ADVERTISEMENT

ಸುವರ್ಣ ಮಹೋತ್ಸವ ಸಂಭ್ರಮದ ಹೊಸ್ತಿಲಲ್ಲಿ ಸಾಗರ ಪದವಿಪೂರ್ವ ಕಾಲೇಜು

ಎಂ.ರಾಘವೇಂದ್ರ
Published 23 ಡಿಸೆಂಬರ್ 2025, 5:11 IST
Last Updated 23 ಡಿಸೆಂಬರ್ 2025, 5:11 IST
ಸುವರ್ಣ ಮಹೋತ್ಸವ ಆಚರಣೆ ಸಂಭ್ರಮದಲ್ಲಿರುವ ಸಾಗರದ ಸರ್ಕಾರಿ ಪದವಿಪೂರ್ವ ಕಾಲೇಜು
ಸುವರ್ಣ ಮಹೋತ್ಸವ ಆಚರಣೆ ಸಂಭ್ರಮದಲ್ಲಿರುವ ಸಾಗರದ ಸರ್ಕಾರಿ ಪದವಿಪೂರ್ವ ಕಾಲೇಜು   

ಸಾಗರ: ನಗರದ ಹೃದಯ ಭಾಗವಾಗಿರುವ ನೆಹರೂ ಮೈದಾನದಲ್ಲಿ 70ರ ದಶಕದ ಆರಂಭದಲ್ಲಿ ಪ್ರಾರಂಭಗೊಂಡ ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು ಈಗ ಸುವರ್ಣ ಮಹೋತ್ಸವ ಆಚರಣೆಯ ಸಂಭ್ರಮದಲ್ಲಿದೆ. ಡಿ. 23,24 ರಂದು ಇದರ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಸಿದ್ದತೆಗಳು ಭರದಿಂದ ಸಾಗಿವೆ.

ಸಾಮಾನ್ಯವಾಗಿ ಸರ್ಕಾರಿ ಕಾಲೇಜು ಎಂದರೆ ಅಲ್ಲಿಗೆ ತಮ್ಮ ಮಕ್ಕಳನ್ನು ಸೇರಿಸಲು ಪೋಷಕರು ಹಿಂದೇಟು ಹಾಕುವ ಸನ್ನಿವೇಶವಿರುತ್ತದೆ. ಆದರೆ ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು ಈ ಮಾತಿಗೆ ಅಪವಾದದಂತಿದೆ.

ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ತಮ್ಮ ಮಕ್ಕಳನ್ನು ಸೇರಿಸಲು ಪೋಷಕರು ತುದಿಗಾಲ ಮೇಲೆ ನಿಂತಿರುತ್ತಾರೆ. ಇಲ್ಲಿನ ಶೈಕ್ಷಣಿಕ ಗುಣಮಟ್ಟ ಅತ್ಯುತ್ತಮವಾಗಿರುವುದೆ ಇದಕ್ಕೆ ಕಾರಣವಾಗಿದೆ.

ADVERTISEMENT

ಪ್ರಸ್ತುತ ಇಲ್ಲಿನ ಕಾಲೇಜಿನ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದಲ್ಲಿ 2526 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅದರಲ್ಲೂ ಈ ಕಾಲೇಜಿನ ವಿಜ್ಞಾನ ವಿಭಾಗಕ್ಕೆ ಪ್ರವೇಶ ಪಡೆಯಲು ಪ್ರತಿವರ್ಷ ಹೆಚ್ಚಿನ ಪೈಪೋಟಿ ಇರುತ್ತದೆ.

2002–03 ನೇ ಸಾಲಿನಲ್ಲಿ ಈ ಕಾಲೇಜಿನ ವಿದ್ಯಾರ್ಥಿನಿ ರಶ್ಮಿ ಕೆ.ವಿ. ಸಿಇಟಿ ಪರೀಕ್ಷೆಯಲ್ಲಿ 4ನೇ ರ‍್ಯಾಂಕ್‌ ಗಳಿಸಿದ್ದರೆ, 2006–07ನೇ ಸಾಲಿನಲ್ಲಿ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿಯಲ್ಲಿ ಇಲ್ಲಿನ ವಿದ್ಯಾರ್ಥಿನಿ ರಮ್ಯಾ ಕೆ.ವಿ. ಪ್ರಥಮ ರ‍್ಯಾಂಕ್‌ ಗಳಿಸುವ ಮೂಲಕ ರಾಜ್ಯದ ಗಮನ ಸೆಳೆದಿದ್ದರು.

2019–20ನೇ ಸಾಲಿನಲ್ಲಿ ಈ ಕಾಲೇಜಿನ ವಿದ್ಯಾರ್ಥಿನಿ ಅಖಿಲ ಯು.ಹೆಗಡೆ ವಿಜ್ಞಾನ ವಿಭಾಗದಲ್ಲಿ 3ನೇ ರ‍್ಯಾಂಕ್‌ ಪಡೆದಿದ್ದರೆ, ಅದೇ ಸಾಲಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಸಿಂಧೂ ಬಿ.ಎಂ. ಕೂಡ 3ನೇ ರ‍್ಯಾಂಕ್‌ ಗಳಿಸಿದ್ದು ಈ ಕಾಲೇಜಿನ ಸಾಧನೆಯಾಗಿದೆ.

40 ಕೊಠಡಿಗಳಿರುವ ಈ ಕಾಲೇಜಿನಲ್ಲಿ ನಾಲ್ಕು ಪ್ರಯೋಗಾಲಯ, ನಾಲ್ಕು ಸ್ಮಾರ್ಟ್ ಕ್ಲಾಸ್ ತರಗತಿಗಳು ಇವೆ. ಪ್ರತಿವರ್ಷ ಉತ್ತಮ ಫಲಿತಾಂಶ ಬರುವ ಕಾರಣಕ್ಕೆ ಅಕ್ಕಪಕ್ಕದ ಜಿಲ್ಲೆಗಳ ಪೋಷಕರು ಕೂಡ ತಮ್ಮ ಮಕ್ಕಳನ್ನು ಈ ಕಾಲೇಜಿಗೆ ಸೇರಿಸಲು ಮುಂದಾಗುತ್ತಿದ್ದಾರೆ.

‘ಕಾಲೇಜಿನಲ್ಲಿ ಎಲ್ಲಾ ವ್ಯವಸ್ಥೆಗಳು ಸುಸಜ್ಜಿತವಾಗಿದ್ದರೂ ಸಾಂಸ್ಕೃತಿಕ, ಸಭಾ ಕಾರ್ಯಕ್ರಮ ನಡೆಸಲು ಒಂದು ಸಭಾಭವನದ ಕೊರತೆಯಿದೆ. ಇದನ್ನು ನೀಗಿಸುವತ್ತ ಸರ್ಕಾರ ಗಮನ ಹರಿಸಬೇಕು’ ಎನ್ನುತ್ತಾರೆ ಕಾಲೇಜಿನ ಪ್ರಾಂಶುಪಾಲ ಸತ್ಯನಾರಾಯಣ ಕೆ.ಸಿ.

ಕಾಲೇಜು ವಿಭಾಗದ ವಿದ್ಯಾರ್ಥಿಗಳ ಸಂಖ್ಯೆ 2 ಸಾವಿರ ದಾಟಿರುವುದರಿಂದ ಪ್ರೌಢಶಾಲೆ ವಿಭಾಗವನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಿದರೆ ಸೂಕ್ತ ಎಂಬ ಅಭಿಪ್ರಾಯ ಕೂಡ ಪೋಷಕರಲ್ಲಿದೆ.

53 ವರ್ಷಗಳಲ್ಲಿ ಈ ಕಾಲೇಜಿನಲ್ಲಿ ಓದಿರುವ ಸಹಸ್ರಾರು ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಗಮನ ಸೆಳೆಯುವ ಸಾಧನೆ ಮಾಡಿದ್ದಾರೆ. ಇಂತಹ ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ನಡೆಸಲು ಕಾಲೇಜಿನ ಸಮಿತಿ ಮುಂದಾಗಿದೆ.

ಡಿ.23 ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಸಂಸದ ಬಿ.ವೈ.ರಾಘವೇಂದ್ರ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದು, ಶಾಸಕ ಗೋಪಾಲಕೃಷ್ಣ ಬೇಳೂರು ಅಧ್ಯಕ್ಷತೆ ವಹಿಸಲಿದ್ದಾರೆ. ನಂತರ ಸಂಜೆಯವರೆಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಡಿ.24 ರಂದು ಬೆಳಿಗ್ಗೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ಆಯೋಜಿಸಲಾಗಿದ್ದು, ಕಾಲೇಜಿನ ಬೆಳವಣಿಗೆಗೆ ಶ್ರಮಿಸಿದವರನ್ನು ಸನ್ಮಾನಿಸಲಾಗುತ್ತಿದೆ. ಅಂದು ಸಂಜೆ 6ಕ್ಕೆ ಹಿನ್ನಲೆ ಗಾಯಕ ರಾಜೇಶ್ ಕೃಷ್ಣನ್ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಮಲೆನಾಡು ಪ್ರದೇಶದಲ್ಲಿ ಅತ್ಯುತ್ತಮ ಪದವಿಪೂರ್ವ ಕಾಲೇಜು ಎಂಬ ಹೆಗ್ಗಳಿಕೆಯನ್ನು ಸಾಗರದ ಸರ್ಕಾರಿ ಕಾಲೇಜು ಹೊಂದಿದೆ. ಯಾವ ಖಾಸಗಿ ಕಾಲೇಜಿಗೂ ಕಡಿಮೆ ಇಲ್ಲದಂತೆ ಇಲ್ಲಿ ಗುಣಮಟ್ಟದ ಶಿಕ್ಷಣ ದೊರಕುತ್ತಿದೆ. ಈ ಕಾಲೇಜಿನ ಸುವರ್ಣ ಮಹೋತ್ಸವ ಆಚರಣೆಯನ್ನು ಸಂಭ್ರಮದಿಂದ ನಡೆಸಲು ತೀರ್ಮಾನಿಸಲಾಗಿದೆ.
ಗೋಪಾಲಕೃಷ್ಣ ಬೇಳೂರು ಶಾಸಕರು
ನಮ್ಮ ಕಾಲೇಜು 50 ವರ್ಷಗಳ ಅವಧಿಯನ್ನು ದಾಟಿರುವ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳನ್ನು ಒಳಗೊಂಡಂತೆ ಅರ್ಥಪೂರ್ಣವಾಗಿ ಸುವರ್ಣ ಮಹೋತ್ಸವವನ್ನು ಆಚರಿಸಲಾಗುತ್ತಿದೆ.
ಸತ್ಯನಾರಾಯಣ ಕೆ.ಸಿ. ಪ್ರಾಂಶುಪಾಲರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.