ADVERTISEMENT

ಶಿವಮೊಗ್ಗ: ಶಿಥಿಲಾವಸ್ಥೆ ತಲುಪುತ್ತಿರುವ ಸರ್ಕಾರಿ ಕಟ್ಟಡ!

ತಾಲ್ಲೂಕು ಕಚೇರಿ ಅವ್ಯವಸ್ಥೆ; ಅಧಿಕಾರಿ ವಲಯದ ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 4:43 IST
Last Updated 11 ಸೆಪ್ಟೆಂಬರ್ 2025, 4:43 IST
ನಗರದ ತಾಲ್ಲೂಕು ಕಚೇರಿಯ ಸಜ್ಜೆಗಳ ಮೇಲೆ ಬೆಳೆದು ನಿಂತಿರುವ ಗಿಡ–ಗಂಟಿಗಳು
ನಗರದ ತಾಲ್ಲೂಕು ಕಚೇರಿಯ ಸಜ್ಜೆಗಳ ಮೇಲೆ ಬೆಳೆದು ನಿಂತಿರುವ ಗಿಡ–ಗಂಟಿಗಳು   

ಭದ್ರಾವತಿ: ಸರ್ಕಾರದ ಆಸ್ತಿ ಸಾರ್ವಜನಿಕರ ಸೇರಿದ ಆಸ್ತಿ. ಜನರ ತೆರಿಗೆ ಹಣದಿಂದ ಸರ್ಕಾರಿ ಕಟ್ಟಡ ನಿರ್ಮಿಸಲಾಗುತ್ತದೆ. ಆದರೆ,  ಸಮರ್ಪಕವಾಗಿ ನಿರ್ವಹಿಸದೆ ನಿರ್ಲಕ್ಷಿಸಲಾಗುತ್ತಿದೆ ಎಂಬುದಕ್ಕೆ ನಗರದಲ್ಲಿ ಅನೇಕ ನಿದರ್ಶನಗಳಿವೆ.

ಇಲ್ಲಿನ ಹಳೇ ನಗರದಲ್ಲಿನ ತಾಲ್ಲೂಕು ಕಚೇರಿ ಕಟ್ಟಡವನ್ನು ಕೆಲವೇ ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಆದರೆ, ಅದು ನಿರ್ವಹಣೆ ಕೊರತೆಯಿಂದ ಶಿಥಿಲಾವಸ್ಥೆ ತಲುಪುತ್ತಿದೆ. ಕಟ್ಟಡದ ಗೋಡೆ, ಚಾವಣಿಗಳ ಮೇಲೆ ಗಿಡ– ಗಂಟಿಗಳು ಬೆಳೆದಿವೆ. ಇವುಗಳನ್ನು ಹಾಗೇ ಬಿಟ್ಟರೆ ಕಟ್ಟಡ ಬಿರುಕು ಬಿಡುವುದು ಶತಃಸಿದ್ಧ.

ಸಮರ್ಪಕ ನಿರ್ವಹಣೆ ಇಲ್ಲದ ಕಾರಣಕ್ಕೆ ಕಟ್ಟಡಗಳ ಮೇಲೆ, ಮೇಲ್ಛಾವಣಿಗಳಲ್ಲಿ, ಕಿಟಕಿಗಳಲ್ಲಿ ಮಳೆ ನೀರು ನಿಂತು ಅಲ್ಲಲ್ಲಿ ಗಿಡಗಳು ಬೆಳೆದುಕೊಂಡಿವೆ. ತಾಲ್ಲೂಕು ಕಚೇರಿ ಹೊಸ ಕಟ್ಟಡ ಆರಂಭವಾದಾಗಿನಿಂದ ಇಂದಿನವರೆಗೂ ಕಟ್ಟಡಕ್ಕೆ ಬಣ್ಣ, ನಿರ್ವಹಣೆ, ಮೇಲ್ಚಾವಣಿಗೆ ಭದ್ರತೆ ವ್ಯವಸ್ಥೆ ಇಲ್ಲ. ಕಟ್ಟಡದ ಮೇಲೆ ಬೆಳೆದಿರುವ ಅರಳಿ ಗಿಡಗಳನ್ನು ಆದಷ್ಟು ಬೇಗ ಬೇರು ಸಮೇತ ಕಿತ್ತು, ಪುನಃ ಬೆಳೆಯದಂತೆ ಕಳೆನಾಶಕ ಸಿಂಪಡಿಸಬೇಕು. ಇಲ್ಲವಾದಲ್ಲಿ ಕಟ್ಟಡ ಶಿಥಿಲಗೊಳ್ಳುತ್ತದೆ ಎಂದು ಸ್ಥಳೀಯರಾದ ಪೌಲಸ್ ತಿಳಿಸಿದರು.

ADVERTISEMENT

ಸರ್ಕಾರಿ ಅಧಿಕಾರಿಗಳು ತಮ್ಮ ಸ್ವಂತ ಆಸ್ತಿಯನ್ನು ಸಂರಕ್ಷಿಸುವಂತೆ ಸರ್ಕಾರದ ಆಸ್ತಿಗಳನ್ನು ಆಸಕ್ತಿಯಿಂದ ಕಾಪಾಡಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಸ್ವಂತ ಹಣದಿಂದಲೇ ದುರಸ್ತಿ ಮಾಡಿಸುವಂತೆ ಮೇಲಾಧಿಕಾರಿಗಳು ಸೂಚಿಸಬೇಕು ಎಂದು ವರು ಆಗ್ರಹಿಸಿದರು.

ನಿರ್ವಹಣೆ ಇಲ್ಲದೆ ಶಿಥಿಲಾವಸ್ಥೆ ತಲುಪುವ ಕಟ್ಟಡಗಳನ್ನು ಮತ್ತೆ ನಿರ್ಮಿಸಲು ಹಾಗೂ ಹೊಸ ವಾಹನಗಳನ್ನು ಖರೀದಿಸಲು ಮತ್ತೆ ಸಾರ್ವಜನಿಕರ ಹಣವನ್ನು ಬಳಸಲಾಗುತ್ತದೆ. ಅಧಿಕಾರಿಗಳು ಸರ್ಕಾರಿ ಆಸ್ತಿಗೆ ಹಾನಿಯಾಗದಂತೆ ಎಚ್ಚರ ವಹಿಸಬೇಕೆಂಬುದು ನಗರದ ನಾಗರಿಕರ ಆಗ್ರಹ.

‘ತಾಲ್ಲೂಕು ಕಚೇರಿಯ ಕಟ್ಟಡದ ದುರಸ್ತಿ ಕಾರ್ಯಕ್ಕೆ ಈ ಹಿಂದೆಯೇ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗಿತ್ತು. ಪುನಃ ಈಗ ಮತ್ತೊಂದು ಪತ್ರ ಬರೆದಿದ್ದೇವೆ. ಸಧ್ಯದಲ್ಲೇ ಕಟ್ಟಡಕ್ಕೆ ಬಣ್ಣ ಬಳಿಸುವ ಹಾಗೂ ದುರಸ್ತಿ ಮಾಡುವ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ಇವುಗಳ ನಿರ್ವಹಣೆಗೆ ₹ 70 ಲಕ್ಷದಿಂದ ₹ 75 ಲಕ್ಷ ವ್ಯಯವಾಗಬಹುದು. ಇದಕ್ಕೆ ಶಾಸಕರ ಬಳಿ ಅನುಮೋದನೆ ಸಲ್ಲಿಸಲಾಗಿದೆ ಎಂದು ತಹಶೀಲ್ದಾರ್ ಪರುಸಪ್ಪ ಕುರುಬರ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.