ADVERTISEMENT

ಶಿವಮೊಗ್ಗ: ಶಾಲೆ ಆರಂಭ, ಎಲ್ಲಡೆ ಮಕ್ಕಳ ಕಲರವ

ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಸಿಹಿ ವಿತರಿಸಿ, ಹೂವು ನೀಡಿ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿದ ಶಿಕ್ಷಕರು

​ಪ್ರಜಾವಾಣಿ ವಾರ್ತೆ
Published 17 ಮೇ 2022, 4:22 IST
Last Updated 17 ಮೇ 2022, 4:22 IST
ಶಿವಮೊಗ್ಗ ನಗರದ ಬಿ.ಬಿ. ಸ್ಟ್ರೀಟ್‍ನಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ಮಕ್ಕಳಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಉಚಿತವಾಗಿ ಬ್ಯಾಗ್, ನೋಟ್‍ಬುಕ್‌ ಹಾಗೂ ಪೆನ್ನುಗಳನ್ನು ವಿತರಿಸಿದರು (ಎಡಚಿತ್ರ). ಶಿವಮೊಗ್ಗದ ಬಸವೇಶ್ವರ ನಗರದಲ್ಲಿರುವ ಆಕ್ಸ್‌ಫರ್ಡ್‌ ಶಾಲೆಯ ವಿದ್ಯಾರ್ಥಿಗಳು ಮೊದಲ ದಿನ ಶಾಲೆಗೆ ತೆರಳಿದ್ದು ಹೀಗೆ.
ಶಿವಮೊಗ್ಗ ನಗರದ ಬಿ.ಬಿ. ಸ್ಟ್ರೀಟ್‍ನಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ಮಕ್ಕಳಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಉಚಿತವಾಗಿ ಬ್ಯಾಗ್, ನೋಟ್‍ಬುಕ್‌ ಹಾಗೂ ಪೆನ್ನುಗಳನ್ನು ವಿತರಿಸಿದರು (ಎಡಚಿತ್ರ). ಶಿವಮೊಗ್ಗದ ಬಸವೇಶ್ವರ ನಗರದಲ್ಲಿರುವ ಆಕ್ಸ್‌ಫರ್ಡ್‌ ಶಾಲೆಯ ವಿದ್ಯಾರ್ಥಿಗಳು ಮೊದಲ ದಿನ ಶಾಲೆಗೆ ತೆರಳಿದ್ದು ಹೀಗೆ.   

ಶಿವಮೊಗ್ಗ: ಜಿಲ್ಲೆಯಲ್ಲಿ ಸೋಮವಾರದಿಂದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಆರಂಭಗೊಂಡಿದ್ದು, ಎಲ್ಲ ಶಾಲೆಗಳಲ್ಲೂ ಸಿಹಿ ವಿತರಿಸಿ, ಹೂವು ನೀಡಿ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲಾಯಿತು.

ಬಹುತೇಕ ಶಾಲೆಗಳಿಗೆ ತಳಿರು ತೋರಣ, ಬಾಳೆಕಂದು ಕಟ್ಟಿ, ರಂಗೋಲಿ ಹಾಕಿ ಸಿಂಗರಿಸಲಾಗಿತ್ತು. ವಿದ್ಯಾರ್ಥಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗಳಿಗೆ ಆಗಮಿಸಿದ್ದರು. ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಶಾಲೆಯ ಮುಂದೆ ರಂಗೋಲಿ ಬಿಡಿಸಿ, ಮಕ್ಕಳಿಗೆ ಸ್ವಾಗತ ಕೋರಲಾಯಿತು. ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಚಾಕೊಲೇಟ್ ವಿತರಿಸಲಾಯಿತು.

ದುರ್ಗಿಗುಡಿ ಶಾಲೆಯಲ್ಲಿ ಸಂಭ್ರಮ: ನಗರದ ದುರ್ಗಿಗುಡಿ ಸರ್ಕಾರಿ ಶಾಲೆಯಲ್ಲಿ ಸೋಮವಾರ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಶಾಲೆ ಆವರಣದಲ್ಲಿ ಎಲ್ಲೆಲ್ಲೂ ಮಕ್ಕಳ ಕಲರವ, ಓಡಾಟ, ಕೂಗಾಟ, ಸ್ನೇಹಿತರೊಂದಿಗೆ ಕುಣಿದಾಟ ಕಂಡು ಬಂತು.

ADVERTISEMENT

ಶಾಲೆಗೆ ಬಂದ ಮಕ್ಕಳು ತಮ್ಮ ಸಹಪಾಠಿಗಳನ್ನು ಭೇಟಿಯಾಗಿ ಖುಷಿಪಟ್ಟರು. ಶಾಲೆ ಆವರಣದಲ್ಲಿ ರಜೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಕೆಲ ಹರಟೆ ಹೊಡೆದರು.

ಶಿಕ್ಷಕರ ಮೊಗದಲ್ಲಿ ಮಂದಹಾಸ: ಕೊರೊನಾ ಸಂದರ್ಭದಲ್ಲಿ ಶಾಲೆಗಳಲ್ಲಿ ಗೊಂದಲದ ವಾತಾವರಣವಿತ್ತು. ಈಗ ಎಲ್ಲಾ ಅಡೆತಡೆ, ಆತಂಕಗಳು ದೂರಾಗಿದ್ದು, ಶಿಕ್ಷಕರ ಮೊಗದಲ್ಲಿ ಮಂದಹಾಸ ಮೂಡಿತ್ತು. ಶಿಕ್ಷಕರು ಉತ್ಸಾಹದಿಂದ ಶಾಲೆಗಳನ್ನು ಅಲಂಕಾರ ಮಾಡಿದ್ದರು. ನೋಟಿಸ್‌ ಬೋರ್ಡ್‌ಗಳಲ್ಲಿ ಮಕ್ಕಳಿಗೆ ಇಷ್ಟವಾಗುವ ಫೋಟೊಗಳು, ಬೊಂಬೆಗಳ ಚಿತ್ರಗಳನ್ನು ಅಂಟಿಸಿದ್ದರು.

ಬಹುತೇಕ ಶಾಲೆಗಳಲ್ಲಿ ಮೊದಲ ದಿನವೇ ಹೊಸ ಪಠ್ಯ ಪುಸ್ತಕ ವಿತರಿಸಲಾಯಿತು. ಖಾಸಗಿ ಶಾಲೆಗಳಲ್ಲಿಯೂ ಮಕ್ಕಳಿಗೆ ಅದ್ದೂರಿ ಸ್ವಾಗತ ನೀಡಲಾಯಿತು. ಕಣ್ಣೀರು ಹಾಕುತ್ತ ಬರುತ್ತಿದ್ದ ಮಕ್ಕಳನ್ನು ಶಿಕ್ಷಕರು, ಶಾಲಾ ಆಡಳಿತ ಮಂಡಳಿ ಸಿಬ್ಬಂದಿ ಸಂತೈಸಿ ತರಗತಿಗೆ ಕರೆದೊಯ್ದರು.

ಮೊದಲ ದಿನ ಸೆಲ್ಫಿ: ಮೊದಲ ದಿನ ಶಾಲೆಗೆ ಮಕ್ಕಳನ್ನು ಕರೆತಂದ ಪೋಷಕರು ಖುಷಿಯಿಂದ ಸೆಲ್ಫಿ ಕ್ಲಿಕ್ಕಿಸಿಕೊಂಡರು.

ಮಕ್ಕಳಿಗೆ ಉಚಿತವಾಗಿ ನೋಟ್‌ಬುಕ್‌ ವಿತರಣೆ
ರಾಜ್ಯದ ಒಳನಾಡು ಹಾಗೂ ಗಡಿಭಾಗದಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆ ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘವು ₹ 50 ಲಕ್ಷ ಆರ್ಥಿಕ ನೆರವು ಒದಗಿಸಲು ಉದ್ದೇಶಿಸಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ತಿಳಿಸಿದರು.

ಶಿವಮೊಗ್ಗ ನಗರದ ಬಿ.ಬಿ. ಸ್ಟ್ರೀಟ್‍ನಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತವಾಗಿ ಬ್ಯಾಗ್, ನೋಟ್‍ಬುಕ್‌ ಹಾಗೂ ಪೆನ್ನುಗಳನ್ನು ವಿತರಿಸಿ ಅವರು ಮಾತನಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ಮಾತನಾಡಿ, ‘ಸರ್ಕಾರವು ಈಗಾಗಲೇ ಶೇ 70ರಷ್ಟು ಪುಸ್ತಕ, ಸಮವಸ್ತ್ರ ಸರಬರಾಜು ಮಾಡಿದೆ. ಮುಂದಿನ 3-4 ದಿನಗಳಲ್ಲಿ ಉಳಿದ ಎಲ್ಲ ಮಕ್ಕಳಿಗೆ ಪುಸ್ತಕ ಮತ್ತು ಸಮವಸ್ತ್ರ ಒದಗಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.