ADVERTISEMENT

ಕಾದ ಕಾವಲಿಯಂತಾದ ರಸ್ತೆಯಲ್ಲೇ ಪಯಣ

ಬಿರು ಬೇಸಿಗೆಯಲ್ಲಿ ತರಗತಿ; ಪದವಿ ವಿದ್ಯಾರ್ಥಿಗಳು ಹೈರಾಣ

​ಪ್ರಜಾವಾಣಿ ವಾರ್ತೆ
Published 3 ಮೇ 2024, 6:38 IST
Last Updated 3 ಮೇ 2024, 6:38 IST
ಸಂತೇಬೆನ್ನೂರು ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿಗಳು ಬಿರುಬಿಸಿಲಿಗೆ ಕಾದ ಕಾವಲಿಯಂತಾಗಿರುವ ರಸ್ತೆಯಲ್ಲೇ ನಡೆದು ಬರುತ್ತಿರುವುದು
ಸಂತೇಬೆನ್ನೂರು ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿಗಳು ಬಿರುಬಿಸಿಲಿಗೆ ಕಾದ ಕಾವಲಿಯಂತಾಗಿರುವ ರಸ್ತೆಯಲ್ಲೇ ನಡೆದು ಬರುತ್ತಿರುವುದು   

ಸಂತೇಬೆನ್ನೂರು: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಈ ಬಾರಿಯ ಬಿರುಬೇಸಿಗೆಯಿಂದ ಹೈರಾಣಾಗಿದ್ದಾರೆ. ಸಂತೇಬೆನ್ನೂರು ಬಸ್ ನಿಲ್ದಾಣದಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ಕಾಲೇಜು ತಲುಪಲು ಬಹುತೇಕ ವಿದ್ಯಾರ್ಥಿಗಳು ಕಾಲ್ನಡಿಗೆಯನ್ನೇ ನಂಬಿಕೊಂಡಿದ್ದು, ಬಿಸಿಲು ವಿದ್ಯಾರ್ಥಿಗಳನ್ನು ಬಸವಳಿಯುವಂತೆ ಮಾಡಿದೆ. 

ದಾವಣಗೆರೆ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ತೆರಳಲು ಸಂತೇಬೆನ್ನೂರು ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಿಂದ ವಿದ್ಯಾರ್ಥಿಗಳು ಸಂತೇಬೆನ್ನೂರು ಬಸ್ ನಿಲ್ದಾಣಕ್ಕೆ ಬಂದಿಳಿಯುತ್ತಾರೆ. ದಾವಣಗೆರೆ ಕಡೆಯಿಂದ ಬಸ್‌ನಲ್ಲಿ ಬರುವ ವಿದ್ಯಾರ್ಥಿಗಳು, ಬಸ್ ನಿಲ್ದಾಣಕ್ಕೂ ಮೊದಲೇ ಸಿಗುವ ಕಾಲೇಜು ಬಳಿ ಇಳಿಯಲು ಅವಕಾಶವಿದೆ. ಆದರೆ ಸಂತೇಬೆನ್ನೂರು, ಚಿತ್ರದುರ್ಗ, ಚನ್ನಗಿರಿ, ಸೂಳೆಕೆರೆ ಕಡೆಯಿಂದ ಬರುವ ವಿದ್ಯಾರ್ಥಿಗಳು ಸಂತೇಬೆನ್ನೂರು ಬಸ್ ನಿಲ್ದಾಣದಲ್ಲಿ ಇಳಿದು, ಅಲ್ಲಿಂದ ನಡೆದುಕೊಂಡೇ ಕಾಲೇಜು ತಲುಪಬೇಕಿದೆ. ಬಿಸಿಲಿನ ಕಾರಣ, ರಸ್ತೆಯು ಕಾದ ಕಾವಲಿಯಂತಾಗಿದ್ದು, ವಿದ್ಯಾರ್ಥಿಗಳು ಪರಿತಪಿಸುತ್ತಿದ್ದಾರೆ.

ದಾವಣಗೆರೆ ಕಡೆಗೆ ಹೋಗುವ ಬಸ್‌ಗಳು ಕಾಲೇಜಿನ ಬಳಿ ನಿಲುಗಡೆ ಮಾಡುವುದಿಲ್ಲ. ಕಾಲೇಜಿನ ಬಳಿ ‘ಕೋರಿಕೆ ನಿಲುಗಡೆ’ ಎಂಬ ಫಲಕ ಹಾಕಲಾಗಿದ್ದರೂ ನಿಲುಗಡೆ ಇಲ್ಲ ಎಂದು ಹೇಳುವ ಬಸ್ ನಿರ್ವಾಹಕರು, ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳುವುದಿಲ್ಲ. ಖಾಸಗಿ ಬಸ್‌ನವರು ಕಾಜೇಜು ಹತ್ತಿರದಲ್ಲಿದೆ ಎಂಬ ಕಾರಣಕ್ಕೆ ಹತ್ತಿಸಿಕೊಳ್ಳುವುದಿಲ್ಲ. ಆಟೊಗಳು ಇವೆಯಾದರೂ, ದಿನವೂ ಆಟೊಗೆ ಹಣ ನೀಡಿ ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಾರೆ. ಹೀಗಾಗಿ ಬಹುತೇಕರು ನಡೆದು ಹೋಗುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. 

ADVERTISEMENT

ಸೆಮಿಸ್ಟರ್ ಪದ್ಧತಿಯಲ್ಲಿ ತರಗತಿಗಳು, ಪರೀಕ್ಷಾ ಅವಧಿ ಹಾಗೂ ರಜಾ ದಿನಗಳಲ್ಲಿ ಏರುಪೇರಾಗಿದೆ. ಎರಡು, ನಾಲ್ಕು ಹಾಗೂ 6ನೇ ಸೆಮಿಸ್ಟರ್‌ ಪದವಿ ತರಗತಿಗಳು 15 ದಿನಗಳ ಹಿಂದೆ ಆರಂಭವಾಗಿವೆ. ಮೇ ತಿಂಗಳು ಶುರುವಾದರೂ, ವಿದ್ಯಾರ್ಥಿಗಳು ಪೂರ್ಣ ಪ್ರಮಾಣದಲ್ಲಿ ತರಗತಿಗಳಿಗೆ ಹಾಜರಾಗುದೇ ಶೈಕ್ಷಣಿಕ ಚಟುವಟಿಕೆ ಮಂದಗತಿಯಲ್ಲಿ ಸಾಗಿದೆ. ಉರಿಯುವ ಬಿಸಿಲಿನಲ್ಲಿ ಕೆಂಡದಂತೆ ಕಾದಿರುವ ರಸ್ತೆಯಲ್ಲಿ ನಡೆದು ಬರಲು ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ. ಹಾಜರಾಗುವ ಕೆಲ ವಿದ್ಯಾರ್ಥಿಗಳು ತರಗತಿಯಲ್ಲಿ ಕುಳಿತ ಪಾಠ ಕೇಳಲು ಝಳ ಅಡ್ಡಿಯಾಗಿದೆ. 

‘ಮನೆಯಿಂದ ಎರಡು ಕಿ.ಮೀ. ಕಾಲೇಜಿಗೆ ನಡೆದೇ ಹೋಗಬೇಕು. ಬಿಸಿ ಗಾಳಿಗೆ, ಕಾದ ಭೂವಿಯ ತಾಪಕ್ಕೆ ಕಾಲೇಜು ಕ್ಯಾಂಪಸ್ ತಲುಪಲು ಸಾಹಸ ಪಡಬೇಕು. ಛತ್ರಿ, ಧೋತಿ ರಕ್ಷಣೆ ಪಡೆದರೂ ಸಾಕಾಗುತ್ತಿಲ್ಲ. ತರಗತಿಗಳಲ್ಲಿ ತಾರಸಿಯೂ ಬಿಸಿಯಾಗುವುದರಿಂದ ಪಾಠ ಕೇಳಲು ಕಷ್ಟವಾಗುತ್ತಿದೆ’ ಎನ್ನುತ್ತಾರೆ ವಿದ್ಯಾರ್ಥಿನಿಯರಾದ ಸಂಜನಾ, ಅರ್ಪಿತಾ.

‘ಕಾಲೇಜು ಬಳಿ ಬಸ್‌ಗಳನ್ನು ನಿಲ್ಲಿಸುವುದಿಲ್ಲ. ಮಧ್ಯಾಹ್ನ ಕಾಲೇಜು ಬಿಟ್ಟಾಗ ಪುನಾ ಬಸ್ ನಿಲ್ದಾಣವನ್ನು ನಡೆದುಕೊಂಡು ತಲುಪಬೇಕಾದರೆ ತುಂಬಾ ದಣಿವಾಗುತ್ತದೆ’ ಎನ್ನುತ್ತಾರೆ ವಿದ್ಯಾರ್ಥಿಗಳಾದ ಆಕಾಶ, ಸುಭಾನುಲ್ಲಾ.

ಬಿಸಿಲ ತಾಪಕ್ಕೆ ದೀರ್ಘಾವಧಿ ಪಾಠ ಕೇಳಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ತರಗತಿಗಳನ್ನು ಅರ್ಧಕ್ಕೆ ತೊರೆದು ವಿದ್ಯಾರ್ಥಿಗಳು ಮನೆ ಸೇರುತ್ತಾರೆ. ಬೇಸಿಗೆ ಅವಧಿಯಲ್ಲಿ ತರಗತಿ ವೇಳಾಪಟ್ಟಿ ಪರಿಷ್ಕರಣೆ ಮಾಡಬೇಕಾದ ಅಗತ್ಯವಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.

ಸಂತೇಬೆನ್ನೂರು ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿನಿಯರು ಬಿರುಬಿಸಿಲಿನಲ್ಲೇ ನಡೆದು ಬರುತ್ತಿರುವುದು

‘ವೇಳಾಪಟ್ಟಿ ಪರಿಷ್ಕರಣೆ ಅಗತ್ಯ’

ಕಾಲೇಜಿನಲ್ಲಿ 418 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಎರಡು ವಾರ ಕಳೆದರೂ ವಿದ್ಯಾರ್ಥಿಗಳು ಪೂರ್ಣ ಪ್ರಮಾಣದಲ್ಲಿ ಹಾಜರಾಗುತ್ತಿಲ್ಲ. ಬಿಸಿಲಿನ ಹೊಡೆತ ಒಂದು ಕಡೆಯಾದರೆ ಪ್ರಾಧ್ಯಾಪಕರನ್ನು ಚುನಾವಣಾ ಕೆಲಸಗಳಿಗೆ ನೇಮಕ ಮಾಡಿರುವುದರಿಂದ ತರಗತಿಗಳಿಗೆ ಹಿನ್ನಡೆಯಾಗಿದೆ. ಜುಲೈ ಅಂತ್ಯಕ್ಕೆ ಅಂತಿಮ ಪರೀಕ್ಷೆ ನಡೆಸಬೇಕು. ಈ ಬಗ್ಗೆ ಸಮಗ್ರವಾಗಿ ಚಿಂತನೆ ನಡೆಸಿ ಸರ್ಕಾರ ವೇಳಾಪಟ್ಟಿ ಪರಿಷ್ಕರಿಸಬೇಕು ಎನ್ನುತ್ತಾರೆ ಪ್ರಾಧ್ಯಾಪಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.