ADVERTISEMENT

ನನೆಗುದಿಗೆ ಬಿದ್ದಿರುವ ಕಾಮಗಾರಿಗಳಿಗೆ ಶೀಘ್ರ ಮುಕ್ತಿ

ಸಂವಾದ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಭರವಸೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2019, 10:44 IST
Last Updated 28 ಜೂನ್ 2019, 10:44 IST
ಬಿ.ವೈ.ರಾಘವೇಂದ್ರ
ಬಿ.ವೈ.ರಾಘವೇಂದ್ರ   

ಶಿವಮೊಗ್ಗ: ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಹಲವು ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಆದ್ಯತೆ ನೀಡಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಪ್ರೆಸ್‌ಟ್ರಸ್ಟ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಂತ್ರಿಕ ಕಾರಣಗಳಿಂದ ವಿಮಾನನಿಲ್ದಾಣ ಕಾಮಗಾರಿ ಸ್ಥಗಿತಗೊಂಡಿದೆ.ಸೋಗಾನೆ ಬಳಿ ಇರುವ ಜಾಗದಲ್ಲೆ ರನ್‌ವೇ ಬದಲಿಸಿ, ಕಾಮಗಾರಿ ಆರಂಭಿಸಬೇಕಿದೆ. ಹೊಸ ಗುತ್ತಿಗೆದಾರರ ನೇಮಿಸಬೇಕಿದೆ. ಈಗಾಗಲೇ ಕೇಂದ್ರ ಸಚಿವರ ಜತೆ ಚರ್ಚಿಸಲಾಗಿದೆ. ಶೀಘ್ರ ಕಾಮಗಾರಿಗೆ ಚಾಲನೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ADVERTISEMENT

ಜುಲೈ 7ಕ್ಕೆ ಸಚಿವರ ಭೇಟಿ:ಶಿವಮೊಗ್ಗ ನಗರದ ಹಲವೆಡೆ ರೈಲ್ವೆ ಕೆಳ ಹಾಗೂ ಮೇಲು ಸೇತುವೆಗಳ ಅಗತ್ಯವಿದೆ. ಜುಲೈ 7ರಂದು ರೈಲ್ವೆ ಸಚಿವರು ನಗರಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಕುರಿತು ಅವರ ಜತೆ ಚರ್ಚಿಸಲಾಗುವುದು. ಇನ್ನಷ್ಟು ಹೊಸ ರೈಲುಗಳ ಸಂಚಾರಕ್ಕೂ ಮನವಿ ಮಾಡಲಾಗುವುದು. ಶಿವಮೊಗ್ಗ ಮುಖ್ಯ ರೈಲುನಿಲ್ದಾಣವನ್ನು ಸೆಟಲೈಟ್ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಮಾಹಿತಿ ನೀಡಿದರು.

ವಿಐಎಸ್‌ಎಲ್‌ ಉಳಿಸಲು ಪ್ರಯತ್ನ:ಕೇಂದ್ರ ಸರ್ಕಾರ ದೇಶದ 42 ಕೈಗಾರಿಕೆಗಳು ನಷ್ಟದಲ್ಲಿವೆ ಎಂದು ಗುರುತಿಸಿದೆ. ಅವುಗಳಲ್ಲಿ ಭದ್ರಾವತಿಯ ವಿಐಎಸ್ಎಲ್ ಸಹ ಒಂದು. ಕಾರ್ಖಾನೆ ಉಳಿಸಲು ಎಲ್ಲ ರೀತಿಯ ಪ್ರಯತ್ನ ನಡೆಸಲಾಗುವುದು.ಜಾಗತಿಕ ಪೈಪೋಟಿಯ ಮಧ್ಯೆ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಉಳಿಸಬೇಕಿದೆ. ಖಾಸಗಿ ಜಾಲತಾಣಗಳ ಜತೆ ಪೈಪೋಟಿ ನಡೆಸಲು ಶಕ್ತಿ ತುಂಬಬೇಕಿದೆ ಎಂದರು.

ಶರಾವತಿಗೆ ಪೂರ್ಣ ಬೆಂಬಲ:ಶರಾವತಿ ಉಳಿಸಿ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುದು. ಲಿಂಗನಮಕ್ಕಿಯಿಂದ ನೀರು ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ಬೆಂಗಳೂರಿಗೆ ಅಗತ್ಯವಿರುವ ನೀರಿನ ಮೂಲ ಹುಡುಕಬೇಕು. ಅಲ್ಲಿನ ಕೆರೆಗಳ ಒತ್ತುವರಿ ತಡೆಯಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರ ಬರ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಪ್ರಮುಖ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ಕೇಂದ್ರದ ಅನುದಾನ ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.