ADVERTISEMENT

ಸಾಗರ| ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಸರ್ಕಾರದ ಕರ್ತವ್ಯ: ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 6:17 IST
Last Updated 26 ಜನವರಿ 2026, 6:17 IST
ಸಾಗರ ತಾಲ್ಲೂಕಿನ ತಾಳಗುಪ್ಪ ಗ್ರಾಮದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ತಾಳಗುಪ್ಪ ಹೋಬಳಿಯ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು
ಸಾಗರ ತಾಲ್ಲೂಕಿನ ತಾಳಗುಪ್ಪ ಗ್ರಾಮದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ತಾಳಗುಪ್ಪ ಹೋಬಳಿಯ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು   

ಸಾಗರ: ಪ್ರತಿ ಗ್ರಾಮಕ್ಕೂ ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ತಾಳಗುಪ್ಪ ಹೋಬಳಿಯ ಗ್ರಾಮಗಳಿಗೆ ನೀರು ಪೂರೈಸುವ ವಿಷಯದಲ್ಲಿ ರಾಜ್ಯ ಸರ್ಕಾರ ತನ್ನ ಬದ್ಧತೆ ಪ್ರದರ್ಶಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ತಾಲ್ಲೂಕಿನ ತಾಳಗುಪ್ಪ ಗ್ರಾಮದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಶರಾವತಿ ನದಿ ಹಿನ್ನೀರಿನಿಂದ ತಾಳಗುಪ್ಪ ಹೋಬಳಿಯ 28 ಗ್ರಾಮ, 105 ಮಜರೆ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಶರಾವತಿ ನದಿಯ ಹಿನ್ನೀರಿನಿಂದ ಸಾಗರ ನಗರಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆ ಚಾಲನೆಗೊಂಡ ನಂತರ ಈ ಮಾರ್ಗ ಮಧ್ಯದ ಗ್ರಾಮಗಳಿಗೂ ನೀರು ಪೂರೈಸಬೇಕು ಎಂದು ಒತ್ತಾಯಿಸಿ 2010ರಲ್ಲಿ ತಾಳಗುಪ್ಪದಿಂದ ಸಾಗರದವರೆಗೆ ನಡೆದ ಪಾದಯಾತ್ರೆಯಲ್ಲಿ ನಾನು ಪಾಲ್ಗೊಂಡಿದ್ದೆ. ಈಗ ಆ ಯೋಜನೆಯನ್ನು ಸಚಿವನಾಗಿ ಉದ್ಘಾಟಿಸುತ್ತಿರುವುದು ಸಂತಸ ತಂದಿದೆ’ ಎಂದರು.

ADVERTISEMENT

ರಾಜ್ಯದಾದ್ಯಂತ 900 ಕರ್ನಾಟಕ ಪಬ್ಲಿಕ್ ಶಾಲೆಗಳ ಆರಂಭಕ್ಕೆ ಅನುಮೋದನೆ ದೊರಕಿದ್ದು ಮುಂದಿನ ತಿಂಗಳು ಶಿವಮೊಗ್ಗದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಗುವುದು. ಈ ಶಾಲೆಗಳ ಆರಂಭದಿಂದ ಈಗಿರುವ ಸರ್ಕಾರಿ ಶಾಲೆಗಳ ಅಸ್ತಿತ್ವಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಯೋಜನೆ ಕಾರ್ಯಗತಗೊಳ್ಳಲು ಶ್ರಮಿಸಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಸನ್ಮಾನಿಸಲಾಯಿತು. ಉಪವಿಭಾಗಾಧಿಕಾರಿ ವೀರೇಶ್ ಕುಮಾರ್, ತಹಶೀಲ್ದಾರ್ ರಶ್ಮಿ ಹಾಲೇಶ್, ಎಎಸ್‌ಪಿ ಬೆನಕ ಪ್ರಸಾದ್, ಪ್ರಮುಖರಾದ ಮಂಡಗಳಲೆ ಹುಚ್ಚಪ್ಪ, ಎಚ್.ಎನ್.ದಿವಾಕರ್, ಹೊಳಿಯಪ್ಪ, ಅಣ್ಣಪ್ಪ, ಅನಿಲ್ ಗೌಡ್ರು, ಶಿವಮೂರ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.