ADVERTISEMENT

ಅಂಜನಾಪುರ–ಅಂಬ್ಲಿಗೊಳ್ಳ ಜಲಾಶಯಕ್ಕೆ ಶಾಸಕ ಯಡಿಯೂರಪ್ಪ ಬಾಗಿನ ಅರ್ಪಣೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2022, 6:33 IST
Last Updated 23 ಜುಲೈ 2022, 6:33 IST
ಶಿಕಾರಿಪುರ ತಾಲ್ಲೂಕಿನ ಅಂಜನಾಪುರ ಜಲಾಶಯಕ್ಕೆ ಶುಕ್ರವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಾಗಿನ ಅರ್ಪಿಸಿದರು.
ಶಿಕಾರಿಪುರ ತಾಲ್ಲೂಕಿನ ಅಂಜನಾಪುರ ಜಲಾಶಯಕ್ಕೆ ಶುಕ್ರವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಾಗಿನ ಅರ್ಪಿಸಿದರು.   

ಅಂಜನಾಪುರ- ಅಂಬ್ಲಿಗೊಳ್ಳ (ಶಿಕಾರಿಪುರ): ‘ತಾಲ್ಲೂಕಿನಲ್ಲಿ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನ ಮಾಡಲು ಆದ್ಯತೆ ನೀಡಲಾಗಿದೆ’ ಎಂದು ಶಾಸಕ ಬಿ.ಎಸ್.ಯಡಿಯೂರಪ್ಪ ಹೇಳಿದರು.

ತಾಲ್ಲೂಕಿನ ಅಂಜನಾಪುರ ಹಾಗೂ ಅಂಬ್ಲಿಗೊಳ್ಳ ಜಲಾಶಯಕ್ಕೆ ಶುಕ್ರವಾರ ಬಾಗಿನ ಅರ್ಪಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ವರುಣ ದೇವನ ಕೃಪೆಯಿಂದ ರೈತರು ನೆಮ್ಮದಿಯ ಜೀವನ ನಡೆಸುವಂತಾಗಬೇಕು. ರೈತರಿಗೆ ಸಕಾಲಕ್ಕೆ ಮಳೆ, ಬೆಳೆಯಾಗುವ ಜತೆಗೆ ಬೆಳೆದ ಬೆಳೆಗೆ ಉತ್ತಮ ಬೆಲೆ ದೊರೆಯುವಂತಾಗಬೇಕು. ರಾಜ್ಯದಲ್ಲಿಯೇ ಶಿಕಾರಿಪುರ ತಾಲ್ಲೂಕು ಮಾದರಿಯನ್ನಾಗಿ ಮಾಡಿದ್ದೇವೆ. ಶಕ್ತಿ ಮೀರಿ ಅಭಿವೃದ್ಧಿ ಕಾರ್ಯ ಮಾಡಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೌಲಭ್ಯಗಳು ಪ್ರತಿ ಮನೆಗೆ ತಲುಪಿವೆ. ಮಹಿಳಾ ಸಬಲೀಕರಣಕ್ಕೆ ಸರ್ಕಾರ ಆದ್ಯತೆ ನೀಡಿದೆ’ ಎಂದರು.

ADVERTISEMENT

‘ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಬಿ.ಎಸ್‌. ಯಡಿಯೂರಪ್ಪ ಇಚ್ಛಾಶಕ್ತಿಯಿಂದ ಕೆಲಸ ಮಾಡಿದ್ದಾರೆ. ಜನಪರ ಹೋರಾಟದ ಮೂಲಕ ಮೇಲೆ ಬಂದ ಅವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಜನರ ಕೆಲಸ ಮಾಡಿದ್ದಾರೆ. ಅಂಜನಾಪುರ ಹಾಗೂ ಅಂಬ್ಲಿಗೊಳ್ಳ ಜಲಾಶಯ ಅಚ್ಚುಕಟ್ಟು ರೈತರ ಕೃಷಿ ಭೂಮಿಗೆ ತೆರಳಲು ರಸ್ತೆ ಅಭಿವೃದ್ಧಿ ಮಾಡಲಾಗಿದೆ. ಶಿಕ್ಷಣ, ಆರೋಗ್ಯ, ನೀರಾವರಿ ಕ್ಷೇತ್ರದ ಅಭಿವೃದ್ಧಿಗೆ ಯಡಿಯೂರಪ್ಪ ಅನುದಾನ ನೀಡಿದ್ದಾರೆ’ ಎಂದು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಶ್ಲಾಘಿಸಿದರು.

ತಂದೆ ಯಡಿಯೂರಪ್ಪ ಅವರು ತಾಲ್ಲೂಕಿನ ಎಲ್ಲ ಜಾತಿ, ಧರ್ಮಗಳ ಜನರ ವಿಶ್ವಾಸ ಗಳಿಸುವ ಮೂಲಕ ಶಾಸಕರಾಗಿ ಹಾಗೂ ಮುಖ್ಯಮಂತ್ರಿಯಾಗಿ ರಾಜ್ಯದ ಅಭಿವೃದ್ಧಿ ಮಾಡಿದ್ದಾರೆ. ನಂಜುಡಪ್ಪ ವರದಿ ಪ್ರಕಾರ ಹಿಂದುಳಿದ ತಾಲ್ಲೂಕು ಆಗಿದ್ದ ಶಿಕಾರಿಪುರದ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ಸಂಸದ ರಾಘಣ್ಣ ಹಾಗೂ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ ಅವರು ಅಭಿವೃದ್ಧಿ ಪರ ಕೆಲಸ ಮಾಡಿದ್ದಾರೆ’ ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಸಾಗರ ಉಪ ವಿಭಾಗಾಧಿಕಾರಿ ಪಲ್ಲವಿ, ತಹಶೀಲ್ದಾರ್ ಎಂ.ಪಿ.ಕವಿರಾಜ್, ಸಂಸದ ರಾಘವೇಂದ್ರ ಪತ್ನಿ ತೇಜಸ್ವಿನಿ, ವಿಜಯೇಂದ್ರ ಪತ್ನಿ ಪ್ರೇಮಾ, ಪುರಸಭೆ ಅಧ್ಯಕ್ಷೆ ರೇಖಾಬಾಯಿ ಮಂಜುನಾಥ್ ಸಿಂಗ್, ಮುಖಂಡರಾದ ಭದ್ರಾಪುರ ಹಾಲಪ್ಪ, ಕೊಳಗಿ ರೇವಣಪ್ಪ, ಎಂ.ಬಿ.ಚನ್ನವೀರಪ್ಪ, ಬಿ.ಡಿ.ಭೂಕಾಂತ್, ತೊಗರ್ಸಿ ಸಣ್ಣ ಹನುಮಂತಪ್ಪ, ಡಿ.ಟಿ.ಮೇಘರಾಜ್, ರುದ್ರಮೂರ್ತಿ, ವೀರೇಂದ್ರ ಪಾಟೀಲ್, ನೀರಾವರಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

***

ಯಡಿಯೂರಪ್ಪ ಅವರು ತಮ್ಮ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಶಿಕಾರಿಪುರ ವಿಧಾನ ಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿರುವುದು ಸಂತೋಷವಾಗಿದೆ. ರಾಜಕಾರಣದಲ್ಲಿ ಯಡಿಯೂರಪ್ಪ ನಮಗೆಲ್ಲ ದಾರಿದೀಪವಾಗಿದ್ದಾರೆ.

ಎಚ್‌.ಹಾಲಪ್ಪ ಹರತಾಳು, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.