ADVERTISEMENT

ನೌಕರರ ಮೇಲೆ ಹಲ್ಲೆ | ನಿರ್ದಾಕ್ಷಿಣ್ಯ ಕ್ರಮ ನಿಶ್ಚಿತ: DC ಗುರುದತ್ತ ಹೆಗಡೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 5:59 IST
Last Updated 22 ಆಗಸ್ಟ್ 2025, 5:59 IST
ಗುರುದತ್ತ ಹೆಗಡೆ
ಗುರುದತ್ತ ಹೆಗಡೆ   

ಶಿವಮೊಗ್ಗ: ಕರ್ತವ್ಯ ನಿರತ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ನಿಶ್ಚಿತ ಎಂದು ಎಚ್ಚರಿಸಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಯಾವುದೇ ಆತಂಕವಿಲ್ಲದೇ ನಿರ್ಭೀತಿಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದು ನೌಕರರಿಗೆ ಧೈರ್ಯ ತುಂಬಿದರು.

ಸರ್ಕಾರಿ ನೌಕರರ ಕುಂದು–ಕೊರತೆ, ಸಮಸ್ಯೆ, ಸೇವಾಸೌಲಭ್ಯಗಳ ತ್ವರಿತ ಸ್ಪಂದನೆಗಾಗಿ ರಚಿಸಿದ ಜಿಲ್ಲಾ ಮಟ್ಟದ ಜಂಟಿ ಸಮಾಲೋಚನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ನೌಕರರಿಗೆ ಯಾವುದೇ ಅಭದ್ರತೆ ಕಾಡದಂತೆ ನೋಡಿಕೊಳ್ಳಬೇಕಾದದ್ದು, ವ್ಯವಸ್ಥೆಗೆ ಸಹಕರಿಸಬೇಕಾದದ್ದು ನಾಗರಿಕರೆಲ್ಲರ ಕರ್ತವ್ಯ’ ಎಂದರು.

‘ಸಾರ್ವಜನಿಕ ಬದುಕಿನಲ್ಲಿ ಕೆಲಸ ಮಾಡುವವರಿಗೆ ಸೂಕ್ತ ರಕ್ಷಣೆ ಸಿಗಬೇಕು. ನೌಕರರ ಮೇಲೆ ಸಲ್ಲದ ಕಾರಣಕ್ಕೆ ಹಲ್ಲೆಗೆ ಮುಂದಾಗುವುದು, ಅನುಚಿತವಾಗಿ ವರ್ತಿಸುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು’ ಎಂದು ಹೇಳಿದರು.

ADVERTISEMENT

‘ಜಿಲ್ಲೆ, ನಗರ ಮತ್ತು ಪಟ್ಪಣ ಪ್ರದೇಶಗಳಲ್ಲಿ ನೌಕರರ ಬೇಡಿಕೆಗನುಗುಣವಾಗಿ ವಸತಿ ಗೃಹ ದೊರೆಯುತ್ತಿಲ್ಲ. ಅಲ್ಲದೇ ದಶಕಗಳ ಹಿಂದೆ ನಿರ್ಮಾಣಗೊಂಡಿರುವ ಅನೇಕ ವಸತಿ ಗೃಹಗಳು ದುರಸ್ತಿ ಕಂಡಿಲ್ಲ. ದುರಸ್ತಿ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮಕ್ಕೆ ಸೂಚಿಸಲಾಗುವುದು’ ಎಂದರು.

‘ಸರ್ಕಾರಿ ನೌಕರರಿಗೆ ನಗದು ರಹಿತ ಆರೋಗ್ಯ ಸೇವೆ ಒದಗಿಸುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಿಂದ ವಿವಿಧ ಇಲಾಖೆಗಳ 16,000 ನೌಕರರು ಹಾಗೂ ಅವರ ಕುಟುಂಬದವರು ನಗದು ರಹಿತ ಆರೋಗ್ಯ ಸೌಲಭ್ಯ ಪಡೆದುಕೊಳ್ಳಲಿದ್ದಾರೆ. ಸರ್ಕಾರಿ ನೌಕರರಿಗೆ ಮಾರಣಾಂತಿಕ ಕಾಯಿಲೆ ಹಾಗೂ ಶಸ್ತ್ರಚಿಕಿತ್ಸೆ ಸೇರಿದಂತೆ ಬಹುತೇಕ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ದೊರೆಯಲಿದೆ’ ಎಂದು ತಿಳಿಸಿದರು.

ಸಭೆಯಲ್ಲಿ ಎಡಿಸಿ ಸಿದ್ಧಲಿಂಗರಡ್ಡಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸುಜಾತಾ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಮಂಜುನಾಥಸ್ವಾಮಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಆರ್.ಪಾಪಣ್ಣ, ಡಾ.ಹಿರೇಮಠ್‌, ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿದ್ದಬಸಪ್ಪ, ಉಮೇಶ್‌ ಉಪಸ್ಥಿತರಿದ್ದರು.

ಸರ್ಕಾರಿ ನೌಕರರು ವರ್ಗಾವಣೆಗೊಂಡು ಜಿಲ್ಲೆಗೆ ಬಂದಾಗ ಅವರ ಮಕ್ಕಳಿಗೆ ಶಾಲೆಗೆ ದಾಖಲಾತಿ ಕೊಡುವುದಿಲ್ಲ. ಹಾಗೆ ಮಾಡದಂತೆ ಸಂಬಂಧಿಸಿದವರಿಗೆ ಜಿಲ್ಲಾಡಳಿತ ಸೂಕ್ತ ಮಾರ್ಗದರ್ಶನ ಮಾಡಲಿ
ಆರ್.ಮೋಹನ್‌ಕುಮಾರ್‌ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ
ಆರ್‌ಟಿಐ ಅರ್ಜಿ ಅನಗತ್ಯ ಕಿರುಕುಳ ಸಲ್ಲ:ಡಿಸಿ
ಆರ್‌ಟಿಐ ಅರ್ಜಿ ಸಲ್ಲಿಸಿ ಅಧಿಕಾರಿಗಳಿಗೆ ಇನ್ನಿಲ್ಲದಂತೆ ಕಾಡುವುದು ಬೇಡಿಕೆ ಸಲ್ಲಿಸುವುದು ಮಾಡುವುದನ್ನು ಒಪ್ಪುವುದಿಲ್ಲ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು. ‘ಕೆಲಸದ ಸ್ಥಳದಲ್ಲಿ ಅನಗತ್ಯ ಕಿರಿಕಿರಿ ಉಂಟು ಮಾಡುವುದು ಪತ್ರಿಕೆಗಳಲ್ಲಿ ಆಧಾರರಹಿತ ಆರೋಪ ಮಾಡುವುದಲ್ಲದೇ ಅಸಂವಿಧಾನಿಕ ಪದಗಳ ಬಳಕೆ ಮಾಡುತ್ತಿರುವುದನ್ನೂ ಸಹ ಗಂಭೀರವಾಗಿ ಪರಿಗಣಿಸಲಾಗುವುದು. ಅಂತಹ ವ್ಯಕ್ತಿಗಳ ವಿರುದ್ಧ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಅನಿವಾರ್ಯ’ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.