ಸಾಗರ: ಶರಾವತಿ ಜಲ ವಿದ್ಯುತ್ ಯೋಜನೆಗಾಗಿ ತಮ್ಮ ಬದುಕನ್ನೇ ತ್ಯಾಗ ಮಾಡಿದ ಜನರ ಸಂಕಷ್ಟಕ್ಕೆ ಸ್ಪಂದಿಸಲು ಅಂಬಾರಗೋಡ್ಲು-ಕಳಸವಳ್ಳಿ ನಡುವೆ ಶರಾವತಿ ಹಿನ್ನೀರಿನಲ್ಲಿ ಸೇತುವೆ ನಿರ್ಮಾಣಗೊಂಡಿದೆ. ಇದರಿಂದ ಈ ಭಾಗದ ಜನರ ದಶಕಗಳ ಬೇಡಿಕೆ ಈಡೇರಿದೆ.
ಜುಲೈ 14ರಂದು ಸೇತುವೆ ಲೋಕಾರ್ಪಣೆಗೊಳ್ಳಲಿದೆ. ಈ ನಡುವೆ ಸಂಸದ ಬಿ.ವೈ.ರಾಘವೇಂದ್ರ ನೂತನ ಸೇತುವೆಗೆ ‘ಸಿಗಂದೂರು ಚೌಡೇಶ್ವರಿ ಸೇತುವೆ’ ಎಂದು ನಾಮಕರಣ ಮಾಡಲು ನಿಶ್ಚಯಿಸಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಅದಕ್ಕೆ ಭಿನ್ನ ಧ್ವನಿಗಳು ಕೇಳಿ ಬರುತ್ತಿವೆ. ಸಾಮಾಜಿಕ ಜಾಲತಾಣದಲ್ಲೂ ಚರ್ಚೆ ಬಿರುಸಾಗಿ ನಡೆಯುತ್ತಿದೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಸಿಗಂದೂರು ಕ್ಷೇತ್ರವನ್ನು ಮುಜರಾಯಿ ಇಲಾಖೆಗೆ ವಹಿಸಬೇಕು ಎಂಬ ನಿರ್ಧಾರ ಮುನ್ನಲೆಗೆ ಬಂದಿತ್ತು. ಇದಕ್ಕೆ ಈ ಭಾಗದ ಬಹುಸಂಖ್ಯಾತ ಈಡಿಗ ಸಮುದಾಯದಿಂದ ಪ್ರಬಲ ವಿರೋಧ ವ್ಯಕ್ತವಾಗಿತ್ತು. ಈಗ ಈಡಿಗ ಸಮುದಾಯದವರ ಅಸಮಾಧಾನ ತಣಿಸಲೆಂದೇ ಸೇತುವೆಗೆ ಸಿಗಂದೂರು ಚೌಡೇಶ್ವರಿ ಹೆಸರು ಇಡಲು ನಿರ್ಧರಿಸಲಾಗಿದೆ ಎಂಬ ಅಭಿಪ್ರಾಯ ರಾಜಕೀಯ ವಲಯದಲ್ಲಿ ದಟ್ಟವಾಗಿದೆ.
‘ಸೇತುವೆ ನಿರ್ಮಾಣವಾದ ಸ್ಥಳ ‘ಹೊಳೆಬಾಗಿಲು’ ಎಂದೇ ಜನಮಾನಸದಲ್ಲಿ ನೆಲೆಯೂರಿದೆ. 1637ರಲ್ಲಿ ಇಲ್ಲಿಗೆ ಇಂಗ್ಲೆಂಡ್‌ನಿಂದ ಬಂದಿದ್ದ ಪ್ರವಾಸಿ ಪೀಟರ್ ಮಂಡಿ ತನ್ನ ಲೇಖನದಲ್ಲಿ ‘ಹೊಳೆಬಾಗಿಲು’ ಎಂದೇ ಪ್ರಸ್ತಾಪಿಸಿದ್ದಾನೆ. ಇದು ಎಚ್.ಎಲ್.ನಾಗೇಗೌಡರ ‘ಪ್ರವಾಸಿ ಕಂಡ ಇಂಡಿಯಾ’ ಕೃತಿಯಲ್ಲಿ ಉಲ್ಲೇಖವಾಗಿದೆ. ಹೀಗಾಗಿ ‘ಹೊಳೆಬಾಗಿಲು ಸೇತುವೆ’ ಎಂಬ ಹೆಸರು ಸೂಕ್ತ ಎಂದು ಲೇಖಕ ಗಜಾನನ ಶರ್ಮ ಹೇಳುತ್ತಾರೆ.
‘ದೇಶವು ಧರ್ಮ ನಿರಪೇಕ್ಷ ಸಂವಿಧಾನ ಅಳವಡಿಸಿಕೊಂಡಿದೆ. ಎಲ್ಲಾ ಧರ್ಮ, ಜಾತಿಯವರು ಬಳಸುವ ಸೇತುವೆಯೊಂದಕ್ಕೆ ಒಂದು ಸಮುದಾಯದ ಧಾರ್ಮಿಕ ಹಿನ್ನೆಲೆಯ ಹೆಸರಿಡುವುದು ಸರಿಯಲ್ಲ’ ಎನ್ನುತ್ತಾರೆ ಬರಹಗಾರ ಅ.ರಾ.ಶ್ರೀನಿವಾಸ್.
ಶರಾವತಿ ನದಿಯ ಹಿನ್ನೀರಿನ ಪ್ರದೇಶದಲ್ಲಿ ಸೇತುವೆ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ರೂಪಿಸಿರುವ ಜಲ ವಿದ್ಯುತ್ ಯೋಜನೆಗೆ ಶರಾವತಿಯ ಹೆಸರನ್ನೇ ಇಡಲಾಗಿದೆ. ಹೀಗಾಗಿ ನೂತನ ಸೇತುವೆಗೆ ‘ಶರಾವತಿ ತೂಗು ಸೇತುವೆ’ ಎಂಬ ಹೆಸರು ಇಡುವುದು ಉತ್ತಮ ಎಂಬುದು ಅವರ ಅನಿಸಿಕೆ.
ಶರಾವತಿ ಹಿನ್ನೀರಿನಲ್ಲಿ ಸೇತುವೆ ನಿರ್ಮಾಣಕ್ಕೆ ಸರ್ಕಾರ ಒಪ್ಪಿಗೆ ನೀಡುವಲ್ಲಿ ಸಿಗಂದೂರು ಕ್ಷೇತ್ರಕ್ಕೆ ಬರುವ ಜನರ ಸಂಖ್ಯೆ ಹೆಚ್ಚಾಗಿರುವುದೂ ಕಾರಣವಾಗಿದೆ. ಹಾಲಿ ಇಲ್ಲಿ ಸಂಚರಿಸುತ್ತಿರುವ ಲಾಂಚ್‌ಗಳಲ್ಲಿ ಜನದಟ್ಟಣೆ ಅಧಿಕಗೊಂಡು ಸೇತುವೆ ನಿರ್ಮಾಣಕ್ಕೆ ಒತ್ತಡ ಸೃಷ್ಟಿಸಿದೆ. ಇದನ್ನು ಗಮನಿಸಿದಾಗ ಸೇತುವೆ ‘ಸಿಗಂದೂರು ಚೌಡೇಶ್ವರಿ’ ಎಂಬ ಹೆಸರು ಇಡುವುದು ತಪ್ಪೇನೂ ಇಲ್ಲ ಎಂಬ ಅಭಿಪ್ರಾಯವೂ ಕೇಳಿ ಬರುತ್ತಿದೆ.
ಸೇತುವೆ ನಿರ್ಮಿಸುವಾಗ ಗೆಜೆಟ್‌ನಲ್ಲಿ ಅಂಬಾರಗೋಡ್ಲು-ಕಳಸವಳ್ಳಿ ಎಂಬ ಹೆಸರು ನಮೂದಾಗಿದೆ. ಆದ್ದರಿಂದ ಈ ಹೆಸರನ್ನೇ ಸೇತುವೆಗೆ ಇಡುವುದು ಸರಿಯಾದ ನಿರ್ಧಾರಜಿ.ಟಿ.ಸತ್ಯನಾರಾಯಣ ಮಾಜಿ ಅಧ್ಯಕ್ಷ ತುಮರಿ ಗ್ರಾಮ ಪಂಚಾಯಿತಿ
ಶರಾವತಿ ನದಿಯಲ್ಲಿ ಪೂರ್ವಿಕರ ಬದುಕು ಮುಳುಗಡೆಯಾಗಿದೆ. ಆದರೂ ಈ ನದಿಯೊಂದಿಗಿನ ಭಾವನಾತ್ಮಕ ನಂಟು ಇನ್ನೂ ಉಳಿದಿದೆ. ಸೇತುವೆಗೆ ಶರಾವತಿ ಹೆಸರು ಇಟ್ಟರೆ ಅದರ ಮೇಲಿನ ಗೌರವ ಪ್ರೀತಿ ಹೆಚ್ಚುತ್ತದೆಡಾ.ನಿಸರ್ಗ ಹೃದಯ ತಜ್ಞರು ಹೈದರಾಬಾದ್
ಯಡಿಯೂರಪ್ಪ ಹೆಸರಿಡಲು ಕೋರಿ ರಿಟ್
ಅಂಬಾರಗೋಡ್ಲು-ಕಳಸವಳ್ಳಿ ನಡುವೆ ನಿರ್ಮಾಣಗೊಂಡಿರುವ ಸೇತುವೆ ನಾಮಕರಣ ವಿವಾದ ಈಗ ಹೈಕೋರ್ಟ್ ಮೆಟ್ಟಿಲೇರಿದೆ. ಶಿವಮೊಗ್ಗದ ನಿದಿಗೆಯ ನಿವಾಸಿ ಕೆ.ಹರನಾಥರಾವ್ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ‘ಸೇತುವೆ ನಿರ್ಮಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಕಾರಣ. ಅವರ ಹೆಸರನ್ನು ಸೇತುವೆಗೆ ಅಂತಿಮಗೊಳಿಸಬೇಕು. ಅಲ್ಲಿಯವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸರ್ಕಾರಕ್ಕೆ ಸೂಚಿಸಬೇಕು’ ಎಂದು ಕೋರಿದ್ದಾರೆ. ರಿಟ್ ಅರ್ಜಿಯ ವಿಚಾರಣೆ ಜುಲೈ 10ರಂದು ಹೈಕೋರ್ಟ್ ಕೈಗೆತ್ತಿಕೊಳ್ಳಲಿದೆ ಎಂದು ಹಿರಿಯ ವಕೀಲ ಕೆ.ದಿವಾಕರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.