ಶಿವಮೊಗ್ಗ: ರೈತ ಹುತಾತ್ಮರ ದಿನದ 44ನೇ ವರ್ಷದ ಅಂಗವಾಗಿ ಸ್ಮರಣೆ ಕಾರ್ಯಕ್ರಮವನ್ನು ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಜುಲೈ 21ರಂದು ಬೆಳಿಗ್ಗೆ 11ಕ್ಕೆ ಆಯೋಜಿಸಲಾಗಿದೆ. ಈ ವೇಳೆ ರಾಜ್ಯದ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಮುಂದಿನ ಹೋರಾಟ ರೂಪಿಸಲಾಗುವುದು ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಹೇಳಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೈತರ ಸಮಸ್ಯೆ ಸಾಕಷ್ಟಿವೆ. ಉತ್ತರ ಕರ್ನಾಟಕ ಭಾಗದಲ್ಲಿ ಮಹಾದಾಯಿ ಯೋಜನೆ ಎರಡು ದಶಕಗಳು ಕಳೆದರೂ ಅನುಷ್ಠಾನಗೊಂಡಿಲ್ಲ. ಸರ್ಕಾರ ಆ ಯೋಜನೆಯನ್ನು ವಿಶೇಷವಾಗಿ ಪರಿಗಣಿಸಿ ಕೂಡಲೇ ಕಾಮಗಾರಿ ಆರಂಭಿಸಬೇಕು’ ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಮಾತುಕೊಟ್ಟಂತೆ ಮೂರು ಕೃಷಿ ಕಾಯ್ದೆಗಳನ್ನು ಕೂಡಲೇ ವಾಪಸ್ ಪಡೆಯಬೇಕು. ಖಾಸಗಿ ವ್ಯಕ್ತಿಗಳು ರೈತರ ಜಮೀನುಗಳನ್ನು ಕೊಂಡುಕೊಂಡರೆ ಮುಂದೆ ಕೃಷಿಯೇ ನಿಂತುಹೋಗಬಹುದಾದ ಅಪಾಯವಿರುತ್ತದೆ ಎಂದರು.
‘ಬಿತ್ತನೆ ಬೀಜಗಳ ಬೆಲೆ ಏರಿಕೆಯಾಗಿದೆ. ಬರಗಾಲವನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುತ್ತಿಲ್ಲ. ರೈತರ ಆತ್ಮಹತ್ಯೆ ಡೆಯುವಲ್ಲಿ ಸರ್ಕಾರ ವಿಫಲವಾಗಿದೆ. ಕನಿಷ್ಟ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಇನ್ನೂ ಶಾಸನಬದ್ಧಗೊಳಿಸಿಲ್ಲ. ಕಬ್ಬು ಬೆಳೆಗಾರರು ಸಂಕಷ್ಟ ಎದುರಿಸುತ್ತಿದ್ದಾರೆ. ವಿಮಾ ಕಂಪನಿಗಳು ರೈತರಿಗೆ ಮೋಸ ಮಾಡುತ್ತಿವೆ. ಕೆಲವು ಬ್ಯಾಂಕ್‌ಗಳು ಹಾಲಿನ ಸಹಾಯ ಧನ, ಬರ ಪರಿಹಾರ, ವಿಧವಾ ವೇತನ, ಪಿ.ಎಂ.ಕಿಸಾನ್ ಹಣ ಇವೆಲ್ಲವನ್ನು ರೈತರ ಸಾಲದ ಖಾತೆಗೆ ಜಮಾ ಮಾಡಿಕೊಳ್ಳುತ್ತಿರುವುದು ವಿಪರ್ಯಾಸವಾಗಿದೆ’ ಎಂದು ದೂರಿದರು.
‘ಗ್ಯಾರಂಟಿ ಯೋಜನೆಗಳಿಗಾಗಿ ಹಣ ಹೊಂದಿಸಲು ರೈತರ ಪಹಣಿ, ಮುಟೇಷನ್, ಸರ್ವೆ ಹದ್ದುಬಸ್ತು, ಪೋಡಿ ಮಾಡುವ ದರ ಹೆಚ್ಚಿಸಿ ಜನಸಾಮಾನ್ಯರಿಗೆ ಆರ್ಥಿಕ ಹೊರೆಯಾಗುವಂತೆ ಮಾಡಿದ್ದಾರೆ. ಈ ಎಲ್ಲ ಸಂಗತಿಗಳನ್ನು ರೈತ ಹುತಾತ್ಮರ ದಿನ ಚರ್ಚಿಸಲಾಗುವುದು. ಮುಂದಿನ ಹೋರಾಟದ ಬಗ್ಗೆ ಅಲ್ಲಿ ನಿರ್ಧರಿಸಲಾಗುವುದು’ ಎಂದರು.
ಪ್ರಮುಖರಾದ ಕೆ. ರಾಘವೇಂದ್ರ, ಟಿ.ಎಂ. ಚಂದ್ರಪ್ಪ, ಜ್ಞಾನೇಶ್, ಜಗದೀಶ್, ಇಟ್ಟೂರು ರಾಜು, ಸಿ.ಚಂದ್ರಪ್ಪ, ಹಾರ‍್ನಹಳ್ಳಿ ರುದ್ರೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.