ADVERTISEMENT

ಅಡಿಕೆ ಸಂಶೋಧನೆ, ಅಭಿವೃದ್ಧಿಗೆ ಪ್ರತ್ಯೇಕ ಮಂಡಳಿ ರಚನೆಯಾಗಬೇಕು: ಪ್ರೊ.ಪ್ರಕಾಶ್

ಸಹಕಾರ ತತ್ವದಡಿ ಅಡಿಕೆಯ ಮೌಲ್ಯವರ್ಧನೆಗೆ ಪ್ರಕಾಶ ಕಮ್ಮರಡಿ ಸಲಹೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2022, 5:20 IST
Last Updated 22 ನವೆಂಬರ್ 2022, 5:20 IST
ಶಿವಮೊಗ್ಗದಲ್ಲಿ ಸೋಮವಾರ ಅಡಿಕೆ ವರ್ತಕರ ಸಂಘದ ಸಭಾಂಗಣದಲ್ಲಿ ನಡೆದ ಸಂವಾದದಲ್ಲಿ ಪ್ರೊ.ಪ್ರಕಾಶ ಕಮ್ಮರಡಿ ಮಾತನಾಡಿದರು
ಶಿವಮೊಗ್ಗದಲ್ಲಿ ಸೋಮವಾರ ಅಡಿಕೆ ವರ್ತಕರ ಸಂಘದ ಸಭಾಂಗಣದಲ್ಲಿ ನಡೆದ ಸಂವಾದದಲ್ಲಿ ಪ್ರೊ.ಪ್ರಕಾಶ ಕಮ್ಮರಡಿ ಮಾತನಾಡಿದರು   

ಶಿವಮೊಗ್ಗ: ‘ಕಾಫಿ ಮಂಡಳಿ, ತೆಂಗು, ಗೇರು, ರಬ್ಬರ್‌ ಅಭಿವೃದ್ಧಿ ಮಂಡಳಿ, ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯ ರೀತಿ ರಾಜ್ಯದಲ್ಲಿ ಅಡಿಕೆ ಬೆಳೆಯ ಸಂಶೋಧನೆ ಹಾಗೂ ಅಭಿವೃದ್ಧಿಗೆ ಸಹಕಾರಿ ತತ್ವದಡಿ ಪ್ರತ್ಯೇಕ ಮಂಡಳಿ ರಚನೆಯಾಗಬೇಕು’ ಎಂದು ಕೃಷಿ ವಿಜ್ಞಾನಿ ಪ್ರೊ.ಪ್ರಕಾಶ್ ಕಮ್ಮರಡಿ ಹೇಳಿದರು.

ಇಲ್ಲಿ ಸೋಮವಾರ ಅಡಿಕೆ ವರ್ತಕರು ಮತ್ತು ಬೆಳೆಗಾರರ ಜೊತೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ‘ಅಡಿಕೆಗೆ ಸ್ವತಂತ್ರ ಮಂಡಳಿ ಆದರೆ ಮಾತ್ರ ಬೆಲೆ ಸಿಗಲು ಸಾಧ್ಯ. ಬೆಳೆ ಪ್ರದೇಶ ವಿಸ್ತರಣೆ ವಿಚಾರದಲ್ಲಿನ ಅನಿಶ್ಚಿತತೆ, ರೋಗ–ರುಜಿನಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ’ ಎಂದರು.

‘ಅಡಿಕೆ ಅಭಿವೃದ್ಧಿ ಮಂಡಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆಎರ್ಥಿಕ ನೆರವು ನೀಡಬೇಕು. ಬೆಳೆಗಾರರಿಂದಲೂ ಪ್ರತಿ ಕ್ವಿಂಟಲ್‌ಗೆ ₹100ರಂತೆ ಸೆಸ್ ಸಂಗ್ರಹಿಸಿ ಮಂಡಳಿಗೆ ಕೊಡಬೇಕು. ಆಗ ಅಡಿಕೆ ಬೆಳೆಯ ಸಂಶೋಧನೆ ಹಾಗೂ ಅಭಿವೃದ್ಧಿಗೆ ಅವಕಾಶ ಸಿಗಲಿದೆ. ಅಡಿಕೆ ಬೆಳೆಗೆ ಸಂಬಂಧಿಸಿದ ಸೊಸೈಟಿಗಳನ್ನು ಈ ಮಂಡಳಿಯ ವ್ಯಾಪ್ತಿಗೆ ತರಬಹುದಾಗಿದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಹವಾಮಾನ ಬದಲಾವಣೆ ಫಲ: ‘ಹವಾಮಾನ ಬದಲಾವಣೆಯ ಸಣ್ಣ ಫಲ ಅಡಿಕೆಗೆ ಬಾಧಿಸಿರುವ ಎಲೆಚುಕ್ಕಿ ರೋಗ. ಅದು ಈಗ ಅಡಿಕೆ ತೋಟಗಳನ್ನೇ ಬಲಿ ತೆಗೆದುಕೊಳ್ಳುತ್ತಿದೆ. ಈ ರೋಗದಿಂದ ಮಲೆನಾಡಿನ ಅಡಿಕೆ ಬೆಳೆಗಾರರು ಹೆದರಿದ್ದಾರೆ. ಆದರೆ, ಇದೊಂದು ಫಂಗಸ್ ಜನ್ಯ ರೋಗ ಆಗಿರುವುದರಿಂದ ನಿಯಂತ್ರಣಕ್ಕೆ ಬರಲಿದೆ’ ಎಂದರು.

‘ಅಡಿಕೆಗೆ ಎಲೆ ಚುಕ್ಕೆ ರೋಗ ಹೊಸದೇನೂ ಅಲ್ಲ. ಹಿಂದೆಯೂ ಇತ್ತು. ಮುಂದೆಯೂ ಇರಲಿದೆ. ಆದರೆ ರೋಗ ಕಾಣಿಸಿಕೊಂಡಿರುವ ಕಡೆ ಒಬ್ಬ ರೈತರು ಔಷಧಿ ಸಿಂಪರಣೆ ಮಾಡಿ, ಮತ್ತೊಬ್ಬರು ಸುಮ್ಮನೇ ಇದ್ದರೆ ಆಗುವುದಿಲ್ಲ. ಸಾಮೂಹಿಕ ಚಿಕಿತ್ಸಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಹಿಂದೆಲ್ಲ ಜೂನ್‌ನಲ್ಲಿ ಮಳೆಗಾಲ ಆರಂಭವಾಗಿ ಅಕ್ಟೋಬರ್ ವೇಳೆಗೆ ಮುಗಿಯುತ್ತಿತ್ತು. ಈಗ ಹಾಗೆ ಆಗುತ್ತಿಲ್ಲ. ಮೇ ತಿಂಗಳಿಂದ ಆರಂಭವಾಗಿ ಜನವರಿ ತಿಂಗಳವರೆಗೂ ಮಳೆ ಸುರಿಯುತ್ತಿದೆ. ವಾತಾವರಣದಲ್ಲಿ ತೇವಾಂಶ ಹೆಚ್ಚಾದರೆ ಅಡಿಕೆ ಎಲೆ ಚುಕ್ಕೆ ರೋಗದ ಶಿಲೀಂದ್ರ ಬೆಳವಣಿಗೆಗೆ ಸಹಾಯಕವಾಗಿದೆ. ಬಿಸಿಲು ಬಿದ್ದರೆ ಈ ರೋಗ ತಾನಾಗಿಯೇ ಹತೋಟಿಗೆ ಬರುತ್ತದೆ. ಇದರ ಜೊತೆಗೆ ಮಣ್ಣಿನ ನಿರ್ವಹಣೆಯೂ ಮುಖ್ಯ’ ಎಂದು ಹೇಳಿದರು. ಸಂವಾದದಲ್ಲಿ ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಡಿ.ಎಂ.ಶಂಕರಪ್ಪ, ರೈತ ಮುಖಂಡ ಕೆ.ಟಿ.ಗಂಗಾಧರ್ ಇದ್ದರು.

***

‘ಕ್ವಿಂಟಲ್‌ಗೆ ₹1 ಲಕ್ಷ ಬೆಲೆ ಪಡೆಯಬಹುದು’

‘ಗುಟ್ಕಾ ನಿಷೇಧ ಹೆಬ್ಬಾವು ಇನ್ನೂ ಸತ್ತಿಲ್ಲ. ಇನ್ನೂ ಮಲಗಿದೆ. ನ್ಯಾಯಾಲಯ ಅಂತಿಮ ತೀರ್ಮಾನ ಕೊಟ್ಟಿಲ್ಲ. ಅಡಿಕೆ ಸೇವನೆ ಆರೋಗ್ಯಕ್ಕೆ ಹಾನಿಕರವಲ್ಲ ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿಲ್ಲ. ಹೀಗಾಗಿ, ಗುಟ್ಕಾ ಹೊರತಾಗಿ ಅಡಿಕೆಯ ಪರ್ಯಾಯ ಬಳಕೆಗೆ ಆದ್ಯತೆ ನೀಡುವ ಅಗತ್ಯವಿದೆ’ ಎಂದು ಪ್ರೊ.ಪ್ರಕಾಶ ಕಮ್ಮರಡಿ ಅಭಿಪ್ರಾಯಪಟ್ಟರು.

‘ವಾಸ್ತವವಾಗಿ ಅಡಿಕೆಯೇ ಕಲ್ಪವೃಕ್ಷ. ಅಡಿಕೆ ಎಲೆ, ಕಾಯಿ, ಹಾಳೆ, ಕಾಂಡ ಎಲ್ಲವೂ ಬಳಕೆಯಾಗುತ್ತದೆ. ಸಮುದ್ರದಲ್ಲಿ ಉಪ್ಪು ನೀರಿಗೆ ಹಡಗಿನ ಹಲಗೆಗಳು ಹಾಳಾಗದಂತೆ ಅಡಿಕೆಯಿಂದ ಮಾಡಿದ ಬಣ್ಣ ಬಳಿಯಲಾಗುತ್ತಿದೆ. ಸಾಗರದ ಚರಕ ಸಂಸ್ಥೆಯವರು ಬಟ್ಟೆಗೆ ಅಡಿಕೆಯ ಬಣ್ಣ ಬಳಸುತ್ತಿದ್ದಾರೆ. ಸಂಶೋಧನೆ, ಅಭಿವೃದ್ಧಿಗೆ ಒತ್ತು ಕೊಟ್ಟರೆ ಇನ್ನಷ್ಟು ಸಾಧ್ಯತೆಗಳ ಬಗ್ಗೆ ಬೆಳಕು ಚೆಲ್ಲಬಹುದು. ಅಡಿಕೆಯಲ್ಲಿನ ಜಿಡ್ಡನ್ನು ಸೌಂದರ್ಯ ವರ್ಧಕಗಳ ತಯಾರಿಕೆಗೆ ಬಳಕೆಯಾಗುತ್ತಿದೆ. ಬಣ್ಣವಾಗಿ, ಔಷಧ ತಯಾರಿಕೆಯಲ್ಲಿ ಬಳಕೆಯಾಗುತ್ತಿದೆ. ಹೀಗೆ ಅಡಿಕೆಯನ್ನು ಬೇರೆ ಬೇರೆ ಸಾಧ್ಯತೆಗಳಲ್ಲಿ ಬಳಕೆ ಮಾಡಿಕೊಂಡರೆ ಕ್ವಿಂಟಲ್‌ಗೆ ₹ 1 ಲಕ್ಷದವರೆಗೆ ಬೆಲೆ ಪಡೆಯಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.