ADVERTISEMENT

ಬೆಂಗಳೂರಿಗೆ ಶರಾವತಿ: ಶಿವಮೊಗ್ಗ ಜಿಲ್ಲಾ ಜೆಡಿಎಸ್‌ ವಿರೋಧ

​ಪ್ರಜಾವಾಣಿ ವಾರ್ತೆ
Published 28 ಜೂನ್ 2019, 14:18 IST
Last Updated 28 ಜೂನ್ 2019, 14:18 IST
ಆರ್.ಎಂ.ಮಂಜುನಾಥಗೌಡ
ಆರ್.ಎಂ.ಮಂಜುನಾಥಗೌಡ   

ಶಿವಮೊಗ್ಗ: ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ತೆಗೆದುಕೊಂಡು ಹೋಗುವ ಯೋಜನೆ ಅವೈಜ್ಞಾನಿಕ. ಯೋಜನೆ ಅನುಷ್ಠಾನಕ್ಕೆ ಜೆಡಿಎಸ್ ಅವಕಾಶ ನೀಡುವುದಿಲ್ಲ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಭರವಸೆ ನೀಡಿದರು.

ಶರಾವತಿ ಉಳಿಸಿ ಹೋರಾಟಕ್ಕೆ ಪಕ್ಷ ಸಂಪೂರ್ಣ ಬೆಂಬಲ ನೀಡುತ್ತದೆ. ಈ ಯೋಜನೆ ಜಾರಿ ಸಾಧುವಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಳಿ ಹಿಂದೆಯೇ ಚರ್ಚೆ ನಡೆಸಿದ್ದೆವು. ಮತ್ತೊಮ್ಮೆ ಭೇಟಿ ಮಾಡಿ ವಿವರಿಸಲಾಗುವುದು. ಯೋಜನೆ ಕೈಬಿಡುವಂತೆ ಮನವಿ ಮಾಡಲಾಗುವುದು ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಶರಾವತಿ ನೀರು ಬಳಸುವ ಕುರಿತು ವಿಸ್ತೃತ ವರದಿ ಸಿದ್ಧಪಡಿಸಲು ಸೂಚಿಸಿರುವ ಸರ್ಕಾರದ ಆದೇಶಕ್ಕೆ ಇಡೀ ಜಿಲ್ಲೆಯ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೋರಾಟದ ಸ್ವರೂಪ ತೀವ್ರಗೊಳ್ಳುತ್ತಿದೆ. ಜುಲೈ 10ರಂದು ಶಿವಮೊಗ್ಗ ಬಂದ್‌ಗೆ ಕರೆಕೊಡಲಾಗಿದೆ. ಈ ಹೋರಾಟಕ್ಕೆ ಜೆಡಿಎಸ್ ಸಂಪೂರ್ಣ ಬೆಂಬಲ ನೀಡುತ್ತದೆ ಎಂದರು.

ADVERTISEMENT

ಹಲವು ವರ್ಷಗಳಿಂದ ಈಚೆಗೆ ಮಲೆನಾಡಿನಲ್ಲಿ ಮಳೆ ತೀವ್ರ ಕಡಿಮೆಯಾಗಿದೆ. ಜಲಾಶಯಗಳೂ ತುಂಬುತ್ತಿಲ್ಲ. ವಿದ್ಯುತ್ ಉತ್ಪಾದನೆಗೂ ನೀರು ಇಲ್ಲ. ಹೀಗಿರುವಾಗ ಬೆಂಗಳೂರಿಗೆ ನೀರು ತೆಗೆದುಕೊಂಡು ಹೋಗುವುದು ಹೇಗೆ ಸಾಧ್ಯ? ಲಿಂಗನಮಕ್ಕಿ ಯೋಜನೆಯಿಂದ ಈಗಾಗಲೇ ಸಾವಿರಾರು ಜನರು ಮನೆ-, ಆಸ್ತಿ ಕಳೆದುಕೊಂಡಿದ್ದಾರೆ. ನಾಡಿಗೆ ಬೆಳಕು ಕೊಟ್ಟು ಅವರು ಕತ್ತಲಲ್ಲಿ ಇದ್ದಾರೆ. ಗಾಯದ ಮೇಲೆ ಬರೆ ಎಂಬಂತೆ ಮತ್ತೆ ಈ ಯೋಜನೆ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್‌ ಮುಖಂಡರಾದ ತ್ಯಾಗರಾಜ್, ಅಬ್ದುಲ್ ವಾಜಿದ್, ಸಿದ್ದಪ್ಪ, ಸುಧೀರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.