ಸಾಗರಕ್ಕೆ ಬರುವ ದಾರಿಯಲ್ಲಿ ಶಿವಮೊಗ್ಗದ ಪ್ರವಾಸಿ ಮಂದಿರಕ್ಕೆ ಬಂದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಹಾಗೂ ಮಾಜಿ ಶಾಸಕ ಆಯನೂರು ಮಂಜುನಾಥ್ ನೇತೃತ್ವದಲ್ಲಿ ಸ್ವಾಗತಿಸಲಾಯಿತು
ಶಿವಮೊಗ್ಗ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸೋಮವಾರ ಸಾಗರ ಪಟ್ಟಣಕ್ಕೆ ಬಂದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ನೇತೃತ್ವದಲ್ಲಿ ನಡೆದ ಸೇತುವೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೇ ವಾಪಸ್ ಮರಳಿದರು.
ಸಾಗರ ತಾಲ್ಲೂಕಿನ ಅಂಬಾರಗೋಡ್ಲು-ಕಳಸವಳ್ಳಿ ನಡುವಿನ ಶರಾವತಿ ಹಿನ್ನೀರಿನ ನೂತನ ಸೇತುವೆ ಲೋಕಾರ್ಪಣೆಗೆ ತಮ್ಮನ್ನು ಆಹ್ವಾನಿಸುವಲ್ಲಿ ಶಿಷ್ಟಾಚಾರ ಪಾಲನೆ ಆಗಿಲ್ಲ ಎಂದು ಅಸಮಾಧಾನಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ಪಕ್ಷದ ಸಚಿವರು, ಶಾಸಕರಿಗೆ ಸೂಚನೆ ನೀಡಿದ್ದರು.
ಸಮಾರಂಭದಲ್ಲಿ ಪಾಲ್ಗೊಳ್ಳಲು ಬೆಳಗಾವಿಯಿಂದ ಶಿವಮೊಗ್ಗ ಮೂಲಕ ಸಾಗರಕ್ಕೆ ಬಂದ ಸಚಿವ ಸತೀಶ ಜಾರಕಿಹೊಳಿ, ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೆಲಹೊತ್ತು ತಂಗಿ ವಾಪಸ್ ಮರಳಿದರು. ಅದಕ್ಕೂ ಮುನ್ನ ಸಾಗರದ ಕಾಂಗ್ರೆಸ್ ಮುಖಂಡರೊಂದಿಗೆ ಅಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, 'ಮುಖ್ಯಮಂತ್ರಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವ ವಿಚಾರದಲ್ಲಿ ಕೆಲವರಿಂದ ತಪ್ಪುಗಳು ಆಗಿವೆ. ಯೋಜನೆ ಅವರದ್ದೇ (ಕೇಂದ್ರ) ಆದರೂ ಭೂಮಿ ನಮ್ಮದು. ಹೀಗಾಗಿ ಪರಸ್ಪರ ಸಮನ್ವಯ ಅಗತ್ಯ.ಮುಂದೆ ಇಂತಹ ಸಂಗತಿಗಳು ಮರುಕಳಿಸಬಾರದು' ಎಂದು ಹೇಳಿದರು.
ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಾಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಕಾರ್ಯಕ್ರಮದಿಂದ ದೂರ ಉಳಿದರು.
ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.