ADVERTISEMENT

ಬಾಗಿಲು ಮುಚ್ಚಿರುವ RTPCR ಲ್ಯಾಬ್ | ಯಂತ್ರಗಳು ಅತ್ಯಮೂಲ್ಯ.. ಆದರೆ ನಿರುಪಯುಕ್ತ!

ಎಂ.ರಾಘವೇಂದ್ರ
Published 8 ಜೂನ್ 2025, 6:04 IST
Last Updated 8 ಜೂನ್ 2025, 6:04 IST
<div class="paragraphs"><p>ಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿನ ಆರ್‌ಟಿಪಿಸಿಆರ್ ಪ್ರಯೋಗಾಲಯವು ಸಿಬ್ಬಂದಿ ಇಲ್ಲದ ಕಾರಣ ಬಾಗಿಲು ಮುಚ್ಚಿರುವುದು</p></div>

ಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿನ ಆರ್‌ಟಿಪಿಸಿಆರ್ ಪ್ರಯೋಗಾಲಯವು ಸಿಬ್ಬಂದಿ ಇಲ್ಲದ ಕಾರಣ ಬಾಗಿಲು ಮುಚ್ಚಿರುವುದು

   

ಸಾಗರ: ಸಿಬ್ಬಂದಿಯೇ ಇಲ್ಲದ ಕಾರಣ ಇಲ್ಲಿನ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿರುವ ಆರ್‌ಟಿಪಿಸಿಆರ್‌ (ರಿವರ್ಸ್ ಟ್ರಾನ್ಸ್‌ಕ್ರಿಪ್ಷನ್ ಪಾಲಿಮರ್ಸ್ ಚೈನ್ ರಿಯಾಕ್ಷನ್) ಪ್ರಯೋಗಾಲಯ ಕಳೆದ ಎರಡು ವರ್ಷಕ್ಕೂ ಹೆಚ್ಚು ಕಾಲದಿಂದ ಬಾಗಿಲು ಮುಚ್ಚಿದೆ.  

ಕೋವಿಡ್, ಮಂಗನ ಕಾಯಿಲೆಯಂತಹ ರೋಗಗಳ ಸೋಂಕನ್ನು ಶೀಘ್ರವಾಗಿ ಪತ್ತೆ ಹಚ್ಚುವಲ್ಲಿ ಆರ್‌ಟಿಪಿಸಿಆರ್ ಲ್ಯಾಬ್ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿಕ್ರಿಯೆಯ ವೈರಸ್ ಅಥವಾ ಬ್ಯಾಕ್ಟೀರಿಯಾಗಳನ್ನು ಒಳಗೊಂಡಿರುವ ರೋಗ, ನಿರ್ದಿಷ್ಟ ಆನುವಂಶಿಕ ವಸ್ತುಗಳ ಪತ್ತೆ   ಈ ಪ್ರಯೋಗಾಲಯ ಸ್ಥಾಪನೆಯ ಹಿಂದಿನ ಉದ್ದೇಶವಾಗಿದೆ. 

ADVERTISEMENT

ಜಿಲ್ಲೆಯಲ್ಲಿ ಶಿವಮೊಗ್ಗ ಹೊರತುಪಡಿಸಿದರೆ ಈ ಪ್ರಯೋಗಾಲಯ ಇರುವುದು ಸಾಗರದಲ್ಲಿ ಮಾತ್ರ. 2022ನೇ ಸಾಲಿನ ಅಕ್ಟೋಬರ್‌ನಲ್ಲಿ ₹ 1 ಕೋಟಿ ವೆಚ್ಚದಲ್ಲಿ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಆರ್‌ಟಿಪಿಸಿಆರ್ ಪ್ರಯೋಗಾಲಯ ಕಾರ್ಯಾರಂಭ ಮಾಡಿತ್ತು. 

ಆರಂಭದಲ್ಲಿ ಇಬ್ಬರು ಲ್ಯಾಬ್ ಟೆಕ್ನಿಷಿಯನ್, ಒಬ್ಬ ಮೈಕ್ರೋ ಬಯೋಲಾಜಿಸ್ಟ್, ಒಬ್ಬ ಡಾಟಾ ಎಂಟ್ರಿ ಆಪರೇಟರ್, ಇಬ್ಬರು ‘ಡಿ’ ಗ್ರೂಪ್ ನೌಕರರನ್ನು ಹೊರಗುತ್ತಿಗೆ ಆಧಾರದ ಮೇಲೆ ಪ್ರಯೋಗಾಲಯಕ್ಕೆ ನೇಮಕ ಮಾಡಲಾಗಿತ್ತು. ಇವರೆಲ್ಲರೂ ತರಬೇತಿ ಪಡೆದವರೇ ಆಗಿದ್ದರು. 

ಪ್ರಯೋಗಾಲಯ ಆರಂಭಗೊಂಡು ಒಂದು ವರ್ಷ ಕಳೆದ ನಂತರ ಸಿಬ್ಬಂದಿಯ ಗುತ್ತಿಗೆಯನ್ನು ಸರ್ಕಾರ ನವೀಕರಿಸಲಿಲ್ಲ. ಒಂದು ವರ್ಷ ಅವಧಿ ಮುಗಿದ ನಂತರ ಒಂದು ತಿಂಗಳ ಅವಧಿಗೆ ಮಾತ್ರ ಗುತ್ತಿಗೆ ವಿಸ್ತರಿಸಿದ್ದರಿಂದ ಉದ್ಯೋಗ ಅಭದ್ರತೆಯ ಭೀತಿಯಿಂದ ಎಲ್ಲ ಸಿಬ್ಬಂದಿ ಇಲ್ಲಿ ಕೆಲಸ ಮಾಡಲು ನಿರಾಕರಿಸಿ ಬೇರೆಡೆಗೆ ತೆರಳಿದ್ದಾರೆ.

‘ಆರ್‌ಟಿಪಿಸಿಆರ್ ಪ್ರಯೋಗಾಲಯದಲ್ಲಿ ಬೆಲೆಬಾಳುವ ಯಂತ್ರಗಳಿವೆ. ಅವುಗಳನ್ನು ಸುಸ್ಥಿತಿಯಲ್ಲಿಡಬೇಕು ಎಂಬ ಕಾರಣಕ್ಕೆ ಆಸ್ಪತ್ರೆಯ ಬೇರೆ ಪ್ರಯೋಗಾಲಯದ ಸಿಬ್ಬಂದಿ ನೆರವಿನಿಂದ ಪ್ರತಿದಿನ ಯಂತ್ರಗಳಿಗೆ ಚಾಲನೆ ನೀಡಿ ಮತ್ತೆ ಮುಚ್ಚಿಡಲಾಗುತ್ತಿದೆ’ ಎನ್ನುತ್ತಾರೆ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಕೆ.ಪರಪ್ಪ.

ಆರ್‌ಟಿಪಿಸಿಆರ್ ಪ್ರಯೋಗಾಲಯ ಇಲ್ಲಿಯೇ ಇದ್ದರೆ ಕೋವಿಡ್‌ನಂತಹ ಕಾಯಿಲೆಗೆ ಇಲ್ಲಿಯೇ ಪರೀಕ್ಷೆ ನಡೆಸಿ ಫಲಿತಾಂಶವನ್ನು ಒಂದೆರಡು ಗಂಟೆಯೊಳಗೆ ಪಡೆಯಬಹುದಿತ್ತು. ಆದರೆ ಈಗ ಪ್ರಯೋಗಾಲಯ ಮುಚ್ಚಿರುವುದರಿಂದ ಈ ಪರೀಕ್ಷೆಗೆ ಮಾದರಿಗಳನ್ನು ಶಿವಮೊಗ್ಗದ ಆಸ್ಪತ್ರೆಗೆ ಕಳುಹಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. 

ನೂರು ಹಾಸಿಗೆಗಳ ಸಾಮರ್ಥ್ಯದ ಇಲ್ಲಿನ ಸರ್ಕಾರಿ ಆಸ್ಪತ್ರೆಯನ್ನು 150 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಪರಿವರ್ತಿಸಬೇಕು ಎಂಬ ಪ್ರಯತ್ನ ಹಲವು ವರ್ಷಗಳಿಂದ ನಡೆದಿದೆ. ಕಾಗೋಡು ತಿಮ್ಮಪ್ಪ ಅವರು ಸಚಿವರಾಗಿದ್ದಾಗಲೇ ಈ ಸಂಬಂಧ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಗೋಪಾಲಕೃಷ್ಣ ಬೇಳೂರು ಶಾಸಕರಾದ ನಂತರ ಆಸ್ಪತ್ರೆಯನ್ನು ಉನ್ನತ ದರ್ಜೆಗೆ ಏರಿಸಲು ಪುನಃ ಪ್ರಸ್ತಾವ ಕಳುಹಿಸಲಾಗಿದೆ.

‘ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಪಕ್ಕದ ಸೊರಬ, ಹೊಸನಗರ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕುಗಳಿಂದಲೂ ರೋಗಿಗಳು ಬರುತ್ತಾರೆ. ಪ್ರತಿದಿನ ಸರಾಸರಿ 800ರಿಂದ 1,200 ರೋಗಿಗಳು ಆರೋಗ್ಯ ತಪಾಸಣೆಗೆ ಬರುತ್ತಾರೆ. ಈಗಿರುವ ದಾದಿಯರ ಸಂಖ್ಯೆ ಸಾಕಾಗುತ್ತಿಲ್ಲ. ಆಸ್ಪತ್ರೆ ಉನ್ನತ ದರ್ಜೆಗೆ ಏರಿದರೆ ಪರಿಸ್ಥಿತಿ ಉತ್ತಮಗೊಳ್ಳುತ್ತದೆ’ ಎನ್ನುತ್ತಾರೆ ಡಾ.ಕೆ.ಪರಪ್ಪ.

ಆರ್‌ಟಿಪಿಸಿಆರ್ ಪ್ರಯೋಗಾಲಯದ ಬಾಗಿಲು ಮುಚ್ಚಿರುವುದಕ್ಕೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದಷ್ಟು ಶೀಘ್ರವಾಗಿ ಅಗತ್ಯವಿರುವ ಸಿಬ್ಬಂದಿಯನ್ನು ಪುನರ್ ನೇಮಕ ಮಾಡುವ ಮೂಲಕ ಪ್ರಯೋಗಾಲಯ ಮತ್ತೆ ಕಾರ್ಯಾರಂಭಗೊಳ್ಳುವಂತೆ ಮಾಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಆರ್‌ಟಿಪಿಸಿಆರ್ ಲ್ಯಾಬ್‌ನ ಎಲ್ಲಾ ಯಂತ್ರಗಳು ಸುಸ್ಥಿತಿಯಲ್ಲಿವೆ. ತರಬೇತಿ ಪಡೆದ ಸಿಬ್ಬಂದಿ ವರ್ಗದವರನ್ನು ನೇಮಕ ಮಾಡಿದರೆ ಲ್ಯಾಬ್ ಪುನರಾರಂಭಿಸಲು ಯಾವುದೇ ತೊಂದರೆ ಇಲ್ಲ 
ಡಾ.ಕೆ.ಪರಪ್ಪ, ಆಡಳಿತಾಧಿಕಾರಿ, ಉಪವಿಭಾಗೀಯ ಸರ್ಕಾರಿ ಆಸ್ಪತ್ರೆ, ಸಾಗರ
ಸಿಬ್ಬಂದಿ ಇಲ್ಲ ಎನ್ನುವ ಕಾರಣಕ್ಕೆ ಸರ್ಕಾರಿ ಆಸ್ಪತ್ರೆಯ ಒಂದು ಪ್ರಮುಖ ಪ್ರಯೋಗಾಲಯ ಬಾಗಿಲು ಮುಚ್ಚಿರುವುದು ಬೇಸರದ ಸಂಗತಿ. ಸಿಬ್ಬಂದಿ ನೇಮಕ ವಿಚಾರದಲ್ಲಿ ಜನಪ್ರತಿನಿಧಿಯಾದವರು ಆಸಕ್ತಿ ತೋರಬೇಕು 
ಡಾ.ರಾಜನಂದಿನಿ ಕಾಗೋಡು ಗೌರವಾಧ್ಯಕ್ಷರು, ರೋಟರಿ ರಕ್ತನಿಧಿ ಕೇಂದ್ರ, ಸಾಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.