ಶಿವಮೊಗ್ಗ: ‘ಸ್ವಾಧೀನವಾಗುವ ಅರಣ್ಯಕ್ಕೆ ಬದಲಿ ಭೂಮಿ ಒದಗಿಸಲು ಕರ್ನಾಟಕ ವಿದ್ಯುತ್ ನಿಗಮಕ್ಕೆ (ಕೆಪಿಸಿ) ಷರತ್ತು ವಿಧಿಸಿ ₹ 8,644 ಕೋಟಿ ವೆಚ್ಚದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ನಿರ್ಮಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ’ ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು, ‘ಪಂಪ್ಡ್ ಸ್ಟೋರೇಜ್ ಯೋಜನೆಗೆ 7 ಕಿ.ಮೀ ಅಂತರದ 10 ಮೀಟರ್ ವ್ಯಾಸದ ಕಾಂಕ್ರೀಟ್ ಸುರಂಗ ಮಾರ್ಗ ನಿರ್ಮಾಣ ಆಗಲಿದ್ದು, ಶೀಘ್ರ ಕಾಮಗಾರಿ ಆರಂಭ
ಆಗಲಿದೆ. 34 ಹೆಕ್ಟೇರ್ ಅರಣ್ಯ ಭೂಮಿ 140 ಎಕರೆ ಕಂದಾಯ ಭೂಮಿ ಬಳಕೆಯಾಗುತ್ತಿದೆ’ ಎಂದರು.
‘ಸಾಗರ ತಾಲ್ಲೂಕಿನ ಹೆನ್ನೆ ಭಾಗದಲ್ಲಿ ರೈತರ 8.32 ಎಕರೆ ಮಾತ್ರ ಸ್ವಾಧೀನ ಆಗಲಿದೆ. ಈಗಾಗಲೇ ಅವರೊಂದಿಗೆ ಮಾತುಕತೆ ನಡೆಸಿ ಪರಿಹಾರ ಪಡೆಯಲು ಒಪ್ಪಿಸಿದ್ದೇವೆ. ಸಂತ್ರಸ್ತರ ಕುಟುಂಬದವರಿಗೆ ಕೆಪಿಸಿಯಲ್ಲಿ ಉದ್ಯೋಗ ನೀಡಲಾಗುತ್ತದೆ’ ಎಂದು ಹೇಳಿದರು.
‘ಈ ಯೋಜನೆಯಿಂದ ಪರಿಸರ ನಾಶವಾಗಲಿದೆ ಎಂಬ ವೃಥಾ ಆರೋಪ ಸಲ್ಲ. ಕೇಂದ್ರ ಸರ್ಕಾರದ ಹೆದ್ದಾರಿ ಯೋಜನೆಗಳಲ್ಲಿ ಸಾವಿರಾರು ಮರಗಳು ಬಲಿ ಆಗಿವೆ. ಅದನ್ನು ಕಂಡೂ ಪರಿಸರವಾದಿಗಳು ಏಕೆ ಕಣ್ಣು ಮುಚ್ಚಿ ಕುಳಿತಿದ್ದಾರೆ’ ಎಂದು ಅವರು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.