
ಸಾಗರ: ಮಲೆನಾಡು ಪ್ರದೇಶ ಎದುರಿಸುತ್ತಿರುವ ಹಲವು ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದರೆ ಸಾಗರಕ್ಕೆ ಜಿಲ್ಲಾ ಕೇಂದ್ರದ ಮಾನ್ಯತೆ ನೀಡಬೇಕಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್ ಅಭಿಪ್ರಾಯಪಟ್ಟಿದ್ದಾರೆ.
ಸಾಗರ ಜಿಲ್ಲಾ ಕೇಂದ್ರವಾಗಬೇಕು ಎಂದು ನಡೆಯುತ್ತಿರುವ ಹೋರಾಟಕ್ಕೆ ಈ ಭಾಗದ ಮಹಿಳಾ ಸಂಘಟನೆಗಳ ಸಂಪೂರ್ಣ ಬೆಂಬಲವಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾಡಿಗೆ ಬೆಳಕು ನೀಡಲು ತಮ್ಮ ಬದುಕನ್ನೆ ತ್ಯಾಗ ಮಾಡಿದ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಇನ್ನೂ ಭೂಮಿಯ ಹಕ್ಕು ದೊರಕಿಲ್ಲ. ಅರಣ್ಯಭೂಮಿ ಹಕ್ಕು ಕಾಯ್ದೆ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಈ ಭಾಗವನ್ನು ಪೀಡಿಸುತ್ತಿರುವ ಮಂಗನ ಕಾಯಿಲೆಗೆ ಇನ್ನೂ ಔಷಧಿ ಕಂಡು ಹಿಡಿಯಲಾಗಿಲ್ಲ. ಇಂತಹ ಅನೇಕ ಸಮಸ್ಯೆಗಳ ಪರಿಹಾರಕ್ಕೆ ಸಾಗರ ಜಿಲ್ಲಾ ಕೇಂದ್ರವಾಗಬೇಕಿದೆ ಎಂದರು.
65 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯನ್ನು ಹೊಂದಿರುವ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಗೆ ನೀಡುತ್ತಿರುವ ಅನುದಾನಕ್ಕೂ ಉತ್ತರ ಕರ್ನಾಟಕಕ್ಕೂ ನೀಡುತ್ತಿರುವ ಅನುದಾನಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಮಲೆನಾಡಿನವರು ಮಲತಾಯಿ ಮಕ್ಕಳು ಎಂಬ ಭಾವನೆ ಬರುತ್ತಿದ್ದು, ಇದನ್ನು ತೊಡೆದು ಹಾಕಲು ಸರ್ಕಾರ ಜಿಲ್ಲಾ ಕೇಂದ್ರದ ಬೇಡಿಕೆಗೆ ಮನ್ನಣೆ ನೀಡಬೇಕು ಎಂದು ಒತ್ತಾಯಿಸಿದರು.
ಕಳೆದ ನಾಲ್ಕು ತಿಂಗಳಿನಿಂದ ಜಿಲ್ಲಾ ಕೇಂದ್ರಕ್ಕೆ ಒತ್ತಾಯಿಸಿ ಹೋರಾಟ ನಡೆಸುತ್ತಿರುವವರು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಗೆ ಕಾಯುತ್ತಿದ್ದಾರೆ. ಶಾಸಕ ಗೋಪಾಲಕೃಷ್ಣ ಬೇಳೂರು ಶೀಘ್ರವಾಗಿ ಅವರ ಭೇಟಿ ದಿನಾಂಕ ನಿಗದಿ ಪಡಿಸಬೇಕು ಎಂದು ಸಾಗರ ಜಿಲ್ಲಾ ಹೋರಾಟ ಸಮಿತಿ ಪ್ರಮುಖರಾದ ತೀ.ನ. ಶ್ರೀನಿವಾಸ್ ಆಗ್ರಹಿಸಿದರು.
ಪ್ರಮುಖರಾದ ನಂದಾ ಗೊಜನೂರು, ಪುಷ್ಪಾ ಮಲ್ಲಿಕಾರ್ಜುನ, ನಿರ್ಮಲಾ ಗಣೇಶ್, ಸುಂದರ್ ಸಿಂಗ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.