ADVERTISEMENT

ಶಿವಮೊಗ್ಗ:' ₹11.70 ಕೋಟಿಯಲ್ಲಿ ವಿಜ್ಞಾನ ವಸ್ತು ಸಂಗ್ರಹಾಲಯ'

ನಗರದ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ನಿರ್ಮಾಣ: ಸಂಸದ ಬಿ.ವೈ. ರಾಘವೇಂದ್ರ ಮಾಹಿತಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 6:44 IST
Last Updated 4 ಫೆಬ್ರುವರಿ 2023, 6:44 IST
ಬಿ.ವೈ.ರಾಘವೇಂದ್ರ
ಬಿ.ವೈ.ರಾಘವೇಂದ್ರ   

ಶಿವಮೊಗ್ಗ: ನಗರದ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ₹ 11.70 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ವಿಜ್ಞಾನ ವಸ್ತು ಸಂಗ್ರಹಾಲಯ (ಎನ್‌ಎಸ್‌ಸಿಎಂ) ಆರಂಭಿಸಲಾಗುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.

ಖೇಲೋ ಇಂಡಿಯಾದಿಂದ ಕ್ರೀಡಾ ಸಂಕೀರ್ಣದಲ್ಲಿ ಆರಂಭಿಸಲು ಉದ್ದೇಶಿಸಲಾಗಿತ್ತು. ಆದರೆ, ಇದಕ್ಕೆ ಪರ ಹಾಗೂ ವಿರೋಧ ವ್ಯಕ್ತವಾಗಿದ್ದರಿಂದ ಆ ಯೋಜನೆ ಕೈ ಬಿಡಲಾಗಿದೆ. ಅಕಾಡೆಮಿಕ್ ಉದ್ದೇಶದಿಂದ ವಸ್ತು ಸಂಗ್ರಹಾಲಯ ಆರಂಭಿಸಲಾಗುತ್ತಿದೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೇಂದ್ರ ಸರ್ಕಾರ ಮ್ಯೂಸಿಯಂ ಆರಂಭಕ್ಕೆ ಅನುಮತಿ ನೀಡಿದೆ. ₹11.70 ಕೋಟಿ ಸ್ಥಾಪನಾ ವೆಚ್ಚ ಹಾಗೂ ₹3.50 ಕೋಟಿ ನಿರ್ವಹಣಾ ವೆಚ್ಚ ಸೇರಿ ಒಟ್ಟು ₹ 15.20 ಕೋಟಿ ಮಂಜೂರು ಮಾಡಿದೆ. ಸಂಶೋಧನಾ ಚಟುವಟಿಕೆ ಕೈಗೊಳ್ಳಲು ಈ ಕೇಂದ್ರ ನೆರವಾಗಲಿದೆ. ಖೇಲೋ ಇಂಡಿಯಾ ಕ್ರೀಡಾ ಸಂಕೀರ್ಣವನ್ನು ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಪಕ್ಕದ ಸುಮಾರು 25 ಎಕರೆ ಜಾಗದಲ್ಲಿ ಸ್ಥಾಪಿಸುವ ಚಿಂತನೆ ನಡೆದಿದೆ. ಇದು
₹ 70 ಕೋಟಿ ವೆಚ್ಚದ ಯೋಜನೆಯಾಗಿದೆ ಎಂದು ಮಾಹಿತಿ ನೀಡಿದರು.

ADVERTISEMENT

ಅಂತಿಮ ಸಿದ್ಧತೆ: ವಿಮಾನ ನಿಲ್ದಾಣ ಉದ್ಘಾಟನೆಗೆ ಅಂತಿಮ ಸಿದ್ಧತೆ ನಡೆದಿದೆ. ನಿಲ್ದಾಣಕ್ಕೆ ಪರವಾನಗಿ ನೀಡಲು ನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ಅಧಿಕಾರಿಗಳು ಶೀಘ್ರ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಫೆ.27ರಂದು ಲೋಕಾರ್ಪಣೆ ಸಂಬಂಧ ಇನ್ನೂ ಕೇಂದ್ರದಿಂದ ಯಾವುದೇ ಲಿಖಿತ ಮಾಹಿತಿ ಬಂದಿಲ್ಲ
ಎಂದರು.

ವಿಮಾನ ನಿಲ್ದಾಣ ಸಂಪೂರ್ಣ ನಿರ್ವಹಣೆಯನ್ನು ರಾಜ್ಯ ಸರ್ಕಾರವೇ ಮಾಡಲಿದೆ. ವಿಮಾನ ಮಾರ್ಗಗಳನ್ನು ಇಂಡಿಗೋ ಮತ್ತು ಸ್ಟಾರ್ ಏರ್‌ಲೈನ್ಸ್ ನಿರ್ವಹಿಸಲಿದೆ ಎಂದು ಹೇಳಿದರು.

‘ವಿಮಾನ ನಿಲ್ದಾಣ ಲೋಕಾರ್ಪಣೆ ಮುನ್ನ ಸಂತ್ರಸ್ತರಿಗೆ ನಿವೇಶನ ನೀಡಲಾಗುತ್ತದೆ. ನಿವೇಶನಕ್ಕಾಗಿ ಸಂತ್ರಸ್ತರು ಅನಗತ್ಯವಾಗಿ ಪ್ರತಿಭಟನೆ ನಡೆಸುವುದು ಬೇಡ. ನಿವೇಶನ ನೀಡಿಕೆ ಸರ್ಕಾರದಿಂದ ವಿಳಂಬವಾಗಿಲ್ಲ. ಬದಲಾಗಿ ನ್ಯಾಯಾಲಯಕ್ಕೆ ಹೋಗಿರುವುದರಿಂದ ತಡವಾಗಿದೆ. ವಿಮಾನ ನಿಲ್ದಾಣ ಉದ್ಘಾಟನೆಗೂ ಮುನ್ನ ಎಲ್ಲಾ ಸಂತ್ರಸ್ತರಿಗೂ ನಿವೇಶನ ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ. ಮೇಘರಾಜ್, ಶಾಸಕ ಕೆ.ಬಿ. ಅಶೋಕ್‌ನಾಯ್ಕ, ಪ್ರಮುಖರಾದ ಎಸ್.ಎಸ್. ಜ್ಯೋತಿಪ್ರಕಾಶ್, ಶಿವರಾಜ್, ಅಣ್ಣಪ್ಪ, ಬಿ.ಕೆ. ಶ್ರೀನಾಥ್, ಹರಿಕೃಷ್ಣ, ಚಂದ್ರಶೇಖರ್ ಇದ್ದರು.

ವಿಮಾನ ನಿಲ್ದಾಣದಲ್ಲಿ ಉದ್ಯೋಗ ನೀಡುವುದಾಗಿ ಜಾಲತಾಣಗಳಲ್ಲಿ ನಕಲಿ ಜಾಹೀರಾತು ನೀಡಿರುವುದು ಗಮನಕ್ಕೆ ಬಂದಿದೆ. ಇದನ್ನು ನಂಬಿ ಯುವ ಸಮೂಹ ಮೋಸ ಹೋಗಬಾರದು. ನಕಲಿ ಜಾಹೀರಾತು ನೀಡಿದವರ ಮೇಲೆ ಕ್ರಮ ಜರುಗಿಸಲಾಗುವುದು.

-ಬಿ.ವೈ. ರಾಘವೇಂದ್ರ, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.