ADVERTISEMENT

ತೀರ್ಥಹಳ್ಳಿ: ಪರವಾನಗಿ ಮೀರಿ ಮರಳು ಡಬ್ಲಿಂಗ್ ದಂಧೆ

ಪರಿಸರ ಸೂಕ್ಷ್ಮಗಳನ್ನು ಕಳೆದುಕೊಳ್ಳುತ್ತಿವೆ ತೀರ್ಥಹಳ್ಳಿ ತಾಲ್ಲೂಕಿನ ತುಂಗಾ, ಮಾಲತಿ ನದಿಗಳು

ಶಿವಾನಂದ ಕರ್ಕಿ
Published 2 ಏಪ್ರಿಲ್ 2021, 6:32 IST
Last Updated 2 ಏಪ್ರಿಲ್ 2021, 6:32 IST
ತೀರ್ಥಹಳ್ಳಿ ತಾಲ್ಲೂಕಿನ ತುಂಗಾ ನದಿಯಲ್ಲಿನ ಮರಳು ಕ್ವಾರಿ
ತೀರ್ಥಹಳ್ಳಿ ತಾಲ್ಲೂಕಿನ ತುಂಗಾ ನದಿಯಲ್ಲಿನ ಮರಳು ಕ್ವಾರಿ   

ತೀರ್ಥಹಳ್ಳಿ: ತಾಲ್ಲೂಕಿನ ತುಂಗಾ, ಮಾಲತಿ ನದಿ ಪಾತ್ರದಲ್ಲಿ ಪರಿಸರ ಸಂರಕ್ಷಣೆಯ ನಿಯಮಗಳನ್ನು ಉಲ್ಲಂಘಿಸಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದು, ಡಬ್ಲಿಂಗ್ ದಂಧೆ ಹೆಚ್ಚಾಗಿರುವ ಕುರಿತು ಸಾರ್ವಜನಿಕರಿಂದ ದೂರುಗಳು ವ್ಯಾಪಕವಾಗಿ ಕೇಳಿಬಂದಿವೆ.

ನದಿ ಪಾತ್ರದಲ್ಲಿ ನಡೆಯುತ್ತಿರುವ ಅಕ್ರಮ ತಡೆಯುವಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಂಪೂರ್ಣ ವಿಫಲವಾಗಿದೆ. ಮರಳು ಮೇಲುಸ್ತುವಾರಿ ಹೊಣೆ ಹೊತ್ತಿರುವ ಕಂದಾಯ ಇಲಾಖೆ ಎಲ್ಲವನ್ನೂ ತಿಳಿದು ಕಣ್ಣು ಮುಚ್ಚಿ ಕುಳಿತಿದೆ ಎಂಬ ಆರೋಪಕ್ಕೆ ಗುರಿಯಾಗಿದೆ.

‘ಮರಳು ಕ್ವಾರಿಯ ಸ್ಟಾಕ್ ಯಾರ್ಡ್, ಕ್ವಾರಿಗೆ ಅಳವಡಿಸಿದ ಸಿ.ಸಿ.ಟಿ.ವಿ. ಕ್ಯಾಮೆರಾ ನೆಪಮಾತ್ರಕ್ಕೆ ಎನ್ನುವಂತಿದೆ. ನದಿ ಪಾತ್ರದಲ್ಲಿ ಅನುಮತಿಗಿಂತ ಹೆಚ್ಚಿನ ಪ್ರಮಾಣದ ಮರಳು ಸಾಗಣೆಯಾಗುತ್ತಿದೆ. ಕ್ವಾರಿಯಲ್ಲಿ ನಿಯಮ ಪಾಲನೆಯಾಗುತ್ತಿಲ್ಲ. ನಿತ್ಯ 50ಕ್ಕೂ ಹೆಚ್ಚಿನ ಲೋಡ್ ಮರಳು ಅಕ್ರಮವಾಗಿ ಸಾಗಣೆಯಾಗುತ್ತಿದ್ದು, ದಂಧೆ ನಿರಂತರವಾಗಿ ನಡೆಯುತ್ತಿದೆ. ಪೊಲೀಸ್, ಅರಣ್ಯ ಚೆಕ್ ಪೋಸ್ಟ್ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಕೆಲ ಅಧಿಕಾರಿಗಳು, ಸಿಬ್ಬಂದಿ ದಂಧೆಯಲ್ಲಿ ಶಾಮೀಲಾಗಿದ್ದು, ಅಕ್ರಮ ಸಾಗಣೆ ತಡೆಯಬೇಕಿದ್ದ ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ, ಆರ್‌ಡಿಪಿಆರ್, ಅರಣ್ಯ ಇಲಾಖೆಗಳ ಜಾಣ ನಿದ್ದೆ ಅಕ್ರಮ ಸಾಗಣೆಗೆ ಬೆಂಗಾವಲು ನೀಡುತ್ತಿವೆ’ ಎಂದು ದೂರುತ್ತಾರೆ ನಾಗರಿಕರೊಬ್ಬರು.

ADVERTISEMENT

ಪ್ರಕೃತಿದತ್ತವಾದ ನದಿ ದಂಡೆಯನ್ನು ಹಾನಿಗೊಳಿಸಿ ಜೆಸಿಬಿ ಯಂತ್ರಗಳ ಮೂಲಕ ಮರಳು ದೋಚಲಾಗುತ್ತಿದೆ. ತಾಲ್ಲೂಕಿನ ಸುಮಾರು 84 ಎಕರೆ ವಿಸ್ತೀರ್ಣದ ಕ್ವಾರಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ಜೀವನದಿಗಳ ಪರಿಸರ ಸೂಕ್ಷ್ಮತೆಗೆ ಅಪಾಯ ತಂದೊಡ್ಡಿವೆ.

ನದಿಯಲ್ಲಿ ಗಡಿ ಬಾಂದು ಗುರುತಿಸದೇ 2, 3 ಮೀಟರ್ ಆಳ ಗಣಿಗಾರಿಕೆ ನಡೆಸಲಾಗುತ್ತಿದೆ. ಮರಳು ವಿತರಣೆ ನಿಯಮದ ಅನ್ವಯ ನದಿ ಪಾತ್ರದಲ್ಲಿ 1 ಮೀಟರ್‌ಗಿಂತ ಹೆಚ್ಚಿನ ಆಳದಲ್ಲಿ ಮರಳು ತೆಗೆಯಲು ನಿಷೇಧಿಸಲಾಗಿದೆ. ಆದರೆ, ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸೂಕ್ತ ಸಮರ್ಥನೆ ಮೇರೆಗೆ ಭಾರತ ಸರ್ಕಾರದ ನಿಯಮ, ರಾಜ್ಯ ಅರಣ್ಯ ಮತ್ತು ಪರಿಸರ ಜೀವಿಶಾಸ್ತ್ರದ ಸ್ಪಷ್ಟ ಅಭಿಪ್ರಾಯದೊಂದಿಗೆ ಆಳ ಮರಳು ಗಣಿಗಾರಿಕೆಗೆ ಅವಕಾಶ ನೀಡಬಹುದಾಗಿದೆ ಎಂಬುದನ್ನೇ ಆಧಾರ ಮಾಡಿಕೊಂಡು ನದಿ ಒಡಲು ಬಗೆಯಲಾಗುತ್ತಿದೆ.

‘ಜಿಲ್ಲಾ, ತಾಲ್ಲೂಕು ಮರಳು ಉಸ್ತುವಾರಿ ಸಮಿತಿ ಇದ್ದೂ ಇಲ್ಲದಂತಾಗಿದೆ. ಮರಳು ಕ್ವಾರಿಯಲ್ಲಿ ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿದ್ದರೂ ಅಕ್ರಮ ದಂಧೆ ನಿಂತಿಲ್ಲ. ಅಕ್ರಮ ಮರಳು ಸಾಗಣೆ ಕುರಿತು ಸಾರ್ವಜನಿಕರು ನೀಡುವ ಮಾಹಿತಿ ಸೋರಿಕೆಯಾಗುತ್ತಿದ್ದು, ಸ್ಟಾಕ್ ಯಾರ್ಡ್‌ನಿಂದ ಹತ್ತಾರು ಲೋಡ್ ಮರಳು ಯಾವುದೇ ಅಡೆತಡೆಯಿಲ್ಲದೇ ಶಿವಮೊಗ್ಗಕ್ಕೆ ಸಾಗಣೆಯಾಗುತ್ತಿದೆ’ ಎಂದು ಹೆಸರು ಹೇಳಲಿಚ್ಛಿಸದ ಸಿಬ್ಬಂದಿಯೊಬ್ಬರು ತಿಳಿಸಿದರು.

‘ರಾತ್ರಿ ಹಗಲೆನ್ನದೆ ಮರಳು ಸಾಗಣೆಯಾಗುತ್ತಿದೆ. ಇದೇ ಪ್ರಮಾಣದಲ್ಲಿ ಮರಳು ತೆಗೆದರೆ ನದಿ ಹರಿವಿನ ದಿಕ್ಕು ಬದಲಾಗುವ ಅಪಾಯವಿದೆ. ನದಿ ದಂಡೆ ಸಡಿಲವಾಗುತ್ತಿದ್ದು, ಮಳೆಗಾಲದಲ್ಲಿ ಜಮೀನಿನ ಮೇಲೆ ನೀರು ನುಗ್ಗುವ ಆತಂಕವಿದೆ’ ಎನ್ನುತ್ತಾರೆ ನದಿ ಪಾತ್ರದ ರೈತ ತಿಮ್ಮಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.