ADVERTISEMENT

ಸಿಎಂ ಸ್ಥಾನದ ರೇಸ್‌ನಲ್ಲಿ ನಾನಿಲ್ಲ: ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 5:22 IST
Last Updated 5 ಜನವರಿ 2026, 5:22 IST
ಶಿವಮೊಗ್ಗದ ನವುಲೆ ಕ್ರೀಡಾಂಗಣದಲ್ಲಿ ಭಾನುವಾರ ವಾಲ್ಮೀಕಿ ಕಪ್ ಕ್ರಿಕೆಟ್ ಟೂರ್ನಿಗೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಕ್ರಿಕೆಟ್ ಆಡುವ ಮೂಲಕ ಚಾಲನೆ ನೀಡಿದರು
ಶಿವಮೊಗ್ಗದ ನವುಲೆ ಕ್ರೀಡಾಂಗಣದಲ್ಲಿ ಭಾನುವಾರ ವಾಲ್ಮೀಕಿ ಕಪ್ ಕ್ರಿಕೆಟ್ ಟೂರ್ನಿಗೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಕ್ರಿಕೆಟ್ ಆಡುವ ಮೂಲಕ ಚಾಲನೆ ನೀಡಿದರು   

ಶಿವಮೊಗ್ಗ: ‘ರಾಜ್ಯದಲ್ಲಿ ಬಜೆಟ್‌ ನಂತರ ಅಧಿಕಾರ ಹಸ್ತಾಂತರದ ಬಗ್ಗೆ ದೆಹಲಿ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಹಾಗೆಂದು ಸದ್ಯ ಸಿ.ಎಂ ಸ್ಥಾನದ ರೇಸ್‌ನಲ್ಲಿ ನಾನು ಇಲ್ಲ. ಅವಕಾಶ ಬಂದಾಗ ನೋಡೋಣ. ಕ್ರಿಕೆಟ್‌ನಲ್ಲಿ ನಾನು ಬ್ಯಾಟಿಂಗ್ ಚೆನ್ನಾಗಿ ಆಡುತ್ತೇನೆ. ರಾಜಕೀಯದಲ್ಲಿ ಗೂಗ್ಲಿ ಬಾಲ್ ಹಾಕಲೇಬೇಕು. ಇಲ್ಲವಾದರೆ ಯಶಸ್ಸು ಸಿಗುವುದಿಲ್ಲ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮಾರ್ಮಿಕವಾಗಿ ಹೇಳಿದರು.

ಇಲ್ಲಿನ ನವುಲೆಯ ಕ್ರೀಡಾಂಗಣದಲ್ಲಿ ಭಾನುವಾರ ರಾಜ್ಯ ವಾಲ್ಮೀಕಿ ನಾಯಕರ ಯುವಪಡೆಯಿಂದ ಆಯೋಜಿಸಲಾಗಿದ್ದ ರಾಜ್ಯಮಟ್ಟದ ವಾಲ್ಮೀಕಿ ಕಪ್ ಟೆನ್ನಿಸ್ ಬಾಲ್ ಟೂರ್ನಿಗೆ ಚಾಲನೆ ನೀಡಿದ ಅವರು ಅದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಈಗ ಮಾತನಾಡುವುದಿಲ್ಲ. ಅದು ಇನ್ನೂ ದೊಡ್ಡ ಮ್ಯಾಚ್. ಅವಕಾಶ ಬಂದಾಗ ಮುಂದೆ ನೋಡೋಣ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ADVERTISEMENT

‘ಜಿ–ರಾಮ್‌ ಜಿ ಯೋಜನೆಗೆ ಕೇಂದ್ರದ ಪಾಲೇ ಹೆಚ್ಚಿದೆ. ಯಾವ ಪಂಚಾಯಿತಿಗೆ ಹಣ ಬಿಡುಗಡೆ ಮಾಡಬೇಕು ಎಂಬ ತೀರ್ಮಾನ ಅವರದ್ದು. ನಮ್ಮ (ರಾಜ್ಯ ಸರ್ಕಾರ) ಬಲ ಹೆಚ್ಚಿಲ್ಲ. ಹೇಗೆ ವಿರೋಧ ಮಾಡೋದು? ಹಾಗಂತ ಸುಮ್ಮನೆ ಕೂರಲೂ ಆಗುವುದಿಲ್ಲ. ಹೀಗಾಗಿ ವಿರೋಧಿಸುತ್ತಿದ್ದೇವೆ’ ಎಂದು ತಿಳಿಸಿದರು.

ಕೂಗೋದು ಬಿಟ್ಟಿರೆ ನಾಯಕರಾಗುತ್ತೀರಿ:

ಶಿವಮೊಗ್ಗ ಹೆಲಿಪ್ಯಾಡ್‌ಗೆ ಸಚಿವ ಸತೀಶ್ ಜಾರಕಿಹೊಳಿ ಬಂದು ಇಳಿದಾಗ ಬೆಂಬಲಿಗರು ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿಗೆ ಜೈ ಎಂದು ಬೆಂಬಲಿಗರು ಕೂಗಿದರು. ಆಗ ‘ಇದರಿಂದ ಏನೂ ಪ್ರಯೋಜನ ಆಗುವುದಿಲ್ಲ. ನೀವು ಹೀಗೆ ಕೂಗುವುದು ಬಿಟ್ಟರೆ ನಾಯಕರಾಗುತ್ತೀರಿ’ ಎಂದು ಜಾರಕಿಹೊಳಿ ಕಿವಿಮಾತು ಹೇಳಿದರು.

ಕಾಂಗ್ರೆಸ್ ಕಚೇರಿಗೆ ಭೇಟಿ:

ರಾಜ್ಯಮಟ್ಟದ ವಾಲ್ಮೀಕಿ ಕಪ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆಗೆ ಶಿವಮೊಗ್ಗಕ್ಕೆ ಬಂದಿದ್ದ ಸತೀಶ್ ಜಾರಕಿಹೊಳಿ ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಗೂ ಭೇಟಿ ನೀಡಿದ್ದರು. ಹೆಲಿಪ್ಯಾಡ್‌ನಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಸ್ವಾಗತಿಸಿದರೆ, ಕಾಂಗ್ರೆಸ್ ಕಚೇರಿಯಲ್ಲಿ ವಿಧಾನಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ವೇತಾ ಬಂಡಿ ನೇತೃತ್ವದಲ್ಲಿ ಗೌರವಿಸಲಾಯಿತು. ನಂತರ ಸಚಿವರು ಕಾರ್ಯಕರ್ತರೊಂದಿಗೆ ಸಭೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.