ADVERTISEMENT

ಶಿವಮೊಗ್ಗ | ಕೇಳೋರೆ ಇಲ್ಲ ಸಿಪ್ಪೆಗೋಟು, ಗೊರಬಲು: ಬೆಲೆ ಕುಸಿತ

ಬೆಲೆ ಕುಸಿತದಿಂದ ಕಂಗಾಲಾದ ಗೇಣಿದಾರರು

ಕುಮಾರ್ ಅಗಸನಹಳ್ಳಿ
Published 2 ಫೆಬ್ರುವರಿ 2025, 5:55 IST
Last Updated 2 ಫೆಬ್ರುವರಿ 2025, 5:55 IST
ಹೊಳೆಹೊನ್ನೂರು ಸಮೀಪದ ಗ್ರಾಮವೊಂದರಲ್ಲಿ ಮಹಿಳೆಯರು ಗೊರಬಲು ಆರಿಸುತ್ತಿರುವುದು
ಹೊಳೆಹೊನ್ನೂರು ಸಮೀಪದ ಗ್ರಾಮವೊಂದರಲ್ಲಿ ಮಹಿಳೆಯರು ಗೊರಬಲು ಆರಿಸುತ್ತಿರುವುದು   

ಹೊಳೆಹೊನ್ನೂರು: ಮಲೆನಾಡಿನ ಬಹುಮುಖ್ಯ ಬೆಳೆಯಾಗಿರುವ ಅಡಿಕೆಯನ್ನು ನಂಬಿಕೊಂಡಿರುವ ರೈತರಿಗೆ ಸಿಪ್ಪೆಗೋಟು ಹಾಗೂ ಗೊರಬಲು ಬೆಲೆ ಆಘಾತ ತರಿಸಿದೆ.

ಪ್ರಸಕ್ತ ವರ್ಷ ರಾಶಿ ಅಡಿಕೆಗೆ ಬೆಲೆ ಇದ್ದು, ಸಿಪ್ಪೆಗೋಟು ಹಾಗೂ ಗೊರಬಲು ಕೇಳೋರೇ ಇಲ್ಲದಂತಾಗಿದೆ. ಇದರಿಂದ ಬೆಳೆಗಾರರು ಹಾಗೂ ಗೇಣಿದಾರರು ಪರಿತಪಿಸುವಂತಾಗಿದೆ. 

ಕಳೆದ ವರ್ಷ ಗೊರಬಲು ಹಾಗೂ ಸಿಪ್ಪೆಗೋಟು ಮಾರಿ ಹೆಚ್ಚಿನ ಲಾಭ ಗಳಿಸಿದ್ದ ಗೇಣಿದಾರರು ಈ ಬಾರಿ ನಷ್ಟ ಅನುಭವಿಸುವಂತಾಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಕ್ವಿಂಟಲ್‌ ಗೊರಬಲು ದರ ಅಂದಾಜು ₹32,000 ದಿಂದ ₹ 33,000 ಇತ್ತು. ಈ ಬಾರಿ ₹ 14,000 ದಿಂದ ₹ 15,000 ಇದೆ. ಸಿಪ್ಪೆಗೋಟು ದರ ಕಳೆದ ಬಾರಿ ಕ್ವಿಂಟಲ್‌ಗೆ ₹21,000 ದಿಂದ ₹ 22,000 ಇದ್ದದ್ದು, ಈ ಬಾರಿ ₹ 9,000 ದಿಂದ ₹ 10,000ಕ್ಕೆ ಕುಸಿದಿದೆ. 

ADVERTISEMENT

ಪ್ರಸ್ತುತ ರಾಶಿ ಅಡಿಕೆ ದರ ₹ 49,000ದಿಂದ ₹ 50,000ದವರೆಗೆ ಇದೆ. ಒಂದು ಕ್ವಿಂಟಲ್ ಹಸಿ ಅಡಿಕೆಗೆ ₹12,000 ದಿಂದ ₹ 13,000 ಬೆಲೆ ಇದೆ. ಒಂದು ಕ್ವಿಂಟಲ್ ಹಸಿ ಅಡಿಕೆಗೆ 12 ರಿಂದ 13 ಕೆಜಿ ಕೆ.ಜಿ. ಒಣ ರಾಶಿ ಅಡಿಕೆ ನೀಡುವುದಾಗಿ ಹೇಳಿ ಕೆಲ ಖೇಣಿದಾರರು ರೈತರಿಂದ ತೋಟ ಪಡೆದಿದ್ದರು. ಇನ್ನೂ ಕೆಲವರು ಇದಕ್ಕಿಂತಲೂ ಹೆಚ್ಚು ಒಣ ರಾಶಿ ಅಡಿಕೆ ನೀಡುವುದಾಗಿ ಹೇಳಿ ತೋಟವನ್ನು ಖೇಣಿ ಪಡೆದಿದ್ದಾರೆ.

ಒಂದು ಕ್ವಿಂಟಲ್ ಹಸಿ ಅಡಿಕೆಯನ್ನು ಸುಲಿದು, ಬೇಯಿಸಿ, ಒಣಗಿಸಿದರೆ 13ರಿಂದ 14 ಕೆ.ಜಿ ಒಣಗಿದ ರಾಶಿ ಅಡಿಕೆ, 2 ಕೆ.ಜಿ. ಗೊರಬಲು, 1 ಕೆ.ಜಿ. ಸಿಪ್ಪೆಗೋಟು ಸಿಗುತ್ತದೆ. ಹೀಗಿರುವಾಗ ರೈತರಿಗೆ 14 ಕೆ.ಜಿ. ಒಣಗಿದ ರಾಶಿ ಅಡಿಕೆ ನೀಡಿದರೆ ಖೇಣಿದಾರರಿಗೆ ಉಳಿಯೋದು ಕೇವಲ 2 ಕೆ.ಜಿ. ಗೊರಬಲು, 1 ಕೆ.ಜಿ. ಸಿಪ್ಪೆಗೋಟು ಮಾತ್ರ.

ಮಧ್ಯವರ್ತಿಗಳು ಗೊರಬಲು ಮತ್ತು ಸಿಪ್ಪೆಗೋಟನ್ನು ಖರೀದಿಸಿ ಕೃತಕ ಬಣ್ಣ ಬಳಸಿ ಅದನ್ನು ಒಣಗಿದ ರಾಶಿ ಅಡಿಕೆಗೆ ಮಿಶ್ರಣ ಮಾಡಿ ಮಾರಾಟ ಮಾಡುತ್ತಿದ್ದರು. ಆ ಮೂಲಕ ಹೆಚ್ಚು ಲಾಭ ಗಳಿಸುತ್ತಿದ್ದರು. ಆದರೆ, ಈಗ ಕಲಬೆರಕೆ ಮಾಡಿದ ಒಣ ಅಡಿಕೆ ಮಾರುಕಟ್ಟೆಯಲ್ಲಿ ತಿರಸ್ಕೃತಗೊಳ್ಳುತ್ತಿದೆ. ಇದರಿಂದ ಮಿಕ್ಸಿಂಗ್ ದಂಧೆಗೆ ಕಡಿವಾಣ ಬಿದ್ದಂತಾಗಿದ್ದು, ಸಿಪ್ಪೆಗೋಟು ಹಾಗೂ ಗೊರಬಲನ್ನು ಕೇಳುವವರೇ ಇಲ್ಲದಂತಾಗಿದೆ.

ದುಬಾರಿ ಕೂಲಿ, ಸಾಗಣೆ ವೆಚ್ಚದಿಂದ ಖೇಣಿದಾರರು ಕಂಗಾಲಾಗಿದ್ದಾರೆ. ಅತಿಯಾದ ಮಳೆಯಿಂದ ಅಡಿಕೆ ಸರಿಯಾಗಿ ಒಣಗದೆ ಟೊಳ್ಳಾಗಿ ತೂಕದಲ್ಲಿ ವ್ಯತ್ಯಾಸ ಕಂಡು ಬರುತ್ತಿರುವುದರಿಂದಲೂ ನಷ್ಟ ಅನುಭವಿಸುವಂತಾಗಿದೆ. ರಾಶಿ ಅಡಿಕೆಯಿಂದ ಗೊರಬಲನ್ನು ಬೇರ್ಪಡಿಸುವುದಕ್ಕೆ ಮಹಿಳೆಯರಿಗೆ ಚೀಲ ಒಂದಕ್ಕೆ ₹ 200 ನೀಡುತ್ತಿದ್ದು, ಅದು ಕೂಡ ಹೊರೆಯಾಗುತ್ತಿದೆ. 

ಪೈಪೋಟಿ: ಮಳೆಗಾಲ ಆರಂಭಕ್ಕೂ ಮುನ್ನ ಖೇಣಿದಾರರು ಪೈಪೋಟಿಗಿಳಿದು ಮಾರುಕಟ್ಟೆ ದರಕ್ಕಿಂತಲೂ ಹೆಚ್ಚಿನ ಬೆಲೆ ನೀಡಿ ತೋಟಗಳನ್ನು ಖೇಣಿ ಪಡೆದಿದ್ದಾರೆ. ನಾಲ್ಕೈದು ತಿಂಗಳಿಂದ ರಾತ್ರಿ ಹಗಲು ಎನ್ನದೇ ದುಡಿದಿದ್ದಾರೆ. ದಿಢೀರ್‌ ಬೆಲೆ ಕುಸಿತದಿಂದಾಗಿ ಅವರೀಗ ದಿಕ್ಕೇ ತೋಚದಾಗಿದ್ದಾರೆ. 

ಗೊರಬಲು ಅಡಿಕೆಯ ರಾಶಿ 
ಸಿಪ್ಪೆಗೋಟು ಹಾಗೂ ಗೊರಬಲಿನ ದರ ಕುಸಿತದಿಂದಾಗಿ ಗೇಣಿದಾರರು ಕಂಗಾಲಾಗಿದ್ದಾರೆ. ಸರ್ಕಾರ ಕೂಡಲೇ ಅಡಿಕೆಗೆ ಗರಿಷ್ಠ ದರ ನಿಗದಿ ಮಾಡಬೇಕು
ಈಶ್ವರ ಆರ್ ಖೇಣಿದಾರ ಅಗಸನಹಳ್ಳಿ
ಕೇಂದ್ರ ಸರ್ಕಾರ ವಿದೇಶಗಳಿಂದ ಅಡಿಕೆ ಆಮದು ಮಾಡಿಕೊಳ್ಳುತ್ತಿದೆ. ಆದ್ದರಿಂದ ನಮ್ಮಲ್ಲಿ ರಾಶಿ ಅಡಿಕೆ ಗೊರಬಲು ಹಾಗೂ ಸಿಪ್ಪೆಗೋಟಿಗೆ ಹೆಚ್ಚಿನ ಬೇಡಿಕೆ ಇಲ್ಲದಂತಾಗಿದೆ
ಮಲ್ಲೇಶಪ್ಪ ಖೇಣಿದಾರ ಮಲ್ಲಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.