ADVERTISEMENT

ಗಾನಸುಧೆ ಹರಿಸುತ್ತಿರುವ ವಿದ್ಯಾಲಯಕ್ಕೆ ಬೆಳ್ಳಿಹಬ್ಬದ ಸಂಭ್ರಮ

ಸದ್ಗುರು ಸಂಗೀತ ಶಾಲೆ: ಇಂದಿನಿಂದ ರಾಷ್ಟ್ರೀಯ ಸಂಗೀತೋತ್ಸೊವ

ಎಂ.ರಾಘವೇಂದ್ರ
Published 11 ಜನವರಿ 2025, 6:54 IST
Last Updated 11 ಜನವರಿ 2025, 6:54 IST
ಸಾಗರದಲ್ಲಿ ಸದ್ಗುರು ಹಿಂದೂಸ್ತಾನಿ ಸಂಗೀತ ವಿದ್ಯಾಲಯ ಆಯೋಜಿಸಿದ್ದ ಸಂಗೀತೋತ್ಸವದಲ್ಲಿ ಗಾಯನ ಪ್ರಸ್ತುತಪಡಿಸುತ್ತಿರುವ ವಿದ್ಯಾರ್ಥಿಗಳು (ಸಂಗ್ರಹ ಚಿತ್ರ)
ಸಾಗರದಲ್ಲಿ ಸದ್ಗುರು ಹಿಂದೂಸ್ತಾನಿ ಸಂಗೀತ ವಿದ್ಯಾಲಯ ಆಯೋಜಿಸಿದ್ದ ಸಂಗೀತೋತ್ಸವದಲ್ಲಿ ಗಾಯನ ಪ್ರಸ್ತುತಪಡಿಸುತ್ತಿರುವ ವಿದ್ಯಾರ್ಥಿಗಳು (ಸಂಗ್ರಹ ಚಿತ್ರ)   

ಸಾಗರ: ಕರ್ನಾಟಕ ಸಂಗೀತ, ಹಿಂದೂಸ್ತಾನಿ, ಸುಗಮ ಸಂಗೀತ, ಭಕ್ತಿ ಸಂಗೀತ ಹೀಗೆ ಸಂಗೀತದ ಹಲವು ಪ್ರಕಾರಗಳಲ್ಲಿ ಆಸಕ್ತಿಯುಳ್ಳ ಎಲ್ಲಾ ವಯೋಮಾನದವರಿಗೆ ನಿರಂತರವಾಗಿ ತರಬೇತಿ ನೀಡುತ್ತಿರುವುದು ಇಲ್ಲಿನ ಸದ್ಗುರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ವಿದ್ಯಾಲಯದ ಹೆಗ್ಗಳಿಕೆಯಾಗಿದೆ.

ಈ ವಿದ್ಯಾಲಯ ಈಗ ಬೆಳ್ಳಿಹಬ್ಬ ಆಚರಣೆಯ ಸಂಭ್ರಮದಲ್ಲಿದೆ. ಇದರ ಅಂಗವಾಗಿ ಇಲ್ಲಿನ ಗಾಂಧಿ ಮೈದಾನದಲ್ಲಿ ಜ.11 ರಿಂದ 14ರವರೆಗೆ ಬೆಳಿಗ್ಗೆ 8.30 ರಿಂದ ರಾತ್ರಿ 11.30ರವರೆಗೂ ಸ್ಥಳೀಯ ಮತ್ತು ಖ್ಯಾತ ಕಲಾವಿದರಿಂದ ಹಿಂದೂಸ್ತಾನಿ, ಕರ್ನಾಟಕ ಶಾಸ್ತ್ರೀಯ ಸಂಗೀತ, ಬಾನ್ಸುರಿ ವಾದನ ಸೇರಿದಂತೆ ಹಲವು ವೈವಿಧ್ಯಮ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಸದ್ಗುರು ಸಂಗೀತ ವಿದ್ಯಾಲಯದ ಯಶಸ್ವಿ ಪಯಣದ ಹಿಂದೆ ಇರುವ ವ್ಯಕ್ತಿಗಳೆಂದರೆ ವಸುಧಾ ಶರ್ಮ, ನರಸಿಂಹಮೂರ್ತಿ ಹಳೆ ಇಕ್ಕೇರಿ ದಂಪತಿ. ಶಿರಸಿ ಸಮೀಪದ ಗೋಳಗೋಡು ಗ್ರಾಮದ ವಸುಧಾ ಶರ್ಮ 1994ರಲ್ಲಿ ವಿವಾಹವಾದ ನಂತರ ಇಲ್ಲಿಗೆ ಆಗಮಿಸಿದ್ದು, ವಿದ್ಯಾಲಯದ ಹುಟ್ಟಿಗೆ ಕಾರಣವಾಯಿತು.

ADVERTISEMENT

ವೀರಶೈವ ಕಲ್ಯಾಣ ಮಂಟಪದಲ್ಲಿ ಬೆರಳೆಣಿಕೆಯ ವಿದ್ಯಾರ್ಥಿಗಳಿಂದ ಆರಂಭವಾದ ಸಂಗೀತ ವಿದ್ಯಾಲಯ ನಂತರ ಕೆಲಕಾಲ ಬ್ರಾಸಂ ಕಟ್ಟಡದಲ್ಲಿ ನಡೆದಿತ್ತು. ತದನಂತರ ಚಾಮರಾಜಪೇಟೆ ಬಡಾವಣೆಯ ಸದ್ಗುರು ನರಹರಿ ಆಶ್ರಮದಲ್ಲಿ ಇಂದಿಗೂ ನಡೆಯುತ್ತಿದೆ.

ಈವರೆಗೆ ಸದ್ಗುರು ವಿದ್ಯಾಲಯದಲ್ಲಿ ಅಂದಾಜು 14,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಗೀತಾಭ್ಯಾಸ ನಡೆಸಿದ್ದಾರೆ. ಜ್ಯೂನಿಯರ್, ಸೀನಿಯರ್ ವಿಭಾಗದ ಪರೀಕ್ಷೆಗಳಲ್ಲಿ ಈ ವಿದ್ಯಾಲಯದ ವಿದ್ಯಾರ್ಥಿಗಳು ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ವಾಹಿನಿಗಳ ರಿಯಾಲಿಟಿ ಶೋಗಳಲ್ಲೂ ಮಿಂಚಿದ್ದಾರೆ.

ಪ್ರತಿ ವರ್ಷ ಸಂಕ್ರಾಂತಿ ಸಂದರ್ಭದಲ್ಲಿ ಸಂಗೀತೋತ್ಸವ ಆಯೋಜಿಸಿ ರಾಷ್ಟ್ರ, ರಾಜ್ಯದ ವಿವಿಧ ಭಾಗಗಳಿಂದ ಹೆಸರು ಮಾಡಿರುವ ಕಲಾವಿದರನ್ನು ಇಲ್ಲಿಗೆ ಕರೆಸುವುದು ಸದ್ಗುರು ವಿದ್ಯಾಲಯದ ವಿಶೇಷತೆಯಾಗಿದೆ. ಇದರ ಜೊತೆಗೆ ಸ್ಥಳೀಯ ಕಲಾವಿದರಿಗೂ ವೇದಿಕೆ ಕಲ್ಪಿಸಲಾಗುತ್ತದೆ. ಈ ಭಾಗಕ್ಕೆ ಸಂಕ್ರಾಂತಿ ಬಂತೆಂದರೆ ಸಂಗೀತದ ‘ಸುಗ್ಗಿ’ ಸನ್ನಿಹಿತವಾಗಿದೆ ಎಂದರ್ಥ.

ಹೀಗೆ ಆಯೋಜನೆಯಾಗುವ ಸಂಗೀತೋತ್ಸವದಲ್ಲಿ ಈವರೆಗೆ 500ಕ್ಕೂ ಹೆಚ್ಚು ಕಲಾವಿದರು ವೇದಿಕೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಇದು ಯುವ, ಉದಯೋನ್ಮುಖ ಕಲಾವಿದರಿಗೆ ಸ್ಫೂರ್ತಿ ನೀಡುವ ಸಂಗತಿಯಾದರೆ, ಸಂಗೀತಾಸಕ್ತರಿಗೆ ರಸದೌತಣ ನೀಡುವ ಸಂದರ್ಭವಾಗಿದೆ.

‘ನರಸಿಂಹ ಮೂರ್ತಿ ಅವರು ಕರ್ನಾಟಕ ಸಂಗೀತದ ಹಿನ್ನೆಲೆಯವರು. ವಸುಧಾ ಶರ್ಮ ಹಿಂದೂಸ್ತಾನಿ ಹಿನ್ನೆಲೆಯವರು. ಈ ಕಾರಣಕ್ಕೆ ಎರಡೂ ಸಂಗೀತ ಪರಂಪರೆಗಳನ್ನು ಸಂಗೀತ ಶಾಲೆಯ ಮೂಲಕ ಯಶಸ್ವಿಯಾಗಿ ಮುಂದುವರೆಸಲು ಸಾಧ್ಯವಾಗಿದೆ’ ಎನ್ನುತ್ತಾರೆ ಸಂಗೀತ ಸಾಗರ ಸಂಸ್ಥೆಯ ವಿಜಯ ವಾಮನ್.

‘ನಮ್ಮಲ್ಲಿ 5 ವರ್ಷದ ಮಗುವಿನಿಂದ ಹಿಡಿದು 50 ವರ್ಷ ದಾಟಿದ ಮಹಿಳೆಯರೂ ಸಂಗೀತದ ಕಲಿಕೆಗೆ ಬರುತ್ತಾರೆ. ಆರಂಭದಲ್ಲೆ ಅವರಿಗೆ ಶಾಸ್ತ್ರೀಯ ಸಂಗೀತದ ಪರಿಚಯವನ್ನು ಕಟ್ಟುನಿಟ್ಟಾಗಿ ಮಾಡಿಕೊಡದೆ ಸಂಗೀತದಲ್ಲಿ ಆಸಕ್ತಿ ಬರುವ ರೀತಿಯಲ್ಲಿ ಕೆಲವು ಅಭ್ಯಾಸಗಳನ್ನು ಮಾಡಿಸಿ ಕ್ರಮೇಣ ಶಾಸ್ತ್ರೀಯ ಸಂಗೀತದತ್ತ ಹೊರಳುವಂತೆ ಮಾಡಲಾಗುತ್ತದೆ’ ಎನ್ನುತ್ತಾರೆ ವಿದ್ಯಾಲಯದ ಸಂಸ್ಥಾಪಕಿ ವಸುಧಾ ಶರ್ಮ.

ಸಂಗೀತದ ಕಲಿಕೆಗೆ ಹೆಚ್ಚಿನ ಸಮಯ ವಿನಿಯೋಗಿಸುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ತೊಂದರೆಯಾಗುತ್ತದೆ ಎನ್ನುವ ಮಾತನ್ನು ಈ ವಿದ್ಯಾಲಯದ ವಿದ್ಯಾರ್ಥಿಗಳು ಸುಳ್ಳು ಮಾಡಿದ್ದಾರೆ. ಸಂಗೀತ ಕಲಿಕೆಯಲ್ಲಿ ಉನ್ನತ ಸಾಧನೆ ಮಾಡುವ ಜೊತೆಗೆ ಶೈಕ್ಷಣಿಕವಾಗಿಯೂ ಪ್ರಗತಿ ಸಾಧಿಸಿ ಉನ್ನತ ಹುದ್ದೆಗಳಿಗೆ ತೆರಳಿರುವ ಹಲವರು ಇಲ್ಲಿದ್ದಾರೆ.

‘ಕ್ಯಾಸೆಟ್, ಸಿ.ಡಿ.ಗಳಲ್ಲಿ ಈಗಾಗಲೇ ಸಿದ್ಧಪಡಿಸಿರುವ ರಾಗಗಳಲ್ಲಿ ಹಾಡುವುದಕ್ಕೆ ನಮ್ಮ ವಿದ್ಯಾಲಯದಲ್ಲಿ ಒತ್ತು ನೀಡುವುದಿಲ್ಲ. ಇದೇ ಅಭ್ಯಾಸವಾದರೆ ಸ್ವಂತಿಕೆ ಎಂಬುದು ಇರುವುದಿಲ್ಲ. ಹೀಗಾಗಿ ಸ್ವತಃ ರಾಗ ಸಂಯೋಜನೆ ಮಾಡಲು ನಮ್ಮ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಪ್ರೇರಣೆ ನೀಡಲಾಗುತ್ತಿದೆ’ ಎಂದು ವಸುಧಾ ಶರ್ಮ ತಿಳಿಸುತ್ತಾರೆ. 

ಸಂಗೀತಕ್ಕೆ ಸಂಬಂಧಪಟ್ಟ ರಿಯಾಲಿಟಿ ಶೋಗಳು ದೃಶ್ಯ ಮಾಧ್ಯಮದ ವಿವಿಧ ವಾಹಿನಿಗಳಲ್ಲಿ ಸದ್ದು ಮಾಡುತ್ತಿರುವ ಕಾಲವಿದು. ಸದ್ಗುರು ವಿದ್ಯಾಲಯದಲ್ಲಿ ಕಲಿತವರು ಈ ಶೋಗಳಲ್ಲಿ ಹೆಸರು ಮಾಡಿದ್ದಾರೆ. ಆದರೆ ಎಲ್ಲರನ್ನೂ ಸಮಾನ ಭಾವದಿಂದ ನೋಡುವ, ಸಮಾನ ಅವಕಾಶ ಕಲ್ಪಿಸುವ ಪದ್ದತಿಯನ್ನು ವಿದ್ಯಾಲಯ ಅನುಸರಿಸಿಕೊಂಡು ಬಂದಿದೆ.

ಶಾಸ್ತ್ರೀಯ ಸಂಗೀತ ಎಲ್ಲಾ ಪ್ರಕಾರದ ಸಂಗೀತಗಳಿಗೆ ತಾಯಿ ಇದ್ದಂತೆ ಎಂಬ ಮಾತಿದೆ. ಈ ಪ್ರಕಾರದ ಕಲಾವಿದರಿಗೆ ನಾವೇ ಶ್ರೇಷ್ಠ ಎಂಬ ಭಾವನೆಯೂ ಇದೆ. ಆದರೆ ಅಂತಹ ಶ್ರೇಷ್ಠತೆಯ ವ್ಯಸನಕ್ಕೆ ಬೀಳದೆ ಸುಗಮ ಸಂಗೀತ, ಜಾನಪದಕ್ಕೂ ಒತ್ತು ನೀಡುತ್ತಿರುವುದು ಸದ್ಗುರು ಸಂಗೀತ ವಿದ್ಯಾಲಯದ ವೈಶಿಷ್ಟ್ಯತೆಯಾಗಿದೆ.

ಸಂಗೀತಕ್ಕೆ ಬದುಕಿನ ಎಲ್ಲಾ ಕಷ್ಟಗಳನ್ನು ಮರೆಸುವ ಶಕ್ತಿ ಇದೆ. ಸಾಗರದಲ್ಲಿ 25 ವರ್ಷಗಳಿಂದ ಸಂಗೀತ ಶಾಲೆ ಯಶಸ್ವಿಯಾಗಿ ನಡೆದಿದ್ದರೆ ಪ್ರತಿ ವರ್ಷದ ಸಂಗೀತೋತ್ಸವ ಅಚ್ಚುಕಟ್ಟಾಗಿ ನಡೆಯುತ್ತಿದ್ದರೆ ಅದಕ್ಕೆ ಸಾಗರದ ಜನತೆಯೇ ಕಾರಣ.
ವಸುಧಾ ಶರ್ಮ, ಗಾಯಕಿ
ರಾಷ್ಟ್ರ ರಾಜ್ಯದ ಕಲಾವಿದರ ಜತೆಗೆ ಸ್ಥಳೀಯ ಕಲಾವಿದರಿಗೂ ವೇದಿಕೆ ನೀಡುವುದು ಸದ್ಗುರು ಸಂಗೀತ ವಿದ್ಯಾಲಯದ ವಿಶೇಷತೆ. ಒಂದು ತಾಲ್ಲೂಕು ಕೇಂದ್ರದಲ್ಲಿ 25 ವರ್ಷಗಳ ಕಾಲ ಸಂಗೀತ ಶಾಲೆಯನ್ನು ಯಶಸ್ವಿಯಾಗಿ ನಡೆಸುವುದು ಸುಲಭದ ಮಾತಲ್ಲ.
ವಿಜಯ ವಾಮನ್, ರಂಗಕರ್ಮಿ
ಸದ್ಗುರು ಸಂಗೀತ ವಿದ್ಯಾಲಯ ಪ್ರದರ್ಶಿಸಿದ್ದ ಸಂಗೀತ ನಾಟಕದಲ್ಲಿ ಕಲಾವಿದರಾದ ವಿದ್ಯಾ ಹೆಗಡೆ ವಸುಧಾ ಶರ್ಮ (ಸಂಗ್ರಹ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.