ADVERTISEMENT

ಎಪಿಎಂಸಿ ವಿಲೀನ ವಿರೋಧಿಸಿ ಹೆದ್ದಾರಿ ತಡೆ

ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ, ನಿರ್ಧಾರ ಹಿಂಪಡೆಯಲು ಕಾಗೋಡು ತಿಮ್ಮಪ್ಪ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಮೇ 2022, 2:58 IST
Last Updated 25 ಮೇ 2022, 2:58 IST
ಹೊಸನಗರ ಎಪಿಎಂಸಿ ವಿಲೀನ ಖಂಡಿಸಿ ಮಂಗಳವಾರ ಕಾಂಗ್ರೆಸ್‌ ಕಾರ್ಯಕರ್ತರು ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಹೊಸನಗರ ಎಪಿಎಂಸಿ ವಿಲೀನ ಖಂಡಿಸಿ ಮಂಗಳವಾರ ಕಾಂಗ್ರೆಸ್‌ ಕಾರ್ಯಕರ್ತರು ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.   

ಹೊಸನಗರ: ತಾಲ್ಲೂಕಿನ ಎಪಿಎಂಸಿಯನ್ನು ಸಾಗರ ಮಾರುಕಟ್ಟೆ ಜತೆ ವಿಲೀನಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಮಂಗಳವಾರ ಹೆದ್ದಾರಿ ತಡೆ ನಡೆಸಿದರು.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ‘ಹೊಸನಗರ ತಾಲ್ಲೂಕು ನಿರೀಕ್ಷಿತ ಅಭಿವೃದ್ಧಿಯಾಗದೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತಾ ಬಂದಿದೆ. ತಾಲ್ಲೂಕಿನ ರೈತರ ಜೀವನಾಡಿಯಾಗಿರುವ ಎಪಿಎಂಸಿ ವಿಲೀನಗೊಳಿಸುವ ಪ್ರಕ್ರಿಯೆಗೆ ಮುಂದಾಗಿರುವ ಸರ್ಕಾರದ ಕ್ರಮ ಖಂಡನೀಯ. ಈಗಾಗಲೇ ವಿಲೀನ ಪ್ರಕ್ರಿಯೆಗೆ ನೋಟಿಫಿಕೇಶನ್ ಜಾರಿ ಮಾಡಲಾಗಿದೆ. ಇದಕ್ಕೆ ಆಕ್ಷೇಪಣೆ ಸಲ್ಲಿಸುವ ಜತೆಗೆ, ನ್ಯಾಯಾಲಯದ ಮೆಟ್ಟಲೇರುವ ಕೆಲಸ ಮಾಡಬೇಕಿದೆ. ₹ 3 ಕೋಟಿಯಷ್ಟು ಆದಾಯವಿರುವ ಮತ್ತು ಉತ್ತಮ ಪ್ರಗತಿಯಲ್ಲಿರುವ ಎಪಿಎಂಸಿಯನ್ನು ವಿಲೀನಗೊಳಿಸುವ ಸರ್ಕಾರದ ಔಚಿತ್ಯವೇನು’ ಎಂದು ಪ್ರಶ್ನಿಸಿದರು.

ಇಂತಹ ವಿಚಾರಗಳು ಬಂದಾಗ ಶಾಸಕರು ಜನರ ಹಿತರಕ್ಷಣೆ ಮಾಡುವ ಕೆಲಸ ಮಾಡಬೇಕು. ಆದರೆ, ಸಾಗರ ಶಾಸಕರು ಏನು ಮಾಡುತ್ತಿದ್ದಾರೆ ಗೊತ್ತಿಲ್ಲ. ಹೊಸನಗರ ತಾಲ್ಲೂಕಿನ ಹಿತರಕ್ಷಣೆ ಗಮನದಲ್ಲಿಟ್ಟು ಎಪಿಎಂಸಿ ವಿಲೀನ ನಿರ್ಧಾರ ಹಿಂಪಡೆಯಬೇಕು ಪಡೆಯಬೇಕು. ಅಲ್ಲಿಯವರೆಗೂ ಕಾಂಗ್ರೆಸ್ ಹೋರಾಟ ನಿರಂತರವಾಗಿರುತ್ತದೆ ಎಂದು ಎಚ್ಚರಿಸಿದರು.

ADVERTISEMENT

ಹುನ್ನಾರದ ವಿರುದ್ಧ ಬೇಳೂರು ವಾಗ್ದಾಳಿ: ಕ್ಷೇತ್ರದ ಅಭಿವೃದ್ಧಿ ಬಗ್ಗೆ ಶಾಸಕರಿಗೆ ಕಾಳಜಿ ಇಲ್ಲ. ಹಿಂದೆ ಸಾಗರದ ಎಪಿಎಂಸಿಯನ್ನು ರೈತರ ಹಿತಕ್ಕಾಗಿ ವಿಭಜಿಸಿ ಹೊಸನಗರ ಮತ್ತು ಸೊರಬಕ್ಕೆ ಪ್ರತ್ಯೇಕವಾಗಿ ನೀಡಲಾಗಿತ್ತು. ಅದಕ್ಕೆ ಪೂರಕವಾಗಿ ಸಾಕಷ್ಟು ಅಭಿವೃದ್ಧಿ ಕೂಡ ಕಂಡಿದೆ. ಈಗ ಎಪಿಎಂಸಿಯನ್ನು ಸಾಗರಕ್ಕೆ ತೆಗೆದುಕೊಂಡು ಹೋಗುವ ಹಿಂದೆ ಯಾವ ಹುನ್ನಾರ ಇದೆ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಪ್ರಶ್ನಿಸಿದರು.

ಎಪಿಎಂಸಿಗೆ ಚುನಾವಣೆ ನಡೆಸಬೇಕು. ಚುನಾವಣೆ ನಡೆಸಲು ಧೈರ್ಯವಿಲ್ಲ. ನಾಮ ನಿರ್ದೇಶಿತ ಸದಸ್ಯರನ್ನು ನೇಮಿಸಿ, ಬೇಕಾದವರನ್ನು ಅಧ್ಯಕ್ಷರಾಗಿ ಮಾಡುತ್ತಿದ್ದಾರೆ. ಪ್ರಭಾವಿಯೊಬ್ಬರಿಗೆ ಅಧ್ಯಕ್ಷ ಸ್ಥಾನ ನೀಡುವ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿಲೀನಕ್ಕೆ ಮುಂದಾಗಿದ್ದಾರೆ. ಸೊರಬ ಎಪಿಎಂಸಿ ವಿಲೀನಕ್ಕೆ ಕುಮಾರ್ ಬಂಗಾರಪ್ಪ ಆಕ್ಷೇಪ ವ್ಯಕ್ತಪಡಿಸಿದರು. ಅದಕ್ಕಾಗಿ ಸೊರಬ ತಂಟೆಗೆ ಹೋಗಿಲ್ಲ. ಸಂಸದರಿಗೆ ತಾಕತ್ತಿದ್ದರೆ ಶಿಕಾರಿಪುರ ಎಪಿಎಂಸಿಯನ್ನು ಶಿವಮೊಗ್ಗಕ್ಕೆ ಸೇರಿಸಲಿ ಎಂದು ಸವಾಲು ಹಾಕಿದರು.

ಹೆದ್ದಾರಿ ಸಂಚಾರಕ್ಕೆ ಅಡಚಣೆ: ಎಪಿಎಂಸಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆ ಮಾವಿಕೊಪ್ಪ ವೃತ್ತದವರೆಗೆ ಸಾಗಿತು. ಸರ್ಕಾರ ಮತ್ತು ಶಾಸಕರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹೆದ್ದಾರಿ ಮೇಲೆ ಪ್ರತಿಭಟನೆ ನಡೆಸಿ, ರಸ್ತೆ ಸಂಚಾರ ತಡೆದರು. ನಂತರ ಬಹಿರಂಗ ಸಭೆ ನಡೆಯಿತು. ರಸ್ತೆಯನ್ನು ಪೂರ್ತಿಯಾಗಿ ಆಕ್ರಮಿಸಿಕೊಂಡ ಕಾರಣ ವಾಹನಗಳ ಸಂಚಾರಕ್ಕೆ ಅಡಚಣೆಯಾಯಿತು. ಪೊಲೀಸರು ಹರಸಾಹಸ ಪಟ್ಟರು.

ಹೊರವಲಯಕ್ಕೂ ವಿರೋಧ: ಹೊಸನಗರ ಪಟ್ಟಣ ಚಿಕ್ಕದಾಗಿದೆ. ಹೊರವಲಯ ರಸ್ತೆ ನಿರ್ಮಿಸಿದರೆ ಹೊಸನಗರ ಅಭಿವೃದ್ಧಿ ಶೂನ್ಯವಾಗುತ್ತದೆ. ಸಣ್ಣಪುಟ್ಟ ವ್ಯಾಪಾರಸ್ಥರು ಬೀದಿಗೆ ಬರಬೇಕಾಗುತ್ತದೆ. ಯಾವುದೇ ಹೊರವಲಯ ರಸ್ತೆ ನಿರ್ಮಿಸದೇ ಹಾಲಿ ಇರುವ ಪ್ರಮುಖ ರಸ್ತೆ ಮೇಲೆ ಹೆದ್ದಾರಿ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ತಹಶೀಲ್ದಾರ್ ವಿ.ಎಸ್.ರಾಜೀವ್ ಪ್ರತಿಭಟನೆ ನಡೆಯುತ್ತಿದ್ದ ಮಾವಿನಕೊಪ್ಪ ವೃತ್ತಕ್ಕೆ ಬಂದು ಮನವಿಯನ್ನು ಸ್ವೀಕರಿಸಿದರು.

ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಾ.ರಾಜನಂದಿನಿ, ಮುಖಂಡರಾದ ಕಲಗೋಡು ರತ್ನಾಕರ್, ಎಪಿಎಂಸಿ ಅಧ್ಯಕ್ಷ ದುಮ್ಮ ಅಶೋಕಗೌಡ, ಮಾಜಿ ಅಧ್ಯಕ್ಷರಾದ ಬಂಡಿ ರಾಮಚಂದ್ರ, ಈಶ್ವರಪ್ಪ ಗೌಡ, ಈಶ್ವರಪ್ಪ, ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಬಿ.ಜಿ.ನಾಗರಾಜ್, ಬಿ.ಜಿ.ಚಂದ್ರಮೌಳಿ ಕೋಡೂರು, ಎರಗಿ ಉಮೇಶ್, ಕರುಣಾಕರಶೆಟ್ಟಿ, ಅಶ್ವಿನಿ, ಚಿದಂಬರ್ ಮಾರುತಿಪುರ, ಸದಾಶಿವ ಶ್ರೇಷ್ಠಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.