
ಶಿವಮೊಗ್ಗ: ಇಲ್ಲಿನ ಮೇರಿ ಇಮ್ಯಾಕ್ಯುಲೇಟ್ ಆಂಗ್ಲ ಮಾಧ್ಯಮ ಶಾಲೆ ಪರಿಸರದಲ್ಲಿ ಭಾನುವಾರ ಹಳೆಯ ವಿದ್ಯಾರ್ಥಿಗಳು ಕಲೆತಿದ್ದರಿಂದ ನಾಲ್ಕೂವರೆ ದಶಕಗಳ ಹಿಂದಿನ ಸವಿ ಸವಿ ನೆನಪುಗಳು ಗರಿಗೆದರಿದ್ದವು. ಬಾಲ್ಯದ ನೆನಪುಗಳ ಒರತೆ ಜೀವ ಪಡೆದು ಸಂತಸ ಗಳಿಗೆಗೆ ತೆರೆದುಕೊಂಡವು.
ಅಲ್ಲಿ ಅಧಿಕಾರ, ಸ್ಥಾನಮಾನದ ಯಾವುದೇ ಭಾವವೂ ಕಾಣಸಿಗಲಿಲ್ಲ. ಬದಲಿಗೆ ಶಿಕ್ಷಕರ ಎದುರು ವಿಧೇಯ ವಿದ್ಯಾರ್ಥಿಗಳ ತಾವು ಕಾಣಸಿಕ್ಕಿತು.
ಹೀಗೆ 46 ವರ್ಷಗಳ ನಂತರ ಅಲ್ಲಿ ಬಾಲ್ಯಕ್ಕೆ, ವಿದ್ಯಾರ್ಥಿ ಬದುಕಿಗೆ ಜೀವ ನೀಡಿದವರಲ್ಲಿ ಮುಂಚೂಣಿಯಲ್ಲಿದ್ದವರು ಸ್ವತಃ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಎಸ್.ಮಧುಬಂಗಾರಪ್ಪ.
ಮಧ್ಯಾಹ್ನ ಶಾಲೆಗೆ ಹಳೆಯ ಸ್ನೇಹಿತರೊಂದಿಗೆ ಮೇರಿ ಇಮ್ಯಾಕ್ಯುಲೇಟ್ ಆಂಗ್ಲ ಮಾಧ್ಯಮ ಶಾಲೆಗೆ ಭೇಟಿ ನೀಡಿದ ಮಧು ಬಂಗಾರಪ್ಪ ಅಲ್ಲಿ ಆಯೋಜಿಸಿದ್ದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗಿಯಾದರು.
ಶಾಲೆಯಲ್ಲಿ 1972ರಿಂದ 1979ರವರೆಗೆ 5ನೇ ತರಗತಿ ತನಕ ಓದಿದ್ದ ವೇಳೆಯ ತಮ್ಮ ಅನುಭವವನ್ನು ಮಧು ಬಂಗಾರಪ್ಪ ಇದೇ ವೇಳೆ ಹಂಚಿಕೊಂಡರು.
ಹಳೇ ಶಾಲೆಯಲ್ಲಿ ಗದ್ದಲದಿಂದ ತುಂಬಿದ ಕಾರಿಡಾರ್, ತರಗತಿ ಕೊಠಡಿಗಳಲ್ಲಿ ಕುಳಿತು ಪಾಠ ಕೇಳಿದ ಬೆಂಚುಗಳು, ಕಪ್ಪುಹಲಗೆಯ ಮೇಲೆ ಸೀಮೆ ಸುಣ್ಣದಲ್ಲಿ ಬರೆದ ನೆನಪುಗಳನ್ನು ತಾಜಾ ಮಾಡಿಕೊಂಡರು. ‘ಇದು ಕೇವಲ ಭೇಟಿಯಾಗಿರಲಿಲ್ಲ, ಬದಲಿಗೆ ಕಾಲವನ್ನು ಬಾಲ್ಯಕ್ಕೆ ಕೊಂಡೊಯ್ದ ಒಂದು ಅದ್ಭುತ ಕ್ಷಣವಾಗಿತ್ತು’ ಎಂದು ಮೆಲುಕು ಹಾಕಿದರು.
‘ಪ್ರಾಥಮಿಕ ಶಾಲಾ ಶಿಕ್ಷಣವು ಶಿಕ್ಷಣದ ಮೊದಲ ಹಂತ. ವಿದ್ಯಾರ್ಥಿಗಳ ಜೀವನಕ್ಕೆ ಅತ್ಯಮೂಲ್ಯವಾದ ಮೌಲ್ಯಗಳನ್ನು ನೀಡುವ ಜೊತೆಗೆ ಗಟ್ಟಿಯಾದ ನೆಲೆ ಕಲ್ಪಿಸುತ್ತವೆ. ಈ ವೇಳೆ ಗುರುಗಳು ಮತ್ತು ಪ್ರೀತಿಯ ಸ್ನೇಹಿತರೊಂದಿಗಿನ ಈ ಭೇಟಿಯು ಮತ್ತಷ್ಟು ಖುಷಿ ತಂದಿದೆ. ಇಂತಹ ಭೇಟಿಗಳು ಜೀವನದಲ್ಲಿ ಸಂತೋಷ, ತೃಪ್ತಿ ನೀಡುತ್ತವೆ ಮತ್ತು ನಮ್ಮ ಜೀವನದ ಪಯಣದಲ್ಲಿ ಸದಾ ನೆನಪಿನಲ್ಲಿ ಉಳಿಯುವಂತೆ ಮಾಡುತ್ತವೆ’ ಎಂದು ಮಧು ಬಂಗಾರಪ್ಪ ಸ್ಮರಿಸಿದರು.
‘ಶಾಲಾ ಶಿಕ್ಷಣ ಸಚಿವನಾಗಿ ಓದಿದ್ದ ಶಾಲೆಗೆ ಮತ್ತೆ ಬರಲು, ಶಾಲೆಗೆ ಅಳಿಲು ಸೇವೆ ಸಲ್ಲಿಸುವ ಅವಕಾಶ ಸಿಕ್ಕಿರುವುದು ಹೆಮ್ಮೆ ಅನ್ನಿಸುತ್ತಿದೆ’ ಎಂದರು. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಿಗೆ ವಂದಿಸಿ, ಜೊತೆಯಲ್ಲಿ ಓದಿದ್ದ ಗೆಳೆಯರೊಂದಿಗೆ ಹರಟಿದರು.
ಗೃಹ ಇಲಾಖೆ ಕಾರ್ಯದರ್ಶಿ ಡಾ.ಶರತ್ ಚಂದ್ರ, ಎಸ್.ಕೆ.ದಯಾನಂದ, ಡಾ.ಸುರೇಶ್ ಚೌಹಾಣ್, ಡಾ.ಪ್ರಕಾಶ್ ನಾಯಕ್, ವಿಜಯ್ ಕುಮಾರ್, ಜಾನ್ ಪೌಲ್, ನಾಗೇಶ್, ಪಿ.ಕೆ.ಅರವಿಂದ, ಡಾ.ವಿಜಯಾನಂದ, ಡಾ.ರವಿಕುಮಾರ್, ರೂಪಾ ಶೆಟ್ಟಿ, ಶೀಲಾ ಮರಿಯಾ, ಎಂ.ಪ್ರವೀಣ್, ಸತ್ಯ ಕುಮಾರ್, ಆರ್.ರಮೇಶ, ಮೊಹಮ್ಮದ್ ಸಲೀಂ, ಮೊಹಮ್ಮದ್ ಅನ್ವರ್, ಸಮೀಉಲ್ಲಾ, ಸಚೀಂದ್ರ, ಎಸ್.ಎಂ.ಚಂದ್ರಶೇಖರ್, ಎನ್.ಡಿ.ಅನಿಲ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.