ADVERTISEMENT

ಶಿವಮೊಗ್ಗ | ಜುಲೈ 15ರಿಂದ ಕೃಷಿ ವಾಹನ ಉತ್ಸವ

​ಪ್ರಜಾವಾಣಿ ವಾರ್ತೆ
Published 4 ಜುಲೈ 2020, 14:23 IST
Last Updated 4 ಜುಲೈ 2020, 14:23 IST

ಶಿವಮೊಗ್ಗ: ಜಿಲ್ಲೆಯಲ್ಲಿ ಜುಲೈ 15ರಿಂದ ಆಗಸ್ಟ್‌ 30ರವರೆಗೆ ಕೃಷಿ ವಾಹನ ಉತ್ಸವ ನಡೆಯಲಿದೆ. ಈ ಅವಧಿಯಲ್ಲಿ ರೈತರಿಗೆ ನಾಲ್ಕುಚಕ್ರಗಳ ವಾಹನ ಖರೀದಿಸಲು ₹ 40 ಲಕ್ಷವರೆಗೆ ಸಾಲ ನೀಡಲಾಗುವುದು ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಆರ್‌.ಎಂ.ಮಂಜುನಾಥಗೌಡ ಹೇಳಿದರು.

ಡಿಸಿಸಿ ಬ್ಯಾಂಕ್‌ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಆದಾಯ ತೆರಿಗೆ ಕಾಯ್ದೆ–194ರ ತಿದ್ದುಪಡಿ ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ರೈತರ ಬೇಡಿಕೆಗೆ ತಕ್ಕಂತೆ ಪ್ರಸಕ್ತ ವರ್ಷದಲ್ಲಿ ಡಿಸಿಸಿ ಬ್ಯಾಂಕ್‌ನಿಂದ ಸುಮಾರು ₹ 570 ಕೋಟಿಯಷ್ಟು ಬೆಳೆ ಸಾಲ ನೀಡಿದೆ. ಇನ್ನೂ ಕೂಡ ಬೆಳೆ ಸಾಲಕ್ಕೆ ಅರ್ಜಿ ಬರುತ್ತಿವೆ. ಇದರ ಹೊರತಾಗಿ ರೈತರು ದೊಡ್ಡ ಪ್ರಮಾಣ ವಾಹನ ತೆಗೆದುಕೊಳ್ಳಲು ಸಾಲ ನೀಡಲಾಗುವುದು. ವಾಹನ ಖರೀದಿಗೆ ಕೇವಲ ಶೇ 9ರ ಬಡ್ಡಿದರಲ್ಲಿ ಸುಮಾರು ₹ 40 ಲಕ್ಷದವರೆಗೂ ಸಾಲ ನೀಡಲಾಗುವುದು ಎಂದರು.

ADVERTISEMENT

ನಗದು ಡ್ರಾ ಮಾಡಿದರೆ ಟಿಡಿಎಸ್‌ ಕಡಿತ:ಇನ್ನು ಮುಂದೆ ಗ್ರಾಹಕರು ₹ 20 ಲಕ್ಷದಿಂದ ಕೋಟಿಯವರೆಗೆ ನಗದು ಡ್ರಾ ಮಾಡಿದರೆ ಶೇ 2ರಷ್ಟು ಹಾಗೂ ₹ 1 ಕೋಟಿ ಮೀರಿದರೆ ಶೇ 5ರಷ್ಟು ಟಿಡಿಎಸ್ ಕಡಿತ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕಳೆದ 3 ವರ್ಷಗಳ ಆದಾಯ ತೆರಿಗೆ ರಿಟರ್ನ್ ಸಲ್ಲಿಸದೇ ಇದ್ದಲ್ಲಿ ₹ 1 ಕೋಟಿಗೂ ಅಧಿಕ ನಗದು ಹಿಂಪಡೆತಕ್ಕೆ ಶೇ 5 ರಷ್ಟು ತೆರಿಗೆ ಕಡಿತಗೊಳಿಸಲಾಗುತ್ತದೆ. ಈ ತಿದ್ದುಪಡಿ ಅರ್ಥೈಸಿಕೊಂಡು ಶಾಖಾ ಹಂತದಲ್ಲಿ ಪರಿಣಾಮಕಾರಿಯಾಗಿ ಜಾರಿಯಾಗಬೇಕು ಸಲಹೆ ನೀಡಿದರು.

ಲಾಕ್‌ಡೌನ್‌ ಕಾರಣ ಮಾರ್ಚ್‌ನಿಂದ ಜೂನ್‌ವರೆಗೆ ಎಟಿಎಂ ಮೂಲಕ ಹಣ ಡ್ರಾ ಮಾಡಿದರೆ ಯಾವುದೇ ಸೇವಾ ಶುಲ್ಕ ಪಡೆಯದಂತೆ ರಿಯಾಯಿತಿ ನೀಡಲಾಗಿತ್ತು. ಈಗ ಆ ರಿಯಾಯಿತಿ ರದ್ದು ಮಾಡಲಾಗಿದೆ. ಎಟಿಎಂ ಮೂಲಕ ಹಣವನ್ನೂ ಡ್ರಾ ಮಾಡಿದರೂ ₹ 17ರಷ್ಟು ಹಣ ಕಡಿತವಾಗಲಿದೆ. ಈ ಬಗ್ಗೆ ಗ್ರಾಹಕರು ಜಾಗರೂಕರಾಗಿರಬೇಕು ಎಂದು ಮಾಹಿತಿ ನೀಡಿದರು.

ಅತಿಹೆಚ್ಚು ಬೆಳೆ ಸಾಲ:ರಾಜ್ಯದ ಇತರೆ ಜಿಲ್ಲೆಗಳ ಸಹಕಾರ ಬ್ಯಾಂಕ್‌ಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಅತಿ ಹೆಚ್ಚು ರೈತರಿಗೆ ಸಾಲ ನಿಡಲಾಗಿದೆ. ಪ್ರಸಕ್ತ ಸಾಲಿನ ₹ 1,400 ಕೋಟಿ ವಹಿವಾಟಿನಲ್ಲಿ ಶೇ 80ರಷ್ಟು ರೈತರಿಗೆ ಸಾಲ ನೀಡಲಾಗಿದೆ. ಸುಮಾರು 1.87 ಲಕ್ಷ ರೈತರಿಗೆ ಸುಮಾರು ₹ 570 ಕೋಟಿ ಬೆಳೆ ಸಾಲ ನೀಡಲಾಗಿದೆ ಎಂದು ವಿವರ ನೀಡಿದರು.

ಬ್ಯಾಂಕಿನ ಉಪಾಧ್ಯಕ್ಷ ಎಂ.ಬಿ.ಚನ್ನವೀರಪ್ಪ, ನಿರ್ದೇಶಕರಾದ ಎಸ್.ಪಿ.ದಿನೇಶ್, ಜಿ.ಎನ್.ಸುಧೀರ್, ಎಂ.ಎಂ.ಪರಮೇಶ್, ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಸಿ.ರಾಜಣ್ಣ ರೆಡ್ಡಿ, ಬಿ.ಎನ್‌.ರಮೇಶ್‌, ಮಧುಸೂದನ್ ನಾಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.