ADVERTISEMENT

ಬಾಲಕಿಗೆ ಲೈಂಗಿಕ ಕಿರುಕುಳ; ಯುವಕನಿಗೆ ಒಂದು ವರ್ಷ ಜೈಲು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 5:19 IST
Last Updated 17 ಸೆಪ್ಟೆಂಬರ್ 2022, 5:19 IST

ಶಿವಮೊಗ್ಗ: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಯುವಕನಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಒಂದು ವರ್ಷ ಸಾಧಾರಣ ಕಾರಾಗೃಹ ಶಿಕ್ಷೆ ಹಾಗೂ ₹30 ಸಾವಿರ ದಂಡ ವಿಧಿಸಿದೆ.ದಂಡ ಕಟ್ಟಲು ವಿಫಲವಾದರೆ 10 ತಿಂಗಳ ಸಾದಾ ಸೆರೆವಾಸ ಶಿಕ್ಷೆ ವಿಧಿಸಿ ಆದೇಶಿಸಲಾಗಿದೆ.

ಸಾಗರ ತಾಲ್ಲೂಕಿನ ನಿವಾಸಿ (19 ವರ್ಷ) ಶಿಕ್ಷೆಗೊಳಗಾದವನು. ಈತನು 2022ರ ಏಪ್ರಿಲ್ 28 ರ ಸಂಜೆ 14 ವರ್ಷದ ಬಾಲಕಿಯು ತನ್ನ ಮನೆಯ ಕಡೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದನು.

ಬಾಲಕಿಯ ಪೋಷಕರು ಈ ಬಗ್ಗೆ ಜೋಗ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಪೋಕ್ಸೋ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಜೋಗ ಠಾಣೆ ಪಿಎಸ್‌ಐ ನಿರ್ಮಲಾ ಸದರಿ ಪ್ರಕರಣದ ತನಿಖೆ ಕೈಗೊಂಡು ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.

ADVERTISEMENT

ಪ್ರಕರಣದಲ್ಲಿ ಸರ್ಕಾರಿ ವಕೀಲ ಹರಿಪ್ರಸಾದ್ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು. ನ್ಯಾಯಾಧೀಶರಾದ ಲತಾ ಶುಕ್ರವಾರ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಬುರ್ಕಾ ಧರಿಸಿ ಬಂದು ಚಿನ್ನಾಭರಣ ಕಳವು

ಶಿವಮೊಗ್ಗ: ಇಲ್ಲಿನ ಗಾಂಧಿ ಬಜಾರ್‌ನ ಚಿನ್ನಾಭರಣ ಅಂಗಡಿಗೆ ಬುರ್ಕಾ ಧರಿಸಿ ಬಂದಿದ್ದ ಮಹಿಳೆಯರು ನಕಲಿ ಚಿನ್ನ ಇಟ್ಟು ಅಸಲಿ ಚಿನ್ನ ಕದ್ದು ಪರಾರಿಯಾಗಿದ್ದಾರೆ. ಈ ಕೃತ್ಯ ಸಿ.ಸಿ.ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಜಾಮಿಯಾ ಮಸೀದಿ ಬಳಿಯ ರೂಪಶ್ರೀ ಬಂಗಾರದ ಅಂಗಡಿಗೆ ಬುಧವಾರ ಮಧ್ಯಾಹ್ನ ಇಬ್ಬರು ಮಹಿಳೆಯರು ಹಾಗೂ ಒಬ್ಬ ವ್ಯಕ್ತಿ ಬಂದಿದ್ದಾರೆ. ಮಹಿಳೆಯರು ಬುರ್ಕಾ ಧರಿಸಿದ್ದರು. ಈ ವೇಳೆ ಮೂವರು ಒಂದು ಉಂಗುರ ಹಾಗೂ ಎರಡು ಜೊತೆ ಓಲೆ ನೋಡಿದ್ದಾರೆ. ಈ ವೇಳೆ ಅಂಗಡಿ ಮಾಲೀಕ ದಿನೇಶಕುಮಾರ್ ಅವರ ಗಮನ ಬೇರೆಡೆ ಸೆಳೆದು ₹89 ಸಾವಿರ ಮೌಲ್ಯದ ಅಸಲಿ ಚಿನ್ನಾಭರಣ ದೋಚಿ ಅಲ್ಲಿ ನಕಲಿ ಆಭರಣ ಇಟ್ಟು ತೆರಳಿದ್ದಾರೆ. ಈ ಬಗ್ಗೆ ದಿನೇಶ್‌ಕುಮಾರ್ ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.