ಶಿವಮೊಗ್ಗ: ಒಳ ಮೀಸಲಾತಿ ವರ್ಗೀಕರಣ ವಿರೋಧಿಸಿ ಬಂಜಾರ ಸಮುದಾಯದವರು ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿರುವ ಸತ್ಯಾಗ್ರಹ ಗುರುವಾರ ಏಳನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆಯ ಭಾಗವಾಗಿ ಮೀಸಲಾತಿಯ ಶವಯಾತ್ರೆ ನಡೆಸಿದ ಬಂಜಾರ ಸಮುದಾಯದವರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸವಳಂಗ ರಸ್ತೆಯಲ್ಲಿ ಮೀಸಲಾತಿಯ ಶವಯಾತ್ರೆ ನಡೆಸಲಾಯಿತು. ಶಿವಮೂರ್ತಿ ಸರ್ಕಲ್‌ನಲ್ಲಿ ಅಣಕು ಶವವನ್ನು ಇರಿಸಿ ಘೋಷಣೆ ಕೂಗಿದರು. ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಶವಯಾತ್ರೆ ಮುಂದುವರೆಸಿದರು.
ಶಿವಮೂರ್ತಿ ವೃತ್ತದಲ್ಲಿ ಎಲ್ಲ ಕಡೆ ಟ್ರ್ಯಾಕ್ಟರ್‌ಗಳನ್ನು ರಸ್ತೆಗೆ ಅಡ್ಡ ನಿಲ್ಲಿಸಿ ರಸ್ತೆ ತಡೆ ನಡೆಸಲಾಯಿತು. ಇದರಿಂದ ಸವಳಂಗ ರಸ್ತೆ, ಕುವೆಂಪು ರಸ್ತೆ, ಜಯನಗರ ಮುಖ್ಯ ರಸ್ತೆಯಲ್ಲಿ ವಾಹನಗಳು ಸರತಿಯಲ್ಲಿ ನಿಲ್ಲುವಂತಾಯಿತು.
ಈ ವೇಳೆ ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಅವರು ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಮೀಸಲಾತಿಯ ಉದ್ದೇಶವೇ ಹಾಳಾಗಲಿದೆ. ಆದ್ದರಿಂದ ಮೀಸಲಾತಿಯ ಶವಯಾತ್ರೆ ಮಾಡುತ್ತಿದ್ದೇವೆ ಎಂದರು.
ಪ್ರತಿಭಟನೆಯಲ್ಲಿ ಸಿದ್ದಾಪುರ, ರಾಮನಕೊಪ್ಪ, ವೀರಾಪುರ, ಸಿರಿಯೂರು, ಬಿಳಕಿ, ಹೆಬ್ಬಂಡಿ ಕೋಮಾರನಹಳ್ಳಿ, ಬಾಬಳ್ಳಿ, ನಾಗತಿ ಬೆಳಗಲು, ಹೊಸಹಳ್ಳಿ, ಚಿಕ್ಕಮರಡಿ, ಕಾಟಿಕೆರೆ, ಅಬ್ಬಲಗೆರೆ, ಹುಣಸೋಡು, ಬಿಕ್ಕೋನಹಳ್ಳಿ ಬೀರನಕೆರೆ, ಮೇಲಿನ ಕುಂಚನಹಳ್ಳಿಯ ನಿವಾಸಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.