ಶಿವಮೊಗ್ಗ: ಬಡವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ, ಸ್ವತಂತ್ರ ಆಲೋಚನೆ, ಸೌಹಾರ್ದತೆಯ ಗುಣಗಳನ್ನು ಕಲಿಸಿದ ಶ್ರೇಯ ಸಹ್ಯಾದ್ರಿ ಕಾಲೇಜಿಗೆ ಸಲ್ಲುತ್ತದೆ ಎಂದು ಕುವೆಂಪು ವಿ.ವಿ ನಿವೃತ್ತ ಪ್ರಾಧ್ಯಾಪಕ ಪ್ರೊ.ರಾಜೇಂದ್ರ ಚೆನ್ನಿ ಹೇಳಿದರು.
ನಗರದಲ್ಲಿ ಸಹ್ಯಾದ್ರಿ ಕಲಾ ಕಾಲೇಜು ಅಧ್ಯಾಪಕರ ಸಂಘ, ಸಹ್ಯಾದ್ರಿ ಕಲಾ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಮತ್ತು ನಿವೃತ್ತ ಪ್ರಾಧ್ಯಾಪಕರಿಗೆ ಗೌರವ ಸಮರ್ಪಣಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
‘ಪರಸ್ಪರ ಸಂಬಂಧಗಳು ಶಿಥಿಲಗೊಳ್ಳುತ್ತಿರುವ ಇಂತಹ ಸಂದರ್ಭದಲ್ಲಿ ಸಹ್ಯಾದ್ರಿ ಕಲಾ ಕಾಲೇಜು ಉತ್ತಮ ಕಾರ್ಯಕ್ರಮ ರೂಪಿಸಿದೆ. ಕಾಲೇಜಿನ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ. ಸಹ್ಯಾದ್ರಿ ಕಾಲೇಜಿಗೆ ದೊಡ್ಡ ಪರಂಪರ ಇದೆ. ಇಲ್ಲಿ ಓದುವುದೇ ಭಾಗ್ಯ ಎಂಬ ಭಾವನೆ ಇತ್ತು. ಸಹ್ಯಾದ್ರಿ ಕಾಲೇಜು ವಿಶ್ವಾಸದ ಪ್ರತೀಕವಾಗಿತ್ತು’ ಎಂದರು.
ಕಲಿಕೆಯನ್ನು ಶ್ರೀಮಂತಗೊಳಿಸಿದ ಕೀರ್ತೀ ಈ ಕಾಲೇಜಿಗೆ ಇದೆ. ಇದು ಸೌಹಾರ್ದತೆಯ ತವರೂರು. ಇಲ್ಲಿಂದಲೇ ಚಳವಳಿ ಆರಂಭವಾಗಿದ್ದವು. ಮತೀಯ ಗಲಾಟೆಗಳನ್ನು ಇಲ್ಲಿಯೇ ನಿರ್ಬಂಧಿಸಲಾಗುತ್ತಿತ್ತು. ವಿದ್ಯಾರ್ಥಿ ಸಂಘದ ಚುನಾವಣೆಯು ಇತಿಹಾಸವನ್ನೇ ಹೊಂದಿತ್ತು. ಭಿನ್ನಾಭಿಪ್ರಾಯಗಳು ಇದ್ದರೂ ಅದರಾಚೆಗೆ ಸಹೃದಯತೆಯನ್ನು ಕಲಿಸಿದ್ದು ಈ ಕಾಲೇಜು ಎಂದು ಸ್ಮರಿಸಿದರು.
ಈಗ ಸಹ್ಯಾದ್ರಿ ಕಾಲೇಜಿನ ಭೂಮಿಯನ್ನೇ ಕಬಳಿಸುವ ಯತ್ನಗಳು ನಡೆಯುತ್ತಿವೆ. ಅದಕ್ಕೆ ಅವಕಾಶ ಕೊಡುವುದಿಲ್ಲ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಹೇಳಿದರು.
ಪ್ರಾಂಶುಪಾಲ ಎಸ್.ಸಿರಾಜ್ ಅಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಿದ್ಯಾರ್ಥಿಗಳ ಸಂಘದ ಸಂಚಾಲಕ ಕೆ.ಎನ್.ಮಂಜುನಾಥ್ ಸ್ವಾಗತಿಸಿದರು. ಅಧ್ಯಾಪಕರ ಸಂಘದ ಅಧ್ಯಕ್ಷ ಎಂ.ಎಚ್. ಪ್ರಹ್ಲಾದಪ್ಪ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕ ಕೆ.ಪ್ರಸನ್ನಕುಮಾರ್ ಆಶಯ ನುಡಿಗಳನ್ನಾಡಿದರು. ಹಾಲಮ್ಮ ಕಾರ್ಯಕ್ರಮ ನಿರೂಪಿಸಿದರು.
ಸಹ್ಯಾದ್ರಿ ಕಾಲೇಜಿನ ಪರಂಪರೆ ಉಳಿಯಬೇಕು. ಇದು ನಮ್ಮತನವನ್ನು ರೂಪಿಸಿದ ಕಾಲೇಜು. ಈ ಕಾಲೇಜಿನಲ್ಲಿ ಓದಿದವರು ಗಣ್ಯ ವ್ಯಕ್ತಿಗಳಾಗಿ ರೂಪುಗೊಂಡಿದ್ದಾರೆ.-ಆಯನೂರು ಮಂಜುನಾಥ್, ಮಾಜಿ ಸಂಸದ
100 ಎಕರೆ ಇದ್ದ ಸಹ್ಯಾದ್ರಿ ಕಾಲೇಜು ಕ್ಯಾಂಪಸ್‌ನ ಜಾಗ ಈಗ 76 ಎಕರೆಗೆ ಇಳಿದಿದೆ. ಅದನ್ನು ಬೇರೆ ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳುವ ಯತ್ನ ನಡೆದಿತ್ತು. ಕಾಲೇಜಿನ ಭೂಮಿಯನ್ನು ಪರಭಾರೆ ಮಾಡಲು ಬಿಡುವುದಿಲ್ಲ.-ಎ.ಗುರುಮೂರ್ತಿ, ಡಿಎಸ್‌ಎಸ್ ರಾಜ್ಯ ಸಂಚಾಲಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.