ಸಾಗರ: ಶರಾವತಿ ನದಿ ಕಣಿವೆ ಉಳಿಸಿ ಹೋರಾಟ ಒಕ್ಕೂಟದ ವತಿಯಿಂದ ಆ. 25 ರಂದು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಸಂಚಾಲಕ ಅಖಿಲೇಶ್ ಚಿಪ್ಪಳಿ ತಿಳಿಸಿದ್ದಾರೆ.
ಪರಿಸರಕ್ಕೆ ಮಾರಕವಾಗಿರುವ, ಜನರ ತೆರಿಗೆ ಹಣ ದೋಚುವ ಹುನ್ನಾರದ ಈ ಯೋಜನೆ ವಿರುದ್ಧ 25ರಂದು ಬೆಳಿಗ್ಗೆ 10ಕ್ಕೆ ಗಣಪತಿ ದೇವಸ್ಥಾನದ ಆವರಣದಿಂದ ಮೆರವಣಿಗೆ ನಡೆಯಲಿದೆ. ನಂತರ ಗಾಂಧಿ ಮೈದಾನದಲ್ಲಿ ಬಹಿರಂಗ ಸಭೆ ಆಯೋಜಿಸಲಾಗಿದ್ದು, ವಿವಿಧ ಮಠಗಳ ಧರ್ಮಗಳು, ಚರ್ಚ್ ನ ಫಾದರ್ ಗಳು, ಮಸೀದಿಯ ಮೌಲ್ವಿಗಳು, ವಿವಿಧ ರಾಜಕೀಯ ಪಕ್ಷಗಳು ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘2017ರಲ್ಲಿ ಪಂಪ್ಡ್ ಸ್ಟೋರೇಜ್ ಯೋಜನೆ ಪ್ರಸ್ತಾಪಕ್ಕೆ ಬಂದಾಗ ಅದರ ಅಂದಾಜು ವೆಚ್ಚ ₹ 4,000 ಕೋಟಿ ಇತ್ತು. ಈಗ ಅದು ₹ 10,000 ಕೋಟಿ ದಾಟಿದೆ. ತೀರಾ ಅವೈಜ್ಞಾನಿಕವಾಗಿರುವ ಈ ಯೋಜನೆಯಿಂದ ಶರಾವತಿ ನದಿಯ ಅಸ್ತಿತ್ವಕ್ಕೆ ಸಂಚಕಾರ ಉಂಟಾಗಲಿದೆ. ಈ ಬಗ್ಗೆ ಜನಜಾಗೃತಿ ಮೂಡಿಸಲು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಹಮ್ಮಿಕೊಂಡಿರುವ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರೂ ತಲೆಗೆ ಕರವಸ್ತ್ರ ಕಟ್ಟಿ ವಿನೂತನ ರೀತಿಯಲ್ಲಿ ಪ್ರತಿಭಟಿಸಲಿದ್ದಾರೆ ಎಂದು ಹೇಳಿದರು.
ಮಲೆನಾಡು ಹಾಗೂ ಕರಾವಳಿ ಪ್ರದೇಶದಲ್ಲಿ ಈಗಾಗಲೇ ಕೈಗೊಂಡಿರುವ ಹಲವು ಯೋಜನೆಗಳಿಂದ ಅನೇಕ ಜನರು ಸಂತ್ರಸ್ತರಾಗಿದ್ದಾರೆ. ಈಗ ಮತ್ತಷ್ಟು ಜನರನ್ನು ಸಂತ್ರಸ್ತರನ್ನಾಗಿ ಮಾಡಲು ಸರ್ಕಾರ ಹೊರಟಿದೆ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಶಿವಾನಂದ ಕುಗ್ವೆ ಟೀಕಿಸಿದರು.
ಪ್ರಮುಖರಾದ ಧನುಷ್, ಭಾಗೀರಥಿ, ನಾರಾಯಣ ಮೂರ್ತಿ ಕಾನುಗೋಡು, ಕೆ.ವಿ.ಪ್ರವೀಣ್, ಎಲ್.ವಿ.ಅಕ್ಷರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.