ಸಾಗರ: ಇಲ್ಲಿನ ಗೀರ್ವಾಣಿ ಭಾರತಿ ಟ್ರಸ್ಟ್ ಮುಖ್ಯ ಸಲಹೆಗಾರ ಗಣೇಶ್ ಪಂಡಿತ್ ಅವರಿಗೆ ಕೇಂದ್ರ ಸರ್ಕಾರದ ಉತ್ತಮ ಶಿಕ್ಷಕ ಪ್ರಶಸ್ತಿ ಘೋಷಣೆಯಾಗಿದೆ.
ಗಣೇಶ್ ಪಂಡಿತ್ ಅವರು ಸಂಸ್ಕೃತದಲ್ಲಿ ಮಾಹಿತಿ ತಂತ್ರಜ್ಞಾನ, ತತ್ವಶಾಸ್ತ್ರ ಹಾಗೂ ಮನೋವಿಜ್ಞಾನಕ್ಕೆ ಸಂಬಂಧಪಟ್ಟಂತೆ ಹೊಸ ಆವಿಷ್ಕಾರ ನಡೆಸಿದ ಹೆಗ್ಗಳಿಕೆ ಹೊಂದಿದ್ದಾರೆ.
ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ ಸಾಗರದಲ್ಲಿ ಗೀರ್ವಾಣ ಭಾರತಿ ಟ್ರಸ್ಟ್ ಮೂಲಕ ಸಂಸ್ಕೃತ, ವೇದಾಧ್ಯಯನ, ಉಪನಿಷತ್ತು ಪ್ರಸರಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಮಾಹಿತಿ ತಂತ್ರಜ್ಞಾನ, ತತ್ವಶಾಸ್ತ್ರ ಮತ್ತು ಮನೋವಿಜ್ಞಾನ ವಿಷಯಗಳನ್ನು ಸಂಸ್ಕೃತದಲ್ಲಿ ರೂಪಾಂತರಿಸಿ ಬೋಧಿಸುವಲ್ಲಿ ಅವರು ದೀರ್ಘಕಾಲೀನ ಅನುಭವ ಹೊಂದಿದ್ದಾರೆ. ಪವರ್ ಪಾಯಿಂಟ್ ಪ್ರಸ್ತುತಿ ಕೂಡ ಅವರು ಸಂಸ್ಕೃತದಲ್ಲಿಯೆ ನಿರ್ವಹಿಸುತ್ತಿರುವುದು ಹೆಗ್ಗಳಿಕೆಯ ಸಂಗತಿ.
ಹೊನ್ನಾವರದವರಾದ ಗಣೇಶ್ ಟಿ. ಪಂಡಿತ್ ಅವರು ಬಿ.ಇಡಿ, ಎಂ.ಇಡಿ, ಪಿಎಚ್.ಡಿ ಪದವಿ ಪಡೆದಿದ್ದಾರೆ. 2005ರಿಂದ 2009ರವರೆಗೆ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಶೃಂಗೇರಿಯ ರಾಜೀವ ಗಾಂಧಿ ಪರಿಸರದಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿ, 2009ರಿಂದ 22ರವರೆಗೆ ಸ್ಥಾಯಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಅವರ ಸಂಪಾದನೆಯಲ್ಲಿ ಎರಡು ವರ್ಷಗಳಲ್ಲಿ 50ಕ್ಕೂ ಹೆಚ್ಚು ಗ್ರಂಥಗಳು ಪ್ರಕಟಗೊಂಡಿವೆ. ‘ಶಿಕ್ಷಣ ಮಂತ್ರ’, ‘ಆಸ್ಟ್ರೇಲಿಯ ಆಖ್ಯಾನ’, ‘ಶೈಕ್ಷಣಿಕ ಗುಣೋತ್ಕರ್ಷ’ ಇವರ ಪ್ರಮುಖ ಗ್ರಂಥಗಳಾಗಿವೆ.
ಬ್ರಿಸ್ಟನ್ ಮತ್ತು ಸಿಡ್ನಿಯಲ್ಲಿ ಆಯೋಜಿಸಿದ್ದ ಸಂಸ್ಕೃತ ಸಂವಾದ ಮತ್ತು ಸಮ್ಮೇಳನದಲ್ಲಿ ಗಣಪತಿ ಅವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.