ADVERTISEMENT

ಸಾಗರ: ಏಳು ದಿನ ಪೂರೈಸಿದ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ

ಕಸ ಸಂಗ್ರಹಣೆ–ಹಗಲಿರುಳು ಶ್ರಮಿಸುತ್ತಿರುವ ಸ್ವಚ್ಛತಾ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 7:27 IST
Last Updated 10 ಫೆಬ್ರುವರಿ 2026, 7:27 IST
ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಕಾರ್ಯ ನಿರತವಾಗಿರುವ ಸ್ವಚ್ಛತಾ ಸಿಬ್ಬಂದಿ
ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಕಾರ್ಯ ನಿರತವಾಗಿರುವ ಸ್ವಚ್ಛತಾ ಸಿಬ್ಬಂದಿ   

ಸಾಗರ: ಇಲ್ಲಿನ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಸೋಮವಾರ ಏಳು ದಿನಗಳನ್ನು ಪೂರೈಸಿದೆ. ಪ್ರತಿದಿನ ಮಧ್ಯ ರಾತ್ರಿ ಕಳೆದು ಎರಡು ಗಂಟೆಯವರೆಗೂ ಜಾತ್ರೆ ಪೇಟೆಯಲ್ಲಿ ಜನಜಂಗುಳಿ ಮುಂದುವರಿದಿದೆ.

ಜನಸಂದಣಿ ಕರಗಿ ಅಂಗಡಿ ಮುಂಗಟ್ಟುಗಳು, ಅಮ್ಯೂಸ್‌ಮೆಂಟ್ ಪಾರ್ಕ್ ಬಂದ್ ಆಗುತ್ತಿದ್ದಂತೆ ಬೀದಿಗಿಳಿಯುವ ಇಲ್ಲಿನ ನಗರಸಭೆಯ ಸ್ವಚ್ಛತಾ ಸಿಬ್ಬಂದಿ ಬೆಳಿಗ್ಗೆ 6ರೊಳಗೆ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಆವರಣ, 8ರೊಳಗೆ ಜಾತ್ರೆ ಪೇಟೆ, ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ಸಂಗ್ರಹವಾಗುವ ಸಂಪೂರ್ಣ ಕಸವನ್ನು ವಿಲೇ ಮಾಡಿ ಮರುದಿನ ಜಾತ್ರೆಗೆ ಊರು ಸಿದ್ಧವಾಗುವಂತೆ ಮಾಡುವಲ್ಲಿ ಶ್ರಮಿಸುತ್ತಿದ್ದಾರೆ.

‘ನಗರವ್ಯಾಪ್ತಿಯಲ್ಲಿ ಸಾಮಾನ್ಯ ದಿನಗಳಲ್ಲಿ ಪ್ರತಿದಿನ 35 ಟನ್ ಕಸ ಸಂಗ್ರಹವಾಗುತ್ತದೆ. ಆದರೆ, ಜಾತ್ರೆಯ ವೇಳೆ ಪ್ರತಿದಿನ ಹೆಚ್ಚುವರಿಯಾಗಿ 50 ಟನ್ ಕಸ ಸಂಗ್ರಹವಾಗುತ್ತದೆ. ಇದನ್ನು ಸಕಾಲದಲ್ಲಿ ಸಂಗ್ರಹಿಸಿ ವಿಲೇ ಮಾಡುವುದು ಸವಾಲಿನ ಕೆಲಸ’ ಎನ್ನುತ್ತಾರೆ ನಗರಸಭೆ ಪೌರಾಯುಕ್ತ ಎಚ್.ಕೆ.ನಾಗಪ್ಪ.

ADVERTISEMENT

‘ನಗರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಲ್ಲದೆ ಜಾತ್ರೆಗಾಗಿಯೇ ಆನವಟ್ಟಿ, ತ್ಯಾಗರ್ತಿ ಭಾಗದಿಂದ 43 ಹೆಚ್ಚುವರಿ ಸ್ವಚ್ಛತಾ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿದೆ. ಜಾತ್ರೆ ಪೇಟೆಯಲ್ಲಿ ಜನಸಂದಣಿ ಇದ್ದಾಗಲೂ ಸ್ವಚ್ಛತೆ ಕಾರ್ಯ ಕೈಗೊಳ್ಳಲು ಅನುಕೂಲವಾಗುವಂತೆ ಗಾಲಿ ಚಕ್ರ ಅಳವಡಿಸಿರುವ ಕಸದ ಗಾಡಿಗಳನ್ನು ಬಳಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಜಾತ್ರೆಯಲ್ಲಿನ ತಾತ್ಕಾಲಿಕ ವ್ಯಾಪಾರಿ ಮಳಿಗೆಗಳಲ್ಲಿ ವ್ಯಾಪಾರಕ್ಕೆಂದೇ ಅಂದಾಜು 5,000 ಮಂದಿ ಬಂದಿದ್ದಾರೆ. ಅವರು ಹಾಗೂ ಅಮ್ಯೂಸ್‌ಮೆಂಟ್ ಪಾರ್ಕ್‌ನ ಸಿಬ್ಬಂದಿ ಎಲ್ಲೆಂದರಲ್ಲಿ ನಿತ್ಯಕರ್ಮಗಳನ್ನು ಮಾಡಬಾರದು ಎಂದು ನಗರಸಭೆ ವತಿಯಿಂದ 5 ಕಡೆ ಮೊಬೈಲ್ ಶೌಚಾಲಯಗಳನ್ನು ವ್ಯವಸ್ಥೆ ಮಾಡಲಾಗಿದೆ. ದಿನದ 24 ಗಂಟೆಗಳ ಕಾಲವೂ ನೀರು ಪೂರೈಕೆಯಾಗಿಯೆ 15 ವಾಟರ್ ಟ್ಯಾಂಕರ್ ಗಳನ್ನು ತರಿಸಿಕೊಳ್ಳಲಾಗಿದೆ.

ಈ ನಡುವೆ ಪ್ರತಿದಿನವೂ ಬೆಳಗಿನ ಜಾವ ಜಾತ್ರೆಯ ಆವರಣದ ಸುತ್ತಲೂ ಕ್ರಿಮಿನಾಶಕ ಔಷಧಿಗಳನ್ನು ಸ್ಪ್ರೇಯರ್ ಗಳ ಮೂಲಕ ಸಿಂಪಡಿಸಲಾಗುತ್ತಿದೆ. ಜಾತ್ರೆ ಮುಗಿದ ಕೆಲವು ದಿನಗಳ ನಂತರವೂ ಈ ಕಾರ್ಯವನ್ನು ಮುಂದುವರೆಸಲಾಗುವುದು ಎಂದು ನಗರಸಭೆ ಮೂಲಗಳು ತಿಳಿಸಿವೆ.

ಊರಿನ ಜನ ಜಾತ್ರೆ ಸಂಭ್ರಮ ಮುಗಿಸಿ ಮನೆಗೆ ತೆರಳಿ ಬೆಳಿಗ್ಗೆ ಹಾಸಿಗೆಯಿಂದ ಏಳುವಷ್ಟರಲ್ಲಿ ಊರನ್ನು ಸ್ವಚ್ಛವಾಗಿಡುವಲ್ಲಿ ಶ್ರಮಿಸುತ್ತಿರುವ ಸ್ವಚ್ಛತಾ ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Quote - ಜಾತ್ರೆಯಲ್ಲಿ ಅಪಾರ ಪ್ರಮಾಣದಲ್ಲಿ ಕಸ ಸಂಗ್ರಹವಾಗುತ್ತದೆ ಎಂಬ ನಿರೀಕ್ಷೆ ಮೊದಲೇ ಇತ್ತು. ಈ ಕಾರಣಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಹಾಗೂ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಕಸ ವಿಲೇವಾರಿಗೆ ವಿಶೇಷ ಕಾರ್ಯಪಡೆ ರಚಿಸಲಾಗಿದೆ  ಎಚ್.ಕೆ.ನಾಗಪ್ಪ ನಗರಸಭೆ ಪೌರಾಯುಕ್ತ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.