
ಶಿಕಾರಿಪುರ: ತಾಲ್ಲೂಕಿನ ಹಿತ್ತಲ ಗ್ರಾಮದಲ್ಲಿ ಭಾನುವಾರ ನಡೆದ ಶ್ರೀ ಬನಶಂಕರಿ ದೇವಸ್ಥಾನದ ನೂತನ ಗೋಪುರ ಕಳಸಾರೋಹಣ, ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಬ್ರಾಹ್ಮಿ ಮುಹೂರ್ತದಲ್ಲಿ ಗೋಪೂಜೆಯೊಂದಿಗೆ ಸಮುದಾಯ ಭವನ ಪ್ರವೇಶ, ಶ್ರೀದೇವಿಗೆ ಸುಪ್ರಭಾತ ಸೇವೆಯೊಂದಿಗೆ ಗೋಪುರದಲ್ಲಿ ಕಳಸ ಪ್ರತಿಷ್ಠಾಪನೆ, ವೇದಪಾರಾಯಣ, ಪ್ರತಿಷ್ಠಾ ಹೋಮ, ಮಹಾಮಂಗಳಾರತಿ ನಡೆಯಿತು.
ದಿಂಡದಹಳ್ಳಿ ಹಿರೇಮಠದ ಪಶುಪತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಭದ್ರಾವತಿಯ ಕೇಶವ ರಾಮಾನುಜ ಸಂಗಡಿಗರು ಪೌರೋಹಿತ್ಯ ನಡೆಸಿದರು. ಶಾಸಕ ಬಿ.ವೈ.ವಿಜಯೇಂದ್ರ ಸಮುದಾಯ ಭವನ ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದರು.
‘ನೆಮ್ಮದಿ ಹುಡುಕುವ ಭರದಲ್ಲಿ ಜನರು ಒತ್ತಡಕ್ಕೆ ಒಳಗಾಗಿ ದಿನವಿಡೀ ಶ್ರಮಿಸುತ್ತಿದ್ದಾರೆ. ಆದರೆ, ಅದರಿಂದ ದೊರೆಯುವ ಹಣ ಉಳಿದಿರುವ ನೆಮ್ಮದಿಯನ್ನೂ ಕಿತ್ತುಕೊಳ್ಳುತ್ತದೆ. ಪೂಜೆ, ದೈವ ನಂಬಿಕೆ, ಧ್ಯಾನ ಈ ಎಲ್ಲವೂ ಜಂಜಾಟದಿಂದ ನೆಮ್ಮದಿ ಕಡೆ ಕರೆದುಕೊಂಡು ಹೋಗುತ್ತವೆ. ಹಿತ್ತಲ ಗ್ರಾಮಸ್ಥರು ದೇವಸ್ಥಾನ ಗೋಪುರ, ಸಮುದಾಯ ಭವನ ನಿರ್ಮಿಸುವ ಮೂಲಕ ಜನಪರ ಕೆಲಸ ಮಾಡಿದ್ದಾರೆ. ಗ್ರಾಮದ ಎಲ್ಲರಿಗೂ ದೇವರ ಅನುಗ್ರಹ ಸಿಗುವಂತಾಗಲಿ’ ಎಂದು ದೇವಾಂಗ ಸಮಾಜದ ಮುಖಂಡ ಎಂ.ಡಿ.ಲಕ್ಷ್ಮೀನಾರಾಯಣ ಹೇಳಿದರು.
ಹಿತ್ತಲ ಗ್ರಾಮದ ದೇವಾಂಗ ಸಮಾಜದ ಅಧ್ಯಕ್ಷ ಮೇಗಲಮನೆ ದೇವೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು.
ಮುಖಂಡರಾದ ಕೆ.ಎಸ್.ಗುರುಮೂರ್ತಿ, ಲೋಕಪ್ಪ, ಗುರುಶಾಂತಪ್ಪ, ಸರ್ವೇಶಪ್ಪ, ರುದ್ರಪ್ಪ, ಶಿವಾನಂದ, ಆನಂದ, ರವಿಕುಮಾರ, ಸುರೇಶ, ಬಸವರಾಜ, ಸುರೇಶ, ಜಯಪ್ಪ, ಮಲ್ಲೇಶ, ತೀರ್ಥಪ್ಪ, ಕೇಶವ, ಪರಶುರಾಮ, ಸುರೇಶ, ಗ್ರಾಮದ ದೇವಾಂಗ ಸಮಾಜ ಬಾಂಧವರು, ಎಲ್ಲ ಸಮಾಜದ ಮುಖಂಡರು, ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.