ADVERTISEMENT

ಸಾಗರದ ರವೀಂದ್ರ ಪುಸ್ತಕಾಲಯಕ್ಕೆ ಈಗ 60ರ ಸಂಭ್ರಮ

ಜ್ಞಾನದ ಹಸಿವನ್ನು ನೀಗಿಸುತ್ತಿರುವ ವೈ.ಎ.ದಂತಿ

ಎಂ.ರಾಘವೇಂದ್ರ
Published 15 ಜೂನ್ 2025, 6:52 IST
Last Updated 15 ಜೂನ್ 2025, 6:52 IST
ವೈ.ಎ.ದಂತಿ
ವೈ.ಎ.ದಂತಿ   

ಸಾಗರ: ನಗರದ ಹೃದಯ ಭಾಗವಾದ ಚಾಮರಾಜಪೇಟೆ ಬಡಾವಣೆಯಲ್ಲಿರುವ ರವೀಂದ್ರ ಪುಸ್ತಕಾಲಯಕ್ಕೆ ಈಗ 60ರ ಸಂಭ್ರಮ. 1960ರಿಂದ ನಡೆಯುತ್ತಿರುವ ಈ ಪುಸ್ತಕಾಲಯವನ್ನು 86ರ ಇಳಿ ವಯಸ್ಸಿನಲ್ಲೂ ವೈ.ಎ. ದಂತಿ ಉತ್ಸಾಹದಿಂದ ಮುನ್ನಡೆಸುತ್ತಿದ್ದಾರೆ.

ದಂತಿಯವರು ಮೂಲತಃ ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನವರು. 1958ರಲ್ಲಿ ಶರಾವತಿ ಯೋಜನಾ ಪ್ರದೇಶವಾದ ಕಾರ್ಗಲ್‌ಗೆ ಲೋಕೋಪಯೋಗಿ ಇಲಾಖೆ ನೌಕರರಾಗಿ ಬಂದವರು. ಆಗ ಅಲ್ಲಿನ ನೌಕರರಿಗೆ ಸಂಜೆ ವೇಳೆ ಹಿಂದಿ ಪಾಠ ಮಾಡುತ್ತಿದ್ದ ದಂತಿ, ಪಾಠ ಕೇಳಲು ಬಂದವರಿಂದ ಶುಲ್ಕದ ಬದಲು ಪುಸ್ತಕಗಳನ್ನು ಪಡೆಯುತ್ತಿದ್ದರು.

‘ಹೀಗೆ ಪಡೆದ ಪುಸ್ತಕಗಳ ಸಂಗ್ರಹ ದೊಡ್ಡದಾದಾಗ ಅವುಗಳ ಪ್ರಯೋಜನ ಹೆಚ್ಚಿನವರಿಗೆ ದೊರಕಲಿ ಎಂದು 1960ರಲ್ಲಿ ಕಾರ್ಗಲ್‌ನಲ್ಲಿ ಪುಸ್ತಕಾಲಯ ಆರಂಭಿಸಿದರು. 1965ರ ಜ.26ಕ್ಕೆ ಪುಸ್ತಕಾಲಯ ಸಾಗರಕ್ಕೆ ವರ್ಗಾವಣೆಯಾಯಿತು.

ADVERTISEMENT

ರವೀಂದ್ರ ಪುಸ್ತಕಾಲಯದಲ್ಲಿ ಕಾದಂಬರಿ, ನಾಟಕ, ಕವನ ಸಂಕಲನ, ವಿಮರ್ಶಾ ಬರಹಗಳು, ಕಥಾ ಸಂಕಲನ ಸೇರಿದಂತೆ 15,000ಕ್ಕೂ ಹೆಚ್ಚು ಪುಸ್ತಕಗಳಿವೆ. ಆರಂಭದಲ್ಲಿ 250 ಸದಸ್ಯರಿದ್ದರು. ಈಗಲೂ 150 ಸದಸ್ಯರಿದ್ದಾರೆ.

1980ರಲ್ಲಿ ನಾ.ಡಿಸೋಜ ಅವರ ‘ನಿನ್ನ ಉದ್ದಾರ ಎಷ್ಟಾಯಿತು?’ ಕಥಾ ಸಂಕಲನವನ್ನು ಪ್ರಕಟಿಸುವ ಮೂಲಕ ದಂತಿಯವರು ರವೀಂದ್ರ ಪ್ರಕಾಶನವನ್ನು ಆರಂಭಿಸಿದ್ದಾರೆ. ಈವರೆಗೆ 195 ಪುಸ್ತಕಗಳು ಈ ಪ್ರಕಾಶನದಿಂದ ಪ್ರಕಟವಾಗಿವೆ. ಗೋಪಾಲಕೃಷ್ಣ ಅಡಿಗ, ಚಂದ್ರಶೇಖರ ಕಂಬಾರ, ಶಿವರಾಮ ಕಾರಂತ, ಬಿ.ವಿ. ಕಾರಂತ, ಹಾ.ಮ.ನಾಯಕ, ಟಿ.ಸುನಂದಮ್ಮ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಯು.ಆರ್. ಅನಂತಮೂರ್ತಿ, ಗಂಗೂಬಾಯಿ ಹಾನಗಲ್, ಎಸ್.ಎಲ್. ಭೈರಪ್ಪ ಸೇರಿದಂತೆ ಹಲವರು ಈ ಪುಸ್ತಕಾಲಯದ ಆತಿಥ್ಯ ಪಡೆದಿದ್ದಾರೆ. 

ರವೀಂದ್ರ ಪುಸ್ತಕಾಲಯದಲ್ಲಿ ವೈ.ಎ.ದಂತಿ

‘ಮೊಬೈಲ್ ಪೋನ್, ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಪುಸ್ತಕ, ಪತ್ರಿಕೆಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬುದನ್ನು ದಂತಿ ಒಪ್ಪುವುದಿಲ್ಲ. ಪ್ರತಿವರ್ಷ ಕರ್ನಾಟಕದಲ್ಲಿ 3ರಿಂದ 4,000 ಪುಸ್ತಕಗಳು ಪ್ರಕಟವಾಗಿ, ಮಾರಾಟವಾಗುತ್ತಿಲ್ಲವೇ?’ ಎಂದು ಪ್ರಶ್ನಿಸುತ್ತಾರೆ.

ರವೀಂದ್ರ ಪುಸ್ತಕಾಲಯ ತನ್ನ 60ನೇ ವರ್ಷದ ಸಂಭ್ರಮ ಆಚರಣೆ ಅಂಗವಾಗಿ ಜೂನ್ 16ರಿಂದ 23ರವರೆಗೆ ‘ಅಕ್ಷರ ಹಬ್ಬ’  ಕಾರ್ಯಕ್ರಮವನ್ನು ಇಲ್ಲಿನ ಶೃಂಗೇರಿ ಶಂಕರ ಮಠದಲ್ಲಿ ಆಯೋಜಿಸಿದೆ.

27 ವರ್ಷಗಳಿಂದ ರವೀಂದ್ರ ಪುಸ್ತಕಾಲಯದ ಸದಸ್ಯನಾಗಿದ್ದೇನೆ. ಇಲ್ಲಿನ ಪುಸ್ತಕಗಳ ಓದಿನಿಂದ ನನ್ನ ಜ್ಞಾನವನ್ನು ವೃದ್ಧಿಸಿಕೊಂಡಿದ್ದೇನೆ. ಅತ್ಯಂತ ಶಿಸ್ತುಬದ್ದವಾಗಿ ದಂತಿಯವರು ಪುಸ್ತಕಾಲಯವನ್ನು ನಡೆಸುತ್ತಿದ್ದಾರೆ.
– ಕೆ.ಟಿ.ಆನಂದ, ವಕೀಲರು ಸಾಗರ
60 ವರ್ಷ ನಿರಂತರವಾಗಿ ಪುಸ್ತಕಾಲಯವನ್ನು ನಡೆಸುವುದು ಸಾಮಾನ್ಯ ಸಂಗತಿಯಲ್ಲ. ಈ ಬಾಗದ ಸಾಹಿತ್ಯಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೆಚ್ಚಿಸುವಲ್ಲಿ ರವೀಂದ್ರ ಪುಸ್ತಕಾಲಯದ ಪಾತ್ರ ಮಹತ್ವದ್ದಾಗಿದೆ.
– ವಸುಮತಿ ಗೌಡ, ಉಪನ್ಯಾಸಕಿ ಸಾಗರ
ಪುಸ್ತಕದ ಹುಡುಕಾಟದಲ್ಲಿ ಓದುಗರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.