ಸಾಗರ: ಶರಾವತಿ ಪಂಪ್ಡ್ ಸ್ಟೋರೇಜ್ ಭೂಗರ್ಭ ಜಲ ವಿದ್ಯುತ್ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ. ಶಿವಮೊಗ್ಗ ಜಿಲ್ಲೆಯ ಶರಾವತಿ ಕಣಿವೆ ಹಾಗೂ ಉತ್ತರ ಕನ್ನಡ ಜೆಲ್ಲೆಯ ಶರಾವತಿ ನದಿ ಪಾತ್ರದ ಜನರ, ಪರಿಸರ ಸಂಘಟನೆಗಳ ತೀವ್ರ ವಿರೋಧದ ನಡುವೆಯೂ ಸರ್ಕಾರ ಯೋಜನೆ ಜಾರಿಗೊಳಿಸಲು ಮುಂದಾಗಿದ್ದು, ಸರ್ಕಾರದ ಈ ತೀರ್ಮಾನದ ವಿರುದ್ಧ ಜನಾಂದೋಲನ ರೂಪಿಸಲು ಸಿದ್ಧತೆಗಳು ನಡೆದಿವೆ.
ಲಿಂಗನಮಕ್ಕಿ ಸಮೀಪದ ತಳಕಳಲೆ ಜಲಾಶಯ ಹಾಗೂ ಗೇರುಸೊಪ್ಪದಿಂದ ನೀರನ್ನು ಮೇಲಕ್ಕೆ ಎತ್ತಿ 2500 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿಯನ್ನು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಹೊಂದಿದೆ.
2017ರಲ್ಲಿ ಈ ಯೋಜನೆ ರೂಪುಗೊಂಡಾಗ ಇದರ ಅಂದಾಜು ವೆಚ್ಚ ₹ 4,082 ಕೋಟಿ ಆಗಿತ್ತು. 2024ರ ಹೊತ್ತಿಗೆ ಅದು ಅಂದಾಜು ₹ 8,500 ಕೋಟಿಗೆ ಏರಿದೆ ಎಂಬ ಮಾಹಿತಿ ಇದೆ. ಈ ಯೋಜನೆ ಮೂಲಕ ವಿದ್ಯುತ್ ಕೊರತೆ ಇರುವ ಪ್ರದೇಶಕ್ಕೆ ಪೂರೈಸುವ ಗುರಿಯನ್ನು ಹೊಂದಲಾಗಿದೆ.
ಈ ಯೋಜನೆಯ ಜೊತೆಗೆ ಶರಾವತಿ ನದಿ ನೀರನ್ನು ಬೆಂಗಳೂರಿಗೆ ಹರಿಸುವ ಯೋಜನೆಯೂ 2017ರಲ್ಲೇ ಸಿದ್ಧಗೊಂಡಿತ್ತು. ಇದಕ್ಕೆ ಮಲೆನಾಡಿನ ಜನರ ತೀವ್ರ ವಿರೋಧ ವ್ಯಕ್ತವಾದ ನಂತರ ಶರಾವತಿ ನೀರನ್ನು ಬೆಂಗಳೂರಿಗೆ ಹರಿಸುವ ಯೋಜನೆಗೆ ರಾಜ್ಯ ಸರ್ಕಾರ ತಾತ್ಕಾಲಿಕವಾಗಿ ವಿರಾಮ ಹೇಳಿದೆ.
ಕಳೆದ ವರ್ಷ ಸಾಗರ, ಹೊಸನಗರ ಹಾಗೂ ಸುತ್ತಮುತ್ತಲ ಪ್ರದೇಶಗಳ ರೈತರು, ಪರಿಸರಾಸಕ್ತರು, ವಿವಿಧ ಸಂಘಟನೆಗಳ ಪ್ರಮುಖರು ಸಭೆ ಸೇರಿ ಶರಾವತಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಯೋಜನೆಯನ್ನು ಕೈಬಿಡುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದರು. ಈ ಚಳವಳಿಯಲ್ಲಿ ಮಠಾಧೀಶರು ಕೂಡ ಪಾಲ್ಗೊಂಡಿದ್ದರು.
ಈಗ ಸರ್ಕಾರ ಯೋಜನೆ ಜಾರಿಗೊಳಿಸಲು ಮುಂದಾಗಿದ್ದು, ಮತ್ತೊಮ್ಮೆ ಹೋರಾಟ ರೂಪಿಸಲು ಈ ಭಾಗದ ಪರಿಸರ ಸಂಘಟನೆಗಳು ಮುಂದಾಗಿವೆ. ನೀರನ್ನು ಮೇಲಕ್ಕೆತ್ತಿ 2,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು 2500 ಮೆಗಾವ್ಯಾಟ್ ವಿದ್ಯುತ್‌ನ ಅಗತ್ಯವಿದೆ ಎಂಬುದು ಶರಾವತಿ ವಿದ್ಯುತ್ ಯೋಜನೆಯನ್ನು ಪರಿಸರವಾದಿಗಳು ವಿರೋಧಿಸಲು ಪ್ರಮುಖ ಕಾರಣವಾಗಿದೆ.
‘ಶರಾವತಿ ವಿದ್ಯುತ್ ಯೋಜನೆ ಜಾರಿಯಾದರೆ ಶರಾವತಿ ಸಿಂಗಳೀಕ ಅಭಯಾರಣ್ಯ ಪ್ರದೇಶದಲ್ಲಿರುವ 354 ಪಾರಂಪರಿಕ ದಟ್ಟ ಅರಣ್ಯ ಪ್ರದೇಶ ನಾಶವಾಗುತ್ತದೆ. ಇದು ಮಳೆ ಕಾಡು ಪ್ರದೇಶವಾಗಿದ್ದು, ಪಶ್ಚಿಮಘಟ್ಟದ ಪರಿಸರದ ಅಸಮತೋಲನಕ್ಕೆ ಕಾರಣವಾಗುತ್ತದೆ’ ಎನ್ನುತ್ತಾರೆ ಪರಿಸರ ಕಾರ್ಯಕರ್ತ ಅಖಿಲೇಶ್ ಚಿಪ್ಪಳಿ.
ಶರಾವತಿ ಜಲ ವಿದ್ಯುತ್ ಯೋಜನೆ ಜಾರಿಗೊಳಿಸಿದರೆ ಅಪಾರ ಪ್ರಮಾಣದಲ್ಲಿ ಅರಣ್ಯ ನಾಶವಾಗುತ್ತದೆ ಎಂದು ಸಾಗರ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ವರದಿ ನೀಡಿದ್ದರೂ ಅದನ್ನು ಲೆಕ್ಕಿಸದೆ ರಾಜ್ಯ ಸರ್ಕಾರ ಯೋಜನೆಗೆ ಅನುಮತಿ ನೀಡಿರುವ ಬಗ್ಗೆ ಪರಿಸರಾಸಕ್ತರು ಬೇಸರಗೊಂಡಿದ್ದಾರೆ.
‘ಅರಣ್ಯಭೂಮಿ ಹಕ್ಕು ಕಾಯ್ದೆಯಡಿ ಅರಣ್ಯಭೂಮಿಗೆ ಹಕ್ಕುಪತ್ರ ನೀಡಲು ಇಲ್ಲಸಲ್ಲದ ತಕರಾರು ಎತ್ತುತ್ತ ವಿಳಂಬ ಧೋರಣೆ ತೋರುವ ಸರ್ಕಾರ ನೂರಾರು ಎಕರೆ ಅರಣ್ಯ ನಾಶಕ್ಕೆ ಇಂತಹ ಯೋಜನೆಗಳ ಮೂಲಕ ಮುಂದಾಗುವುದು ಎಷ್ಟು ಸರಿ’ ಎಂದು ದೇಸಿ ಸೇವಾ ಬ್ರಿಗೇಡ್‌ನ ಶ್ರೀಧರ ಮೂರ್ತಿ ಪ್ರಶ್ನಿಸುತ್ತಾರೆ.
‘ವಿದ್ಯುತ್‌ಗೆ ಇರುವ ಬೇಡಿಕೆಯನ್ನು ಜಲವಿದ್ಯುತ್ ಯೋಜನೆಯ ಬದಲು ಈಗ ಲಭ್ಯವಿರುವ ಬ್ಯಾಟರಿ ಎನರ್ಜಿ ಹಾಗೂ ಸೌರಶಕ್ತಿ ಯೋಜನೆಯ ವಿಕೇಂದ್ರೀಕರಣದ ಮೂಲಕ ಪೂರೈಸುವುದು ಸರಿಯಾದ ಮಾರ್ಗ’ ಎಂಬ ಅಭಿಪ್ರಾಯವನ್ನು ಇಂಧನ ತಜ್ಞ ಶಂಕರ ಶರ್ಮ ವ್ಯಕ್ತಪಡಿಸುತ್ತಾರೆ.
ವಿವಿಧ ಯೋಜನೆಗಳ ಭಾರದಿಂದ ಶರಾವತಿ ನದಿಯಲ್ಲಿನ ಸಿಹಿ ನೀರಿನ ಪ್ರಮಾಣ ಕಡಿಮೆಯಾಗಿ ಉಪ್ಪು ನೀರಿನ ಪ್ರದೇಶ ಹೆಚ್ಚುತ್ತಿರುವುದು ನದಿ ಪಾತ್ರದ ಜನರಲ್ಲಿ ಆತಂಕ ಮೂಡಿಸಿದೆ. ಶರಾವತಿ ವಿದ್ಯುತ್ ಯೋಜನೆ ಜಾರಿಯಾದರೆ ಉಪ್ಪು ನೀರಿನ ಪ್ರದೇಶ ಮತ್ತಷ್ಟು ಹೆಚ್ಚಬಹುದು ಎಂಬ ಕಾರಣಕ್ಕೆ ಅಲ್ಲಿನ ಜನ ಈಗಾಗಲೇ ಯೋಜನೆ ವಿರೋಧಿಸಿ ಪ್ರತಿ ಪಂಚಾಯಿತಿಯಲ್ಲೂ ಜಾಗೃತಿ ಅಭಿಯಾನಕ್ಕೆ ಮುಂದಾಗಿದ್ದಾರೆ. ಅದೇ ಮಾದರಿಯಲ್ಲಿ ಈ ಭಾಗದಲ್ಲೂ ಹೋರಾಟ ಅನಿವಾರ್ಯವಾಗಿದೆ ಎಂದು ಪರಿಸರಾಸಕ್ತರು ಮಾಹಿತಿ ನೀಡಿದ್ದಾರೆ.
ಲಭ್ಯವಿರುವ ಆಧುನಿಕ ತಂತ್ರಜ್ಞಾನವನ್ನು ಬಳಸಿ ಪರಿಸರಕ್ಕೆ ಧಕ್ಕೆ ಆಗದಂತೆ ಅರಣ್ಯ ಉಳಿಸಿಕೊಂಡು ಶರಾವತಿ ಜಲ ವಿದ್ಯುತ್ ಯೋಜನೆ ಅನುಷ್ಠಾನಗೊಳಿಸಲಾಗುವುದು. ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. -ಗೋಪಾಲಕೃಷ್ಣ ಬೇಳೂರು ಶಾಸಕ
ಯೋಜನೆಗಳಿಂದ ಮತ್ತಷ್ಟು ಅರಣ್ಯ ನಾಶ ಪರಿಸರ ಸೂಕ್ಷ್ಮ ಪ್ರದೇಶವಾದ ಪಶ್ಚಿಮಘಟ್ಟದಲ್ಲಿ 10 ವರ್ಷಗಳಲ್ಲಿ 58.22 ಚದರ ಕಿ.ಮೀ. ಅರಣ್ಯ ನಾಶವಾಗಿದೆ ಎಂದು ಭಾರತದ ಅರಣ್ಯ ಸ್ಥಿತಿಗತಿ ಕುರಿತು ಈಚೆಗೆ ಐಎಸ್ಎಫ್ ಸಂಸ್ಥೆ ಬಿಡುಗಡೆ ಮಾಡಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೊಸ ಯೋಜನೆಗಳ ಮೂಲಕ ಮತ್ತಷ್ಟು ಅರಣ್ಯ ನಾಶ ಮಾಡುವುದು ವಿವೇಕದ ಕ್ರಮವಲ್ಲ.
-ಅಖಿಲೇಶ್ ಚಿಪ್ಪಳಿ ಪರಿಸರ ಕಾರ್ಯಕರ್ತ ಸಾಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.