ADVERTISEMENT

ಬೆಂಗಳೂರಿಗೆ ಶರಾವತಿ: ವಿವಿಧ ಸಂಘಟನೆಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2019, 16:29 IST
Last Updated 27 ಜೂನ್ 2019, 16:29 IST
ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಮುಂದೆ ಗುರುವಾರ ವಿವಿಧ ಸಂಘಟನೆಗಳ ಕಾರ್ಯಕರ್ತರು ಮಲೆನಾಡು ಜೀವಜಲ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಮುಂದೆ ಗುರುವಾರ ವಿವಿಧ ಸಂಘಟನೆಗಳ ಕಾರ್ಯಕರ್ತರು ಮಲೆನಾಡು ಜೀವಜಲ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.   

ಶಿವಮೊಗ್ಗ: ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ತೆಗೆದುಕೊಂಡು ಹೋಗುವ ಯೋಜನೆ ವಿರೋಧಿಸಿ ಮಲೆನಾಡಿನ ಜೀವಜಲ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಕಾವೇರಿ ನದಿ ಸೇರಿದಂತೆ ಹಲವು ಮೂಲಗಳಿಂದ ಈಗಾಗಲೇ ಬೆಂಗಳೂರಿಗೆ ನೀರು ಹರಿಸಲಾಗುತ್ತಿದೆ. ಸರ್ಕಾರದ ಕಣ್ಣು ಈಗ ಶರಾವತಿಯ ಮೇಲೆ ಬಿದ್ದಿದೆ. ಸಮುದ್ರಕ್ಕೆ ಸೇರುವ ನೀರು ಬಳಸಿಕೊಳ್ಳುತ್ತೇವೆ ಎಂದು ಹೇಳಿ ವಿಸ್ತೃತ ವರದಿ ತಯಾರಿಸಲು ಆದೇಶಿಸಲಾಗಿದೆ. ಒಂದು ವೇಳೆ ಈ ಯೋಜನೆ ಜಾರಿಯಾದರೆ ಮಲೆನಾಡು ನಾಶವಾಗುತ್ತದೆ. ಇಂತಹ ಅವೈಜ್ಞಾನಿಕ ಯೋಜನೆಯನ್ನು ಸರ್ಕಾರ ಕೈ ಬಿಡಬೇಕು ಎಂದು ಆಗ್ರಹಿಸಿದರು.

ಮಲೆನಾಡು ಸುಸಂಸ್ಕೃತರ ಬಿಡು. ಶಾಂತಿ ಪ್ರಿಯರ ನಾಡು. ಸರ್ಕಾರದ ಕೆಲವು ಅವೈಜ್ಞಾನಿಕ ಚಿಂತನೆಗಳು ಇಲ್ಲಿನ ಜನರನ್ನು ಕಂಗೆಡಿಸಿವೆ. ಶರಾವತಿ ನದಿಗೆ ಹಿಂದೆ ಲಿಂಗನಮಕ್ಕಿ ಜಲಾಶಯ ನಿರ್ಮಿಸಿದ ಪರಿಣಾಮ ಸಾವಿರಾರು ಜನರ ಬದುಕು ಅತಂತ್ರವಾಗಿದೆ. ಐದೂವರೆ ದಶಕಗಳು ಕಳೆದರೂ ಪೂರ್ಣ ಪ್ರಮಾಣದ ಪುನರ್ವಸತಿ ಕಲ್ಪಿಸಲು ಸಾಧ್ಯವಾಗಿಲ್ಲ. ಈಗ ಶರಾವತಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಸರ್ಕಾರ ಈ ಯೋಜನೆ ಜಾರಿಗೊಳಿಸಿದರೆ ಮತ್ತಷ್ಟು ಅರಣ್ಯ ನಾಶವಾಗುತ್ತದೆ. ಒಂದಷ್ಟು ಕುಟುಂಬಗಳನ್ನೂ ಸ್ಥಳಾಂತರಿಸಬೇಕಾಗುತ್ತದೆ. ತಕ್ಷಣ ಈ ಯೋಜನೆ ಕೈ ಬಿಡದಿದ್ದರೆ ಯಾವುದೇ ಹೋರಾಟಕ್ಕೂ ಸಿದ್ಧ ಎಂದು ಎಚ್ಚರಿಸಿದರು.

ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ, ವಿವಿಧ ಸಂಘಟನೆಗಳ ಮುಖಂಡರಾದ ಎಸ್.ಬಿ.ಅಶೋಕ್‌ಕುಮಾರ್, ಜಿ.ಎಲ್.ಜನಾರ್ಧನ್, ಕೆ.ಟಿ.ಗಂಗಾಧರಪ್ಪ, ಎಂ.ಗುರುಮೂರ್ತಿ, ಟಿ.ಆರ್.ಅಶ್ವತ್ಥ ನಾರಾಯಣ ಶೆಟ್ಟಿ, ಎಂ.ಬಿ.ಕುಮಾರಸ್ವಾಮಿ, ಶೇಖರ್ ಗೌಳೇರ್, ಶಿವಣ್ಣ, ಪಿ.ರುದ್ರೇಶ್, ಗೋ ರಮೇಶ್‌ ಗೌಡ, ಕಾಂತೇಶ್ ಕದರಮಂಡಲಿ, ಪರಿಸರ ರಮೇಶ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.