆ ಕಡಬಿನ ಹಾರ ಹಾಕಿ, ನೈವೇದ್ಯ ಸಮರ್ಪಿಸಿ, ನೆರೆದಿದ್ದ ಮೂರು ಸಾವಿರ ಜನಕ್ಕೂ ಕಡಬಿನ ಉಪಹಾರದ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.