ಸಾಗರ: ಇಲ್ಲಿನ ಜೀವನ್ಮುಖಿ ಸಂಸ್ಥೆ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ 16ನೇ ‘ಅವ್ವ’ ಮಹಿಳಾ ಸಂತೆಯಲ್ಲಿ ಮಹಿಳೆಯರೇ ಉತ್ಪಾದಿಸಿದ ದೇಸಿ ಸೊಗಡಿನ ಆಹಾರ ಪದಾರ್ಥಗಳು, ಕರಕುಶಲ ವಸ್ತುಗಳು, ಕೈಮಗ್ಗ ನೇಕಾರಿಕೆಯ ಬಟ್ಟೆಗಳು, ಮಳೆಯಾಶ್ರಿತ ಸಣ್ಣ ರೈತರ ಸಾವಯವ ಉತ್ಪನ್ನಗಳು ಸಾರ್ವಜನಿಕರ ಗಮನ ಸೆಳೆಯಿತು.
ಉದ್ಯಮಿ ಅರ್ಚನಾ ಅವರು ಸಿದ್ದಪಡಿಸಿದ್ದ ತಟ್ಟೆ ಇಡ್ಲಿ, ಹಲಸಿನ ಹಣ್ಣಿನ ಹೋಳಿಗೆ, ಹಲಸಿನ ಬೀಜದ ನಿಪ್ಪಟ್ಟು, ಕಾಯಿ ಒಡೆ, ವೀಣಾ ನಾಯಕ್ ಅವರು ತಯಾರಿಸಿದ ಹಲಸಿನ ಎಲೆಯ ಕೊಟ್ಟೆ ಕಡುಬು, ಅರಿಶಿಣ ಎಲೆಯ ಪತೋಳಿಯ ರುಚಿಯನ್ನು ಜನರು ಸವಿದರು.
ಮಂಜುಳಾ ಅವರು ತಯಾರಿಸಿದ್ದ ಅತ್ತಿ ಚಕ್ಕೆ ಕಷಾಯ, ಹಿಟ್ಟಿನ ಉಂಡೆ, ಶೋಭಾ ಅವರು ಸಿದ್ದಪಡಿಸಿದ್ದ ಹಾಲುಗರಿಗೆ, ಜ್ಯೋತಿ ಡಿ.ಕೆ. ಅವರು ತಯಾರಿಸಿದ್ದ ಸಿಹಿ, ಖಾರದ ಕೆಸವಿನ ಎಲೆಯ ಪತ್ರೊಡೆ, ಮಮತಾ ಜೈನ್ ಸಿದ್ದಪಡಿಸಿದ್ದ ಪುರಿ ಉಂಡೆ, ಸರಣ್ಯ ಅವರು ತಯಾರಿಸಿದ್ದ ನುಂಗೈ ಸೊಪ್ಪಿನ ಸೂಪ್, ಚಿಟ್ಟಿನಾಡು ಶೈಲಿಯ ಪಡ್ಡು ಸೇರಿದಂತೆ ವಿವಿಧ ತಿಂಡಿ ತಿನಿಸುಗಳಿಗೆ ಹೆಚ್ಚಿನ ಬೇಡಿಕೆ ಕಂಡು ಬಂದಿತು.
ರಾಜೇಶ್ವರಿ ಕೊಡಗು ಅವರು ಜೇಡಿ ಮಣ್ಣಿನಿಂದ ತಯಾರಿಸಿದ ಟೆರ್ರಾಕೋಟಾ ಆಭರಣ, ಯಲ್ಲಾಪುರದ ಅಶ್ವಿನಿಭಟ್ ಅವರ ರಾಸಾಯನಿಕಮುಕ್ತ ಸೌಂದರ್ಯವರ್ಧಕ ಸಾಮಾಗ್ರಿ, ಗ್ರಾಮೀಣ ಉದ್ಯಮಿ ಸೌದಾಮಿನಿ ಅವರು ತಯಾರಿಸಿದ ವಿವಿಧ ಉಪ್ಪಿನಕಾಯಿ, ಹಲಸಿನ ಹಣ್ಣಿನ ಕೇಕ್, ಶಿರಸಿಯ ತೇಜಸ್ವಿನಿ ಸಿದ್ದಪಡಿಸಿದ್ದ ಹಲಸಿನ ಹಪ್ಪಳ, ಚರಕ ಸಂಸ್ಥೆಯ ಕೈಮಗ್ಗ ನೇಕಾರಿಕೆಯ ಬಟ್ಟೆಗಳು ಸಂತೆಯ ಮೆರುಗನ್ನು ಹೆಚ್ಚಿಸಿದ್ದವು.
ವಿಜಯನಗರ ಜಿಲ್ಲೆಯ ಕೊಟ್ಟೂರಿನಿಂದ ಆಗಮಿಸಿದ್ದ ಮಳೆಯಾಶ್ರಿತ ಸಣ್ಣ ರೈತರ ಸಾವಯವ ಉತ್ಪನ್ನಗಳನ್ನು ಸಿದ್ದಪಡಿಸುವ ಇಕ್ರಾ ಸಂಸ್ಥೆಯ ಉತ್ಪನ್ನಗಳಿಗೂ ಹೆಚ್ಚಿನ ಬೇಡಿಕೆ ಕಂಡು ಬಂದಿತ್ತು.
‘ಗ್ರಾಮೀಣ ಭಾಗದಲ್ಲಿ ಹಾಗೂ ನಗರ ಪ್ರದೇಶದ ಹೊರ ವಲಯಗಳಲ್ಲಿ ಮಹಿಳೆಯರು ಸಿದ್ದಪಡಿಸುವ ಆಹಾರ ಹಾಗೂ ಕರಕುಶಲ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ದೃಷ್ಟಿಯಿಂದ ನಮ್ಮ ಸಂಸ್ಥೆ ಇಂತಹ ಸಂತೆಯನ್ನು ಆಯೋಜಿಸುತ್ತಿದೆ. ಈ ಬಾರಿ ಸಾರ್ವಜನಿಕರಿಂದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ದೊರಕಿದೆ’ ಎಂದು ಜೀವನ್ಮುಖಿ ಸಂಸ್ಥೆಯ ಎಚ್.ಎಸ್. ರೋಹಿಣಿ ತಿಳಿಸಿದ್ದಾರೆ.
ಜೀವನ್ಮುಖಿ ಸಂಸ್ಥೆಯ ಮಮತಾ ಜೈನ್, ಸೌಮ್ಯ ಎಸ್. ಪದ್ಮಶ್ರೀ, ಎಂ.ವಿ.ಪ್ರತಿಭಾ, ಮಹಾಲಕ್ಷ್ಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.