ಸಾಗರ: ನಗರದ ವಿವಿಧ ಬಡಾವಣೆಗಳಲ್ಲಿ ಎಲ್ಲೆಂದರಲ್ಲಿ ರಸ್ತೆಯ ಪಕ್ಕದಲ್ಲಿ ಕಸವನ್ನು ಎಸೆಯುವ ಪ್ರವೃತ್ತಿ ಹೆಚ್ಚುತ್ತಿರುವುದು ಸ್ಥಳೀಯ ಆಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿದೆ.
ನಗರಸಭೆಯಿಂದ ವಾಹನಗಳ ಮೂಲಕ ನಿಯಮಿತವಾಗಿ ಕಸದ ಸಂಗ್ರಹಣೆ ಕಾರ್ಯವೇನೋ ನಡೆಯುತ್ತಿದೆ. ಆದಾಗ್ಯೂ ಕೆಲವರು ರಾತ್ರಿ ಹಾಗೂ ಬೆಳಗಿನ ಜಾವದ ವೇಳೆಯಲ್ಲಿ ವಾಹನಗಳಲ್ಲಿ ರಾಶಿರಾಶಿ ಕಸವನ್ನು ತಂದು ಸುರಿಯುತ್ತಿರುವುದರಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ.
ನಗರದ ಹೃದಯ ಭಾಗದಲ್ಲಿರುವ ವಿವಿಧ ವೃತ್ತಗಳಲ್ಲಿ ಸುರಕ್ಷತೆ ಹಾಗೂ ಕಸ ಸುರಿಯುವುದನ್ನು ತಡೆಗಟ್ಟುವ ದೃಷ್ಟಿಯಿಂದ 24 ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ನಗರದ ಹೊರ ವಲಯದಲ್ಲಿ 9 ಕಡೆ ಕಸ ಸುರಿದರೆ ದಂಡ ವಿಧಿಸಲಾಗುವುದು ಎಂಬ ಎಚ್ಚರಿಕೆಯ ಫಲಕದೊಂದಿಗೆ ಸಿ.ಸಿ.ಟಿ.ವಿ ಕ್ಯಾಮೆರಾದ ಕಣ್ಗಾವಲು ಇದೆ ಎಂದು ತಿಳಿಸಲಾಗಿದೆ.
ಆದರೆ ಹೀಗೆ ತಿಳಿಸಲಾಗಿರುವ ಫಲಕಗಳ ಬಳಿ ಕೆಲವಡೆ ಸಿ.ಸಿ.ಟಿ.ವಿ ಕ್ಯಾಮೆರಾವನ್ನೇ ಅಳವಡಿಸಿಲ್ಲ. ನಗರದ ಹೃದಯ ಭಾಗದ ವೃತ್ತಗಳಲ್ಲಿ ಅಳವಡಿಸಿದ್ದ ಕ್ಯಾಮೆರಾ ಬಹುತೇಕ ಕಡೆ ಕೆಟ್ಟು ಕೂತಿದೆ. ಇದರಿಂದ ಕಸ ಎಸೆಯುವವರಿಗೆ ತಡೆ ಇಲ್ಲವಾಗಿದೆ.
ಹೀಗೆ ರಸ್ತೆಯ ಪಕ್ಕದಲ್ಲಿ, ಖಾಲಿ ನಿವೇಶನಗಳಲ್ಲಿ ಕಸ ಎಸೆಯುವ ಪ್ರವೃತ್ತಿ ಕೇವಲ ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಸಿಗಂದೂರು, ಜೋಗ ಮೊದಲಾದ ಪ್ರವಾಸಿ ಕೇಂದ್ರಗಳಿಗೆ ಬರುವ ಪ್ರವಾಸಿಗರ ಅಪಾರ ಪ್ರಮಾಣದಲ್ಲಿ ರಸ್ತೆಯ ಪಕ್ಕದಲ್ಲೇ ತ್ಯಾಜ್ಯ ಸುರಿದು ಹೋಗುತ್ತಿದ್ದಾರೆ.
ಖಾಲಿ ಲೇಔಟ್‌ಗಳಲ್ಲಿ ರಾತ್ರಿ ವೇಳೆ ಪಾರ್ಟಿ ಮಾಡಿದವರು ಕೂಡ ರಸ್ತೆಯ ಬದಿಗಳಲ್ಲಿ ಕಸವನ್ನು ಎಸೆಯುತ್ತಿದ್ದಾರೆ. ಸ್ಥಳೀಯ ಆಡಳಿತ ಬೆಳಿಗ್ಗೆ ಹೀಗೆ ಎಸೆದ ಕಸಗಳನ್ನು ವಿಲೆ ಮಾಡಿದರೆ ಮರುದಿನದ ಹೊತ್ತಿಗೆ ಮತ್ತೆ ಕಸ ಬಿದ್ದಿರುವುದು ಸಾಮಾನ್ಯವಾಗಿದೆ.
‘ನಗರವ್ಯಾಪ್ತಿಯಲ್ಲಿ ಪ್ರತಿದಿನ ಕಸ ಸಂಗ್ರಹದ ವಾಹನಗಳ ಮೂಲಕ 35 ಟನ್ ಕಸ ಸಂಗ್ರಹವಾಗುತ್ತಿದೆ. ತ್ಯಾಜ್ಯ ವಿಲೇವಾರಿ ಘಟಕ ಸೇರಿದಂತೆ ಒಟ್ಟು 107 ಸಿಬ್ಬಂದಿ ಕಸ ಸಂಗ್ರಹಣೆ ಮತ್ತು ವಿಲೆ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಕೆಲಸಕ್ಕೆ 21 ವಾಹನಗಳನ್ನು ಬಳಸಲಾಗುತ್ತಿದೆ’ ಎನ್ನುತ್ತಾರೆ ನಗರಸಭೆಯ ಪರಿಸರ ಅಭಿಯಂತರ ಮದನ್.
ಈಚೆಗೆ ಸಂಗಳ ಗ್ರಾಮದಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕದಲ್ಲಿನ ಕಸದ ರಾಶಿಗೆ ಬೆಂಕಿ ಹೊತ್ತಿಕೊಂಡು ವ್ಯಾಪಕ ಹೊಗೆ ಸುತ್ತಮುತ್ತಲ ಗ್ರಾಮಗಳನ್ನು ಆವರಿಸಿ ಪರಿಸರವನ್ನು ಹಾಳು ಮಾಡಿತ್ತು. ಈ ಕಾರಣಕ್ಕೆ ಗ್ರಾಮಸ್ಥರು ತ್ಯಾಜ್ಯ ವಿಲೆ ಘಟಕವನ್ನು ಬೇರೆಡೆ ಸ್ಥಳಾಂತರಿಸುವಂತೆ ಪ್ರತಿಭಟಿಸಿದ್ದ ಘಟನೆಯೂ ನಡೆದಿದೆ.
ರಸ್ತೆಯ ಬದಿ ಕಸ ಎಸೆಯುವುದು ಕಾನೂನಿನ ಪ್ರಕಾರ ಅಪರಾಧ. ಆದರೆ ಈವರೆಗೆ ನಗರಸಭೆ ವತಿಯಿಂದ 3 ಪ್ರಕರಣಗಳನ್ನು ಮಾತ್ರ ದಾಖಲಿಸಲಾಗಿದೆ. ಹೀಗೆ ಕಸ ಎಸೆಯುವವರನ್ನು ಪತ್ತೆ ಹಚ್ಚಿ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಿದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವ ಪ್ರವೃತ್ತಿಗೆ ಕಡಿವಾಣ ಹಾಕಬಹುದು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ನಗರಸಭೆಯ ವಾಹನಕ್ಕೆ ಕಸ
ನೀಡುವವರು ಪ್ಲಾಸ್ಟಿಕ್ ಅನ್ನು ಕಸದಿಂದ ಪ್ರತ್ಯೇಕಿಸಿ ನೀಡಿದರೆ ದೊಡ್ಡ ತ್ಯಾಜ್ಯ ವಿಲೇವಾರಿ ಸುಲಭವಾಗುತ್ತದೆ. ಈಗ ಕಸದಿಂದ ಪ್ಲಾಸ್ಟಿಕ್ ಪ್ರತ್ಯೇಕಿಸುವುದೇ ದೊಡ್ಡ ಕೆಲಸವಾಗಿದೆ. ರಸ್ತೆ ಬದಿಗಳಲ್ಲಿ ಕಸ ಎಸೆಯುವವರ ವಿರುದ್ಧ ಮುಂದಿನ ದಿನಗಳಲ್ಲಿ ಬಿಗಿಯಾದ ಕ್ರಮ ಜರುಗಿಸುವ ಜೊತೆಗೆ ಜನಜಾಗೃತಿಯನ್ನೂ ಮೂಡಿಸಲಾಗುವುದು ಎಚ್.ಕೆ.ನಾಗಪ್ಪ ಪೌರಾಯುಕ್ತ ನಗರಸಭೆ ನಗರದ ಹೃದಯ ಭಾಗ ಹಾಗೂ ಹೊರ ವಲಯದಲ್ಲಿ ಅಳವಡಿಸಲಾಗಿರುವ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಸುಸ್ಥಿತಿಯಲ್ಲಿಡುವತ್ತ ಗಮನ ಹರಿಸಲಾಗುವುದು. ರಸ್ತೆಯ ಪಕ್ಕ ಕಸ ಎಸೆಯುವವರ ಬಗ್ಗೆ ಸಾರ್ವಜನಿಕರು ನಗರಸಭೆಗೆ ಮಾಹಿತಿ ನೀಡಿ ಸಹಕರಿಸಬೇಕು. ಮೈತ್ರಿ ಪಾಟೀಲ್ ಅಧ್ಯಕ್ಷರು ನಗರಸಭೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.