ಶಿವಮೊಗ್ಗ: ‘ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಆರಾಧನಾ, ಅಕ್ಷಯ, ಆಶ್ರಯ ಯೋಜನೆಗಳ ಮೂಲಕ ಬಡವರ ಹಿತಕ್ಕೆ ತಮ್ಮ ಕಲ್ಪನೆಗಳನ್ನು ಕಾರ್ಯರೂಪಕ್ಕೆ ತಂದವರು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ’ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಬಣ್ಣಿಸಿದರು.
ಇಲ್ಲಿನ ಶರಾವತಿ ಡೆಂಟಲ್ ಕಾಲೇಜ್‌ನ ಬೆಳ್ಳಿಹಬ್ಬದ ಸಂಸ್ಮರಣೆಗೆ ನಿರ್ಮಿಸಿದ ನೂತನ ಸಭಾಂಗಣವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯಮಂತ್ರಿ ಆಗಿದ್ದಾಗ ರಾಜ್ಯಕ್ಕೆ ಏನೇನು ಅವಶ್ಯಕತೆ ಇದೆ ಎಂಬುದನ್ನು ಬಂಗಾರಪ್ಪ ಸದಾ ಆಲೋಚಿಸುತ್ತಿದ್ದರು. ಹೀಗಾಗಿಯೇ ಅವರು ಜಾರಿಗೆ ತಂದಿದ್ದ ಯೋಜನೆಗಳು ಈಗಲೂ ಪ್ರಸ್ತುತವಾಗಿವೆ ಎಂದರು.
ಬಡವರ ಹಿತಕ್ಕೆ ಹೆಚ್ಚು ಶ್ರಮಿಸುತ್ತಿದ್ದ ಅವರಿಗೆ ‘ಬಡವರ ಬಂಧು’ ಎಂಬ ಜನಮೆಚ್ಚುಗೆಯ ನುಡಿ ಅರ್ಥಪೂರ್ಣವಾಗಿತ್ತು. ಶರಾವತಿ ಶಿಕ್ಷಣ ಸಂಸ್ಥೆಯನ್ನು ಬೆಳೆಸುವಲ್ಲಿ ಬಂಗಾರಪ್ಪ ಹೆಚ್ಚಿನ ಶಕ್ತಿಯನ್ನು ಧಾರೆ ಎರೆದಿದ್ದಾರೆ. ಅದೇ ದಾರಿಯಲ್ಲಿ ಸಚಿವ ಮಧು ಬಂಗಾರಪ್ಪ ಹೋಗುತ್ತಿದ್ದಾರೆ. ಅಂದುಕೊಂಡದ್ದನ್ನು ಮಾಡುವ ಸ್ವಭಾವ ಅವರದ್ದು. ಮನುಷ್ಯನ ಬೆಳವಣಿಗೆಗೆ ಬಹಳ ಅಗತ್ಯವಿರುವ ಒಳ್ಳೆಯ ಕೆಲಸವನ್ನು ಗುರಿ ಮುಟ್ಟಿಸುವ ಸ್ವಭಾವ ಸಹಜವಾಗಿಯೇ ಅಪ್ಪನಿಂದ ಮಧು ಅವರಿಗೆ ಬಂದಿದೆ ಎಂದು ಶ್ಲಾಘಿಸಿದರು.
ಶರಾವತಿ ಡೆಂಟಲ್ ಕಾಲೇಜು ಮೂಲಕ ಬಂಗಾರಪ್ಪ ಅವರ ಹೆಸರು ಶಾಶ್ವತವಾಗಿ ನೆನಪಿನಲ್ಲುಳಿದಿದೆ. ವಿಶಾಲ ಜಾಗ ಸಿಕ್ಕಿದೆ. ಇಲ್ಲಿ ಆಸ್ಪತ್ರೆ ಕಟ್ಟಲಿ ಎಂದು ಸಲಹೆ ನೀಡಿದರು.
ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ‘ಬಂಗಾರಪ್ಪ ಅವರೇ ನನ್ನನ್ನು ಈ ಮಟ್ಟಕ್ಕೆ ತಂದವರು. ಆ ಮಹಾನ್ ನಾಯಕ ಕೊಟ್ಟ ಕೊಡುಗೆ ಈ ಸಂಸ್ಥೆ. ಇದನ್ನು ಉಳಿಸಿ ಬೆಳೆಸುವ ಹಟ ಮಧು ಬಂಗಾರಪ್ಪ ಅವರಿಗೆ ಇದೆ. ಅದು ಯಶಸ್ವಿಯಾಗಲಿ. ನಾವೂ ಅವರೊಂದಿಗೆ ಇರುತ್ತೇವೆ’ ಎಂದರು.
ರೈತರ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್, ಶಾಲೆಗೆ ಬರುವ ಮಕ್ಕಳಿಗೆ ದಿನಕ್ಕೆ ₹1 ಕೊಡುವ ಬಂಗಾರಪ್ಪ ಅವರ ಬಡವರ ಪರ ಕೆಲಸಗಳು ಸದಾ ನೆನಪಿನಲ್ಲಿಟ್ಟುಕೊಳ್ಳುವಂತೆ ಇವೆ. ಅವರು ಸ್ಥಾಪಿಸಿದ ಈ ಸಂಸ್ಥೆ ಚೆನ್ನಾಗಿ ಬೆಳೆಯಬೇಕು. ಹೀಗಾಗಿ ಇಲ್ಲಿ ಆಸ್ಪತ್ರೆಯನ್ನು ಕಟ್ಟಿ ಎಂದು ಮಧು ಬಂಗಾರಪ್ಪ ಅವರಿಗೆ ಬೇಳೂರು ಸಲಹೆ ನೀಡಿದರು.
ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್, ಭದ್ರಾ ಕಾಡಾ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಚಂದ್ರಭೂಪಾಲ್ ಮಾತನಾಡಿದರು.
ಸಮಾರಂಭದಲ್ಲಿ ಶಿರಸಿ ಶಾಸಕ ಭೀಮಣ್ಣ ನಾಯ್ಕ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಸಿಇಒ ಎನ್.ಹೇಮಂತ್, ಶರಾವತಿ ಡೆಂಟಲ್ ಕಾಲೇಜಿನ ಪ್ರಾಚಾರ್ಯ ಡಾ.ಸಾಮ್ರಾಟ್, ಸಿದ್ಧಲಿಂಗಯ್ಯ, ಬಂಗಾರಪ್ಪ ಅವರ ಒಡನಾಡಿಗಳಾದ ಚಂದ್ರಣ್ಣ, ಕಲಗೋಡು ರತ್ನಾಕರ್ ಹಾಜರಿದ್ದರು.
ಇಂತಹ ಕೆಲಸ ಮಾಡಬೇಕು ಎಂದು ತೀರ್ಮಾನಿಸಿದರೆ ಬಂಗಾರಪ್ಪ ಅದನ್ನು ಮಾಡಿಯೇ ತೀರುತ್ತಿದ್ದರು. ನನಗೆ ರಾಜಕೀಯ ಶಕ್ತಿ ತಂದುಕೊಟ್ಟು ಅವರು ಎಂಎಲ್‌ಎಗಳ ಸೃಷ್ಟಿಸುವ ದೊಡ್ಡ ಶಕ್ತಿಯಾಗಿದ್ದರು.– ಬಲ್ಕೀಶ್ ಬಾನು, ವಿಧಾನಪರಿಷತ್ ಸದಸ್ಯೆ
ಬಂಗಾರಪ್ಪ ಅವರು ಶಿವಮೊಗ್ಗದಲ್ಲಿ ಆ ಕಾಲದಲ್ಲಿ ಡೆಂಟಲ್ ಕಾಲೇಜು ಅರಂಭಿಸುವ ಯೋಚನೆ ಮಾಡಿದ್ದೇ ದೊಡ್ಡ ಧೈರ್ಯ. 25 ವರ್ಷ ಪೂರ್ಣಗೊಳಿಸಿದ್ದು ಅತ್ಯುತ್ತಮ ಸಭಾಂಗಣ ನಿರ್ಮಿಸಿರುವುದು ಅಭಿನಂದನೀಯ.– ಡಿ.ಎಸ್.ಅರುಣ್, ವಿಧಾನಪರಿಷತ್ ಸದಸ್ಯ
ಬಂಗಾರಪ್ಪ ಆಶಯಗಳ ಸಾಕಾರ: ಮಧು ಬಂಗಾರಪ್ಪ
‘ಶರಾವತಿ ಶಿಕ್ಷಣ ಸಂಸ್ಥೆಯ ಮೂಲಕ ಅಪ್ಪ ಎಸ್. ಬಂಗಾರಪ್ಪ ಅವರ ವ್ಯಕ್ತಿತ್ವ ಜನಮಾನದಲ್ಲಿರುವ ಭಾವನೆಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಕೆಲಸ ಮಾಡಲಿದ್ದೇನೆ’ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು. ‘ವೇತನ ಪಾವತಿಸಲು ಕಾಲೇಜಿನಲ್ಲಿ ಹಣ ಇರಲಿಲ್ಲ. ಆಗ ಆಕಾಶ್ ಆಡಿಯೊದಿಂದ ಕೊಡುತ್ತಿದ್ದೆವು. ಒಂದು ಹಂತದಲ್ಲಿ ಟ್ರಸ್ಟ್ ಕೈತಪ್ಪುವ ಪರಿಸ್ಥಿತಿ ಇತ್ತು. ಅದನ್ನು ಉಳಿಸಿಕೊಂಡು ಈಗ ಸುಸ್ಥಿತಿಗೆ ತಂದಿದ್ದೇವೆ. ಅದರಲ್ಲಿ ಶಿರಸಿಯ ಶಾಸಕ ಭೀಮಣ್ಣ ಅವರ ಪಾತ್ರ ದೊಡ್ಡದಿದೆ’ ಎಂದು ಸ್ಮರಿಸಿದರು. ಬಂಗಾರಪ್ಪ ಅವರಿಗೆ ಡೆಂಟಲ್ ಹಾಗೂ ಮೆಡಿಕಲ್ ಕಾಲೇಜು ಮಾಡುವ ಕನಸು ಇತ್ತು. ಮುಂದಿನ ದಿನಗಳಲ್ಲಿ ದೇವರು ಶಕ್ತಿ ಕೊಟ್ಟರೆ ಅದನ್ನು ಸಾಕಾರಗೊಳಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.