
ಶಿಕಾರಿಪುರ: ಸಾರ್ವಜನಿಕ ಉದ್ದೇಶಕ್ಕಾಗಿ ತಾವಿದ್ದ ಮನೆಯನ್ನೇ ತೆರವುಗೊಳಿಸಿದ ಕುಟುಂಬಗಳಿಗೆ ಈವರೆಗೂ ಹಕ್ಕುಪತ್ರ ನೀಡಿಲ್ಲ. ಆದ್ದರಿಂದ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರು ಬೇಸತ್ತಿದ್ದಾರೆ.
ಪಟ್ಟಣದ ಅಕ್ಕಮಹಾದೇವಿ ವೃತ್ತದ ಸಮೀಪ ಇರುವ ಸರ್ಕಾರಿ ಐಟಿಐ ಕಾಲೇಜು, ಸರ್ಕಾರಿ ಪಿಯು ಕಾಲೇಜಿಗೆ ತೆರಳುವ ರಸ್ತೆಗಾಗಿ 2007– 08ರಲ್ಲಿ ಮನೆ ಬಿಟ್ಟುಕೊಟ್ಟ ಫಲಾನುಭವಿಗಳಿಗೆ ಹಕ್ಕಪತ್ರ ನೀಡುವ ಕಾರ್ಯ ಈವರೆಗೂ ಆಗಿಲ್ಲ. ಈ ಕುರಿತು ಪುರಸಭೆ ಸಾಮಾನ್ಯ ಸಭೆಯಲ್ಲಿ ವಿಪಕ್ಷ ಸದಸ್ಯರು ಹಲವು ಭಾರಿ ಧ್ವನಿ ಎತ್ತಿದ್ದಾರೆ. ಸಂತ್ರಸ್ತ ಕುಟುಂಬ ಸದಸ್ಯರು ಅನೇಕ ಬಾರಿ ಕಚೇರಿ ಅಲೆದಿದ್ದಾರೆ, ಕೇಳಿದ ದಾಖಲೆ ನೀಡಿದ್ದಾರೆ. ಆದರೂ ಸಮಸ್ಯೆಗೆ ಈವರೆಗೂ ಪರಿಹಾರ ಸಿಕ್ಕಿಲ್ಲ.
ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗ ಪಟ್ಟಣದ ಅಕ್ಕಮಹಾದೇವಿ ವೃತ್ತದ ಬಳಿಯ ಕೋಟೆ ಪ್ರದೇಶದಲ್ಲಿ ಸರ್ಕಾರಿ ಐಟಿಐ ಕಾಲೇಜು, ಸರ್ಕಾರಿ ಸ್ವತಂತ್ರ ಪಿಯು ಕಾಲೇಜು ಆರಂಭಿಸಿ ಅದಕ್ಕೆ ಹೊಸ ಕಟ್ಟಡ ನಿರ್ಮಿಸಿದರು. ಮುಖ್ಯರಸ್ತೆಯಿಂದ ಅಲ್ಲಿಗೆ ತೆರಳುವುದಕ್ಕೆ ನೇರವಾದ ದಾರಿ ಇರಲಿಲ್ಲ. ಅದಕ್ಕಾಗಿ ಆಗ ಅಲ್ಲಿ ವಾಸವಿದ್ದ ಎರಡು ದೊಡ್ಡ ಮನೆಯಲ್ಲಿ ವಿಭಾಗ ಮಾಡಿಕೊಂಡು ವಾಸವಿದ್ದ ಏಳು ಕುಟುಂಬಗಳನ್ನು ತೆರವುಗೊಳಿಸಲಾಯಿತು.
ಅವರಿಗೆ ಹೊಸದಾಗಿ ಮನೆ ನಿರ್ಮಿಸುವುದಕ್ಕೆ ಅನುದಾನ ಹಾಗೂ ಜಾಗ ನೀಡುವ ಭರವಸೆ ನೀಡಲಾಗಿತ್ತು. ಪುರಸಭೆಯಿಂದ ಹಳಿಯೂರು ಆಶ್ರಯ ಬಡಾವಣೆಯಲ್ಲಿ ನಿವೇಶನ ವಿತರಿಸಲಾಯಿತು. ಇದು ಪಟ್ಟಣದಿಂದ ದೂರ ಇರುವ ಕಾರಣಕ್ಕೆ ಸಂತ್ರಸ್ತ ಕುಟುಂಬಗಳು ಅಲ್ಲಿಗೆ ತೆರಳುವುದಕ್ಕೆ ನಿರಾಕರಿಸಿದರು. ಅಲ್ಲದೇ ತಾವಿದ್ದ ಜಾಗಗದ ಸಮೀಪದ ಸರ್ಕಾರಿ ಜಾಗದಲ್ಲಿ ಸಂತ್ರಸ್ತರಾದ ಅಜೀಜ್, ರಹೀಂಸಾಬ್, ಶಕೀಲಾಭಿ, ನೂರ್‌ಅಹ್ಮದ್, ಇಮಾಮ್‌ಸಾಬ್, ಅಬ್ದುಲ್ ಕರೀಂ, ರಷೀದ್, ಅಹಮದ್ ಮನೆ ನಿರ್ಮಿಸಿಕೊಂಡು ವಾಸಿಸಲು ಆರಂಭಿಸಿದ್ದಾರೆ.
ಸಂತ್ರಸ್ತರು ಹಕ್ಕುಪತ್ರಕ್ಕಾಗಿ ಜಿಲ್ಲಾಧಿಕಾರಿ ಬಳಿ ತಮ್ಮ ಅಳಲು ತೋಡಿಕೊಂಡ ನಂತರ ಸಂತ್ರಸ್ತರು ವಾಸವಿರುವ ಸರ್ಕಾರಿ ಜಾಗವನ್ನು ಪುರಸಭೆಗೆ ಹಸ್ತಾಂತರಿಸಿ 9 ಕುಟುಂಬಗಳಿಗೆ ಹಕ್ಕುಪತ್ರ ನೀಡಬೇಕು ಎಂದು ಜಿಲ್ಲಾಧಿಕಾರಿ ನಿರ್ಣಯಿಸಿ ಆದೇಶಿಸಿದ್ದಾರೆ. ಸರ್ಕಾರಿ ಜಾಗ ಪಹಣಿ ಪುರಸಭೆ ಹೆಸರಿಗೆ ವರ್ಗಾವಣೆಗೊಂಡು ಹಲವು ವರ್ಷ ಕಳೆದರೂ ಸಂತ್ರಸ್ತರಿಗೆ ಹಕ್ಕುಪತ್ರ ನೀಡುವ ಕೆಲಸ ಈವರೆಗೂ ಆಗಿಲ್ಲ.
‘ಹಕ್ಕಪತ್ರ ಇದ್ದರೆ ಆ ಜಾಗದಲ್ಲಿ ಉತ್ತಮ ಮನೆ ನಿರ್ಮಿಸಿಕೊಳ್ಳಬಹುದು, ಸಾಲ ಸೌಲಭ್ಯಕ್ಕೆ ಅದು ಅನುಕೂಲ ಕಲ್ಪಿಸುತ್ತದೆ ಎನ್ನುವ ಕಾರಣಕ್ಕೆ ಹಕ್ಕುಪತ್ರ ನೀಡಬೇಕು ಎಂದು ಸಂತ್ರಸ್ತರು ಆಸೆಯನ್ನಿಟ್ಟುಕೊಂಡು ದಿನ ದೂಡುತ್ತಿದ್ದಾರೆ. ಸಾರ್ವಜನಿಕ ಉದ್ದೇಶಕ್ಕೆ ಜಾಗ ನೀಡಿದವರಿಗೆ ಅಧಿಕಾರಿಗಳು ಕಚೇರಿಗೆ ಅಲೆಯುವ ಶಿಕ್ಷೆ ನೀಡಿರುವುದು ಅಕ್ಷಮ್ಯ. ಪುರಸಭೆ ಮುಖ್ಯಾಧಿಕಾರಿ ಲಾಭದಾಯಕ ಕೆಲಸಕ್ಕೆ ಮಾತ್ರ ಆದ್ಯತೆ ನೀಡುತ್ತಾರೆ. ಇನ್ನುಳಿದ ಕೆಲಸಕ್ಕೆ ಸಬೂಬು ಹೇಳುತ್ತಾರೆ’ ಎನ್ನುವುದು ಸದಸ್ಯ ರೋಷನ್ ಅವರ ಆರೋಪ.
ಶಿಕ್ಷಣ ಕ್ಷೇತ್ರದ ಅಭ್ಯುದಯಕ್ಕೆ ಬಿ.ಎಸ್.ಯಡಿಯೂರಪ್ಪ ಉತ್ತಮ ಕೆಲಸ ಮಾಡಿದ್ದಾರೆ. ಆದರೆ ಅವರ ಆಶಯಕ್ಕೆ ತಕ್ಕಂತೆ ಅಧಿಕಾರಿಗಳು ಕೆಲಸ ಮಾಡದ ಪರಿಣಾಮ ರಸ್ತೆಗೆ ಜಾಗ ನೀಡಿದ ಸಂತ್ರಸ್ತರು ಅಲೆದಾಡುವಂತಾಗಿದೆ.ಉಳ್ಳಿ ದರ್ಶನ್ ಪುರಸಭೆ ಸದಸ್ಯ
ಹಕ್ಕುಪತ್ರ ನೀಡಬೇಕಿರುವ ಜಾಗ ಸರ್ವೆ ನಂ. 35ರ ಪೋಡಿ ಕೆಲಸ ಬಾಕಿ ಇದ್ದು ಸರ್ವೆ ನಂತರ ನಗರಾಭಿವೃದ್ಧಿ ಅನುಮತಿ ಪಡೆದು ಹಕ್ಕುಪತ್ರ ನೀಡಲಾಗುವುದು.ಭರತ್ ಮುಖ್ಯಾಧಿಕಾರಿ ಪುರಸಭೆ ಶಿಕಾರಿಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.