ADVERTISEMENT

ಮರಳು ಅಕ್ರಮ ದಾಸ್ತಾನು: ರಾಜಾರೋಷ ಸಾಗಣೆ

ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಂದ ಮುತ್ತಿಗೆ; ಬೆಂಬಲಿಗರೊಂದಿಗೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2021, 4:05 IST
Last Updated 25 ಜೂನ್ 2021, 4:05 IST
ಹೊಸನಗರ ತಾಲ್ಲೂಕು ಸುತ್ತಾ ಮರಳು ಕ್ವಾರಿಯಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಲಾಗಿದೆ ಎಂದು ಆರೋಪಿಸಿ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಪ್ರತಿಭಟನೆ ನಡೆಸಿದರು
ಹೊಸನಗರ ತಾಲ್ಲೂಕು ಸುತ್ತಾ ಮರಳು ಕ್ವಾರಿಯಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಲಾಗಿದೆ ಎಂದು ಆರೋಪಿಸಿ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಪ್ರತಿಭಟನೆ ನಡೆಸಿದರು   

ಹೊಸನಗರ: ‘ಸರ್ಕಾರಿ ಬಳಕೆಗೆಂದು ತೆರೆಯಲಾಗಿರುವ ಮರಳು ಕ್ವಾರಿಯಲ್ಲಿ ರಾಜಾರೋಷವಾಗಿ ಅಕ್ರಮವಾಗಿ ಮರಳು ದಾಸ್ತಾನು ಮತ್ತು ಸಾಗಣೆ ದಂಧೆ ನಡೆಯುತ್ತಿದೆ’ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಆರೋಪಿಸಿದ್ದಾರೆ.

ತಾಲ್ಲೂಕಿನ ಸುತ್ತ ಮರಳು ಕ್ವಾರಿಗೆ ಗುರುವಾರ ಭೇಟಿ ನೀಡಿ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಹಿಂದೆ ಸಾಗರ ಶಾಸಕ ಹಾಲಪ್ಪ ಹರತಾಳು ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಸುರೇಶ್ ಸ್ವಾಮಿರಾವ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಆಲವಳ್ಳಿ ವೀರೇಶ್ ಆವರು ಮರಳು ಕ್ವಾರಿಯಲ್ಲಿ ಅಕ್ರಮ ನಡೆದಿದೆ ಎಂದು ಪ್ರತಿಭಟನೆ ನಡೆಸಿದ್ದರು. ಆದರೆ, ಈಗ ರಾಜಾರೋಷವಾಗಿ ಸರ್ಕಾರಿ ಮರಳು ಕ್ವಾರಿಯಲ್ಲಿಯೇ ದಂಧೆ ನಡೆಯುತ್ತಿದೆ. ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಮರಳು ಸಂಗ್ರಹವಾಗಿದ್ದರೂ, ಯಾರೊಬ್ಬರೂ ಧ್ವನಿ ಎತ್ತುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ರಾತ್ರೋರಾತ್ರಿ ಸಾವಿರಾರು ಲೋಡ್‌ ಮರಳು ಕಳ್ಳ ಸಾಗಣೆ ನಡೆಯುತ್ತಿದ್ದು, ಭಾರಿ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ. ಸರ್ಕಾರದ ಎಲ್ಲ ನಿಯಮಗಳನ್ನೂ ಪಾಲಿಸುತ್ತಿಲ್ಲ. ಕ್ರಿಮಿನಲ್ ಹಿನ್ನೆಲೆಯುಳ್ಳ ಹಾಗೂ ಕೆಳದರ್ಜೆಯ ಗುತ್ತಿಗೆದಾರನಿಗೆ ಹೊಳೆಯಿಂದ ಮರಳು ಎತ್ತಲು ಅನುಮತಿ ನೀಡಲಾಗಿದೆ. ಗುತ್ತಿಗೆ ಅವಧಿ ಮುಗಿದ ಬಳಿಕವೂ ಗಣಿಗಾರಿಕೆ ನಡೆಸಲಾಗುತ್ತಿದೆ. ಸುಮಾರು 2 ಸಾವಿರ ಲೋಡ್‌ ಮರಳನ್ನು ಅಕ್ರಮವಾಗಿ ದಾಸ್ತಾನು ಮಾಡಲಾಗಿದೆ’ ಎಂದು ಆರೋಪಿಸಿದರು.

‘ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾ ಆಗಲಿ, ಬೇಲಿ ವ್ಯವಸ್ಥೆ ಆಗಲಿ ಇಲ್ಲ. ಮಾನದಂಡಗಳನ್ನು ಮೀರಿ ಯಂತ್ರಗಳನ್ನು ಬಳಸಿ ಮರಳು ಸಂಗ್ರಹಿಸಲಾಗುತ್ತಿದೆ. ಕೇವಲ ಸರ್ಕಾರಿ ಕೆಲಸಗಳಿಗೆ ಬಳಸಬಹುದಾದ ಮರಳನ್ನು ರಾತ್ರೋರಾತ್ರಿ ಕಳ್ಳಸಾಗಣೆ ಮೂಲಕ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಭಾರಿ ಪ್ರಮಾಣದ ಅವ್ಯವಹಾರ ನಡೆದಿದೆ. ಅಧಿಕಾರಿವರ್ಗ ಸಂಪೂರ್ಣ ಶಾಮೀಲಾಗಿದೆ. ಸಾಗರ ಶಾಸಕ ಹಾಲಪ್ಪ ಹರತಾಳು ಅವರು ಹಿಂದೆ ಅಕ್ರಮ ಮರಳು ಸಂಗ್ರಹದ ವಿರುದ್ಧ ಧರಣಿ ನಡೆಸಿದ್ದರು. ಈಗ ಲೂಟಿ ನಡೆಯುತ್ತಿರುವುದು ಕಾಣಿಸುತ್ತಿಲ್ಲವೇ?’ ಎಂದು ವಾಗ್ದಾಳಿ ನಡೆಸಿದರು.

ಪ್ರತಿಭಟನೆ: ‘ಮರಳು ಅಕ್ರಮ ದಾಸ್ತಾನನ್ನು ಸರ್ಕಾರ ವಶಕ್ಕೆ ಪಡೆಯಬೇಕು’ ಎಂದು ಒತ್ತಾಯಿಸಿ ತಮ್ಮ ನೂರಾರು ಬೆಂಬಲಿಗರ ಜತೆ ಬೇಳೂರು ಗೋಪಾಲಕೃಷ್ಣ ಪ್ರತಿಭಟನೆ ಮುಂದುವರಿಸಿದರು.

ನಂತರ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸ್ಥಳಕ್ಕೆ ಧಾವಿಸಿ, ‘ಅಕ್ರಮವಾಗಿ ಮರಳು ಸಂಗ್ರಹಿಸಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿಗೆ ದೂರವಾಣಿ ಕರೆ ಮಾಡಿ ಆಗ್ರಹಿಸಿದರು.

ಬಳಿಕ ಸ್ಥಳಕ್ಕೆ ಬಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಅಕ್ರಮ ಕಂಡುಬಂದಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಸಂಗ್ರಹಿಸಿರುವ ಮರಳನ್ನು ಕದ್ದು ಸಾಗಿಸಲು ಅವಕಾಶವಾಗದಂತೆ ಮರಳು ಸಂಗ್ರಹದ ಸುತ್ತಲೂ ಟ್ರಂಚ್ ತೆಗೆಸುವುದಾಗಿ ತಿಳಿಸಿದ ಬಳಿಕ ಮಾಜಿ ಶಾಸಕರು ಪ್ರತಿಭಟನೆ ಅಂತ್ಯಗೊಳಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಅನಿತಾಕುಮಾರಿ, ಬಿ.ಜಿ.ನಾಗರಾಜ್, ಡಿ.ಎಂ.ಸದಾಶಿವ ಶೆಟ್ಟಿ, ಏರಿಗೆ ಉಮೇಶ್, ಬಿ.ಜಿ.ಚಂದ್ರಮೌಳಿ, ಮಾಸ್ತಿಕಟ್ಟೆ ಸುಬ್ರಮಣ್ಯ, ಅಶ್ವಿನಿ, ಸಣ್ಣಕ್ಕಿ ಮಂಜು, ಕರುಣಾಕರ ಶೆಟ್ಟಿ, ಮೋಹನಶೆಟ್ಟಿ, ಜಯನಗರ ಗುರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.