ADVERTISEMENT

ಚೌಡೇಶ್ವರಿ ದೇವಿ ಕೃಪೆಯಿಂದ ದೋಷಮುಕ್ತ: ಕೆ.ಎಸ್.ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 22 ಜುಲೈ 2022, 5:45 IST
Last Updated 22 ಜುಲೈ 2022, 5:45 IST
ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಬಿಜೆಪಿ ನಗರ ಘಟಕದಿಂದ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್‌.ಈಶ್ವರಪ್ಪ ಮಾತನಾಡಿದರು.
ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಬಿಜೆಪಿ ನಗರ ಘಟಕದಿಂದ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್‌.ಈಶ್ವರಪ್ಪ ಮಾತನಾಡಿದರು.   

ಶಿವಮೊಗ್ಗ: ‘ಗುತ್ತಿಗೆದಾರ ಸಂತೋಷ್ ಪಾಟೀಲ್‌ ಆತ್ಮಹತ್ಯೆ ಪ್ರಕರಣದಲ್ಲಿ ದೋಷಮುಕ್ತನಾಗಿ ಹೊರ ಬರುತ್ತೇನೆ ಎಂಬ ವಿಶ್ವಾಸ ನನಗಿತ್ತು. ನಾನು ತಪ್ಪು ಮಾಡಿಲ್ಲ. ನಮ್ಮ ಮನೆ ದೇವತೆಚೌಡೇಶ್ವರಿ ದೇವಿ ಕೃಪೆಯಿಂದ ದೋಷಮುಕ್ತನಾಗಿದ್ದೇನೆ‘ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಬಿಜೆಪಿ ನಗರ ಘಟಕದಿಂದ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರಿಗೆ ಭಜನೆ, ಪೂಜೆ ನೆರವೇರಿಸಿ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನನ್ನಿಂದ ಪಕ್ಷಕ್ಕೆ, ಹಿರಿಯರಿಗೆ ಹಾಗೂ ಕಾರ್ಯಕರ್ತರಿಗೆ ಮುಜುಗರವಾಗಿರುವ ನೋವಿತ್ತು. ಆದರೆ ಇದೀಗ ಆರೋಪ ಮುಕ್ತನಾಗಿದ್ದು, ಸತ್ಯಕ್ಕೆ ಸಂದ ಜಯವಾಗಿದೆ‘ ಎಂದು ಹರ್ಷ ವ್ಯಕ್ತಪಡಿಸಿದರು.

ADVERTISEMENT

‘ಬೆಂಬಲಿಗರು, ಸಾಧು–ಸಂತರು ಕರೆ ಮಾಡಿ ಸಂತೋಷ ವ್ಯಕ್ತಪಡಿಸಿದ್ದಾರೆ. ಅಂದು ಪ್ರತಿಭಟನೆ ಮಾಡಿದ್ದ ಕಾಂಗ್ರೆಸ್‌ನವರು ಕೂಡ ‘ಅಣ್ಣಾ ನಿಮ್ಮ ತಪ್ಪಿಲ್ಲ ಎಂದು ಗೊತ್ತಿದೆ. ಪಕ್ಷದ
ಅಣತಿ ಮೇರೆಗೆ ಪ್ರತಿಭಟನೆ ಮಾಡಿದ್ದೇವೆ’ ಎಂದು ಹೇಳಿದ್ದರು’ ಎಂದು ಸ್ಮರಿಸಿದರು. ‘ಅಲ್ಲದೇ, ಕೆಲವು ಕಾಂಗ್ರೆಸ್ ಮಿತ್ರರು ಅಭಿನಂದನೆ ತಿಳಿಸಿದ್ದಾರೆ. ಎಲ್ಲರಿಗೂ ನಾನು ಆಭಾರಿ’ ಎಂದರು.

ವೇದಿಕೆ ಕಾರ್ಯಕ್ರಮದ ನಂತರ ಬಿಜೆಪಿ ಮಹಿಳಾ ಮೋರ್ಚಾ ಮತ್ತು ಯುವ ಮೋರ್ಚಾ ವತಿಯಿಂದ ಕೋಟೆ ಆಂಜನೇಯ ಸ್ವಾಮಿ ದೇವಾಲಯದಿಂದ ರಾಮಣ್ಣ ಶ್ರೇಷ್ಠಿ ಪಾರ್ಕ್, ಗೋಪಿ ವೃತ್ತ, ಬಾಲರಾಜ್ ಅರಸ್ ರಸ್ತೆ ಮೂಲಕ ಈಶ್ವರಪ್ಪನವರ ಮನೆಯವರೆಗೆ ಬೈಕ್ ರ‍್ಯಾಲಿ ನಡೆಸಲಾಯಿತು.

ಪಕ್ಷದ ಮುಖಂಡ ಭಾನುಪ್ರಕಾಶ್, ಶಾಸಕ ಹರತಾಳು ಹಾಲಪ್ಪ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಮೇಯರ್ ಸುನೀತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಬಿಜೆಪಿ ನಗರ ಘಟಕ ಅಧ್ಯಕ್ಷ ಜಗದೀಶ್, ಜ್ಯೋತಿ ಪ್ರಕಾಶ್, ಎಸ್.ದತ್ತಾತ್ರಿ, ಸೂಡಾ ಅಧ್ಯಕ್ಷ ನಾಗರಾಜ್, ಕೆ.ಇ.ಕಾಂತೇಶ್, ಜ್ಞಾನೇಶ್ವರ್, ಚನ್ನಬಸಪ್ಪ, ಪ್ರಭು, ಸುರೇಖಾ ಮುರಳೀಧರ್, ಸುವರ್ಣಾ ಶಂಕರ್, ಆರತಿ ಆ.ಮ. ಪ್ರಕಾಶ್, ಅನಿತಾ ರವಿಶಂಕರ್, ಬಳ್ಳೆಕೆರೆ ಸಂತೋಷ್, ಇ. ವಿಶ್ವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.