ಶಿವಮೊಗ್ಗ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ರೈತಸಂಘ ಹಾಗೂ ಹಸಿರುಸೇನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ₹8 ಸಾವಿರ ಕೋಟಿ ವೆಚ್ಚದಲ್ಲಿ 2000 ಮೆಗಾವಾಟ್ ವಿದ್ಯುತ್ ಉತ್ಪಾದನೆ ಯೋಜನೆ ಜಾರಿಮಾಡಲು ಹೊರಟಿವೆ. ಇದಕ್ಕಾಗಿ 350 ಎಕರೆ ಜಾಗ ಗುರುತಿಸಲಾಗಿದೆ. ಸರ್ಕಾರಗಳು ಈ ರೀತಿಯ ಬೃಹತ್ ಯೋಜನೆ ಮಾಡುವಾಗ ಸ್ಥಳೀಯರು, ಪರಿಸರವಾದಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಬೇಕಿತ್ತು. ಯೋಜನೆಯ ಬಗ್ಗೆ ಸ್ಥಳೀಯರಿಗೆ ಸೂಕ್ತ ಮಾಹಿತಿ ನೀಡುವುದು ಸರ್ಕಾರದ ಹಕ್ಕು. ಆದರೆ ಸರ್ಕಾರ ಇದುವರೆಗೂ ಯೋಜನೆಯ ಡಿಪಿಆರ್ ಅನ್ನು ಸಾರ್ವಜನಿಕರ ಮುಂದೆ ಇಡುವ ಕೆಲಸ ಮಾಡಿಲ್ಲ ಎಂದು ಪ್ರತಿಭಟನಕಾರರು ದೂರಿದರು.
ಈಗಾಗಲೇ ಅನೇಕ ಯೋಜನೆಗಳಿಂದ ಭೂಮಿ ಕಳೆದುಕೊಂಡ ಸಂತ್ರಸ್ತರೇ ಇಲ್ಲಿ ಹೆಚ್ಚಾಗಿದ್ದು, ಮತ್ತೆ ಭೂಮಿಯನ್ನು ಕಳೆದುಕೊಳ್ಳುತ್ತಿದ್ದಾರೆ. ತಮ್ಮ ಭೂಮಿ ಉಳಿಸಿಕೊಳ್ಳಲು ಹಲವು ವರ್ಷಗಳಿಂದ ಹೋರಾಡುತ್ತಲೇ ಬರುತ್ತಿದ್ದಾರೆ. ಈ ಕುಟುಂಬಗಳು ಈಗ ಮತ್ತೆ ಬೀದಿಗೆ ಬೀಳುತ್ತವೆ. ಅವರ ಜೀವನ ಅತಂತ್ರವಾಗಲಿದೆ ಎಂದರು.
ಸರ್ಕಾರ ಈ ಅವೈಜ್ಞಾನಿಕ ಕಾಮಗಾರಿ ಕೈಬಿಡಬೇಕು. ವೈಜ್ಞಾನಿಕ ಮಾರ್ಗಗಳನ್ನು ಅನುಸರಿಸಬೇಕು. ದಟ್ಟ ಅರಣ್ಯದಲ್ಲಿ ಯೋಜನೆಯ ಅನುಷ್ಠಾನ ಬೇಡ. ಇದರಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ನೂರಾರು ಹೆಕ್ಟೇರ್ ಅರಣ್ಯ ಪ್ರದೇಶ ನಾಶವಾಗಿ ಭೂಮಿಯ ಸವಕಳಿ, ಭೂಮಿಯ ಕೊರತೆ ಉಂಟಾಗಿ ಅಪಾಯ ಹೆಚ್ಚಾಗುತ್ತದೆ ಎಂದು ದೂರಿದರು. ಆದ್ದರಿಂದ ಈ ಯೋಜನೆ ಕೈಬಿಡಿ ಎಂದು ಪ್ರತಿಭಟನಕಾರರು ಮನವಿ ಮಾಡಿದರು.
ರೈತ ಮುಖಂಡ ಕೆ.ಟಿ. ಗಂಗಾಧರ್, ಪ್ರಮುಖರಾದ ಈರಣ್ಣ ಪ್ಯಾಟಿ, ಹಾಲೇಶಪ್ಪ ಗೌಡ್ರು, ಯಶವಂತರಾವ್ ಘೋರ್ಪಡೆ, ವೀರೇಶ್ ಡಿ.ವಿ., ಪುಟ್ಟಣ್ಣಗೌಡ್ರು, ಗಿರೀಶಣ್ಣ, ಹಿರಣ್ಣಯ್ಯ, ಜಗದೀಶ್ ನಾಯಕ್, ಎಚ್.ಎಸ್. ಮಂಜುನಾಥೇಶ್ವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.