ADVERTISEMENT

ಶರಾವತಿ ಕಣಿವೆಯಲ್ಲಿ ಭಾರಿ ಮಳೆ: ಭರ್ತಿಯಾದ ಅಂಬುತೀರ್ಥ ಮಿನಿ ಅಣೆಕಟ್ಟೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 7:33 IST
Last Updated 24 ಜುಲೈ 2021, 7:33 IST
ಕಾರ್ಗಲ್ ಸಮೀಪದಲ್ಲಿರುವ ಶರಾವತಿ ಕಣಿವೆಯ ರಮ್ಯ ನೋಟ
ಕಾರ್ಗಲ್ ಸಮೀಪದಲ್ಲಿರುವ ಶರಾವತಿ ಕಣಿವೆಯ ರಮ್ಯ ನೋಟ   

ಕಾರ್ಗಲ್: ಜೋಗ ಜಲಪಾತವನ್ನು ಒಳಗೊಂಡ ಶರಾವತಿ ಕಣಿವೆ ಪ್ರದೇಶದಲ್ಲಿ ಭಾರಿ ಪ್ರಮಾಣದ ಮಳೆ ಸುರಿಯುತ್ತಿದ್ದು, ಕಣಿವೆಯಾಳದಲ್ಲಿ ಜಲ ವಿದ್ಯುತ್ ಬಳಕೆಗಾಗಿ ನಿರ್ಮಾಣಗೊಂಡಿರುವ ಅಂಬುತೀರ್ಥ ಮಿನಿ ಅಣೆಕಟ್ಟೆ ಭರ್ತಿಯಾಗಿದೆ.

ಜೋಗದಲ್ಲಿರುವ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದ ಬಳಿಯಿಂದ ಕಾಣಿಸುವ ಈ ಸುಂದರ ಕಣಿವೆಯ ದೃಶ್ಯದಲ್ಲಿ ಮಹಾತ್ಮ ಗಾಂಧಿ ಜಲವಿದ್ಯುದಾಗರ ಮತ್ತು ಅಂಬುತೀರ್ಥ ಅಣೆಕಟ್ಟೆ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.

ಕಣಿವೆಯ ಇಕ್ಕೆಲಗಳಲ್ಲಿ ಉದ್ದಕ್ಕೂ ಹರಡಿಕೊಂಡಿರುವ ಪಶ್ಚಿಮಘಟ್ಟಗಳ ಪರ್ವತ ಶ್ರೇಣಿಗಳನ್ನು ಬಿಗಿದಪ್ಪಿಕೊಂಡಿರುವ ಹಸಿರು ವನರಾಶಿಗಳು, ಅಪೂರ್ವ ಪ್ರಾಣಿ, ಪಕ್ಷಿ ಸಂಕುಲಗಳು, ಆಯುರ್ವೇದದ ಗಿಡಮೂಲಿಕೆಗಳ ಸಸ್ಯ ಸಂಕುಲ ಕಾಣಸಿಗುತ್ತದೆ. ಬೆಟ್ಟ–ಗುಡ್ಡಗಳ ತಪ್ಪಲಿನಿಂದ ಕಣಿವೆಯನ್ನು ಮುತ್ತಿಕ್ಕಲು ಬರುವಂತೆ ಭಾಸವಾಗುವ ಪುಟ್ಟ ಪುಟ್ಟ ತೊರೆಗಳು ಈ ಸಾಲಿನಲ್ಲಿ ಸೇರಿಕೊಂಡಿದೆ.

ADVERTISEMENT

ಹಸಿರು ವನರಾಶಿಯೊಂದಿಗೆ ಶರಾವತಿ ಕೊಳ್ಳದಿಂದ ಮೇಲೇರುವ ಶ್ವೇತ ವರ್ಣದ ಮಂಜು ಮುಸುಕಿದ ಜಲಸಿರಿಯ ಸಿಂಚನ ಮೋಡದೊಂದಿಗೆ ಬೆರೆತು ಸಾಗುವ ಸುಂದರ ದೃಶ್ಯವನ್ನು ಸಾವಿರಾರು ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಿದ್ದಾರೆ.

‘ಇದು ಬಹು ಅಪಾಯಕಾರಿಯಾದ ಸ್ಥಳವಾಗಿರುವುದರಿಂದ ಪ್ರಾಧಿಕಾರ ಪ್ರವಾಸಿಗರ ರಕ್ಷಣೆಗೆ ಭದ್ರತಾ ಸಿಬ್ಬಂದಿಯನ್ನು ನೇಮಿಸಬೇಕು’ ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.