ADVERTISEMENT

ವಾಜಪೇಯಿ ಬಡಾವಣೆ ಅಕ್ರಮಕ್ಕೆ ಸಕ್ರಮದ ಮುದ್ರೆ

ಕ್ರಮ ಕೈಗೊಳ್ಳಲು ಸೂಚಿಸಿದ್ದ ಲೋಕಾಯುಕ್ತ ವರದಿ ತಿರಸ್ಕರಿಸಿದ ರಾಜ್ಯ ಸಂಪುಟ ಸಭೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 7:01 IST
Last Updated 23 ಜುಲೈ 2021, 7:01 IST
ಶಿವಮೊಗ್ಗ ಸಾಗರ ರಸ್ತೆಯ ವಾಜಪೇಯಿ ಬಡಾವಣೆ.
ಶಿವಮೊಗ್ಗ ಸಾಗರ ರಸ್ತೆಯ ವಾಜಪೇಯಿ ಬಡಾವಣೆ.   

ಶಿವಮೊಗ್ಗ:ಲೋಕಾಯುಕ್ತ ವರದಿಯಲ್ಲಿ ವಾಜಪೇಯಿ ಬಡಾವಣೆಯ ನಿವೇಶನ ಹಂಚಿಕೆ ಅಕ್ರಮ ಸಾಬೀತಾಗಿದ್ದರೂ ವಿಧಾನಸೌಧದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಕ್ರಮದ ಮುದ್ರೆ ಒತ್ತಿದೆ.

ಸಾಗರ ರಸ್ತೆಯ ಮಲ್ಲಿಗೇನಹಳ್ಳಿ ಬಳಿ ಶಿವಮೊಗ್ಗ–ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸಿದ್ದ ವಾಜಪೇಯಿ ಬಡಾವಣೆಯಲ್ಲಿ ಅಭಿವೃದ್ಧಿ ಪಡಿಸಿದ1,802 ನಿವೇಶನಗಳಲ್ಲಿ 1,305 ನಿವೇಶನಗಳನ್ನು2008–13ರ ಅವಧಿಯಲ್ಲಿ ಹಂಚಿಕೆ ಮಾಡಲಾಗಿತ್ತು. ಈ ಹಂಚಿಕೆಯಲ್ಲಿ ಭಾರಿ ಅಕ್ರಮ ನಡೆದಿದೆ. ಒಂದೇ ಕುಟುಂಬದ ಹಲವರಿಗೆ, ಹಲವು ನಿವೇಶನ, ಮಹಲುಗಳನ್ನು ಹೊಂದಿರುವ ಶ್ರೀಮಂತರಿಗೆ, ಅರ್ಜಿಯನ್ನೇ ಸಲ್ಲಿಸದ ಫಲಾನುಭವಿಗಳಿಗೆ, ಒಂದು ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ನಿವೇಶನಗಳನ್ನು ಹಂಚಲಾಗಿದೆ. ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿ ಹಂಚಿಕೆ ಮಾಡಲಾಗಿದೆ ಎಂದು ಆರೋಪ ಕೇಳಿಬಂದಿತ್ತು.

2013ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಅಕ್ರಮ ಹಂಚಿಕೆ ಕುರಿತು ತನಿಖೆ ನಡೆಸುವಂತೆ ಲೋಕಾಯುಕ್ತವನ್ನು ಕೋರಿತ್ತು. ಅದಕ್ಕೂ ಮೊದಲು ಅಂದಿನ ಶಾಸಕ ಕೆ.ಬಿ.ಪ್ರಸನ್ನಕುಮಾರ್ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದರು. ತನಿಖೆ ನಡೆಸಿದ್ದ ರವೀಂದ್ರನಾಥ್ ಅಕ್ರಮ ನಡೆದಿರುವುದನ್ನು ಎತ್ತಿಹಿಡಿದಿದ್ದರು.

ADVERTISEMENT

ನಂತರ ಸುದೀರ್ಘ ಅವಧಿ ತನಿಖೆ ನಡೆಸಿದ ಲೋಕಾಯುಕ್ತ 807 ನಿವೇಶನಗಳ ಹಂಚಿಕೆಯಲ್ಲಿ ಲೋಪವಾಗಿದೆ. ಅರ್ಹರಲ್ಲದವರ ಅರ್ಜಿಗಳನ್ನು ರದ್ದುಪಡಿಸಿ, ಹಂಚಿಕೆಯಾಗದ ಅರ್ಜಿಗಳನ್ನು ಜ್ಯೇಷ್ಠತೆ ಪ್ರಕಾರ ಹಂಚಿಕೆ ಮಾಡಬೇಕು. ಅಂದಿನ ಅಧ್ಯಕ್ಷರಾದ ಎಸ್. ಜ್ಞಾನೇಶ್ವರ್ ಅವರಿಗೆ 4 ವರ್ಷ, ಎಸ್. ದತ್ತಾತ್ರಿ ಅವರಿಗೆ 2 ವರ್ಷ, ‘ಸೂಡಾ’ ಸದಸ್ಯ ಬಿ.ಕೆ. ಶ್ರೀನಾಥ್ ಅವರಿಗೆ ಮೂರು ವರ್ಷ ಯಾವುದೇ ಪ್ರಾಧಿಕಾರ, ನಿಗಮದ ಹುದ್ದೆ ನೀಡಬಾರದು ಎಂದು ವರದಿಯಲ್ಲಿ ನಮೂದಿಸಿತ್ತು. ನಾಲ್ಕು ತಿಂಗಳ ಒಳಗೆ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿತ್ತು.

ಲೋಕಾಯುಕ್ತದ ನಿರ್ದೇಶನದಂತೆ ಅರ್ಜಿಗಳ ಪರಿಶೀಲನೆ ಆರಂಭಿಸಿದ್ದ ಈಗಿನ ‘ಸೂಡಾ’ ಅಧ್ಯಕ್ಷ ಎಸ್‌.ಎಸ್‌.ಜ್ಯೋತಿಪ್ರಕಾಶ್, ಅಕ್ರಮ ಅರ್ಜಿಗಳ ಪರಿಶೀಲನೆ ನಡೆಸಿದ್ದರು. ಅರ್ಹರಲ್ಲದವರ ಅರ್ಜಿಗಳನ್ನು ರದ್ದುಪಡಿಸಿ, ಹಂಚಿಕೆಯಾಗದ ಅರ್ಜಿಗಳನ್ನು ಜ್ಯೇಷ್ಠತೆ ಪ್ರಕಾರ ಹಂಚಿಕೆ ಮಾಡಲು, ಅರ್ಹ ಫಲಾನುಭವಿಗಳಿಗೆ ಮನೆ ಕಟ್ಟಿಕೊಳ್ಳಲು ಪರವಾನಗಿ ನೀಡಲು ಸಿದ್ಧತೆ ನಡೆಸಿದ್ದರು.

ನಿವೇಶನ ಹಂಚಿಕೆಯಲ್ಲಿ ಅಕ್ರಮ, ಭ್ರಷ್ಟಾಚಾರ, ಅವ್ಯವಹಾರ ನಡೆದಿದೆ. 498 ನಿವೇಶನಗಳು ಮಾತ್ರ ಸಕ್ರಮ. ಸಕ್ರಮದಲ್ಲೂ ಸಾಕಷ್ಟು ಲೋಪಗಳಿವೆ. ಸರ್ಕಾರ ಇಡೀ ಹಂಚಿಕೆಯನ್ನೇ ಪುನರ್ ಪರಿಶೀಲಿಸಬೇಕು. ಮರು ಹಂಚಿಕೆ ಮಾಡಬೇಕು ಎಂದು ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ, ಅಣ್ಣಾ ಹಜಾರೆ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಮತ್ತೆ ಒತ್ತಾಯಿಸಿದ್ದವು.

ಸಕ್ರಮ ಎಂದು ತಿಳಿಸಿರುವ ನಿವೇಶನಗಳಲ್ಲೂ ಕೆಲವು ಅರ್ಜಿದಾರರು ಸ್ವಂತ ನಿವೇಶನ ಹೊಂದಿದ್ದಾರೆ. ನಿವೃತ್ತ ನ್ಯಾಯಾಧೀಶ ರವೀಂಧ್ರನಾಥ್ ಅವರು ಪ್ರಾಧಿಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಈ ಕುರಿತು ಉಲ್ಲೇಖವಿದೆ. ಬಡಾವಣೆಯ ಅಭಿವೃದ್ಧಿ ಸಮಯದಲ್ಲಿ ₹ 24,14,120 ಗುತ್ತಿಗೆದಾರರಿಗೆ ಹೆಚ್ಚುವರಿಯಾಗಿ ಪಾವತಿಸಲಾಗಿದೆ. ಹಾಗಾಗಿ, ಪ್ರಾಧಿಕಾರದ ಎಂಜಿನಿಯರ್‌ಗಳು, ಆಯುಕ್ತರು ಹಾಗೂ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದರು.

ಈ ಎಲ್ಲ ಬೆಳವಣಿಗೆಗಳ ಮಧ್ಯೆ ಸಚಿವ ಸಂಪುಟ ಎಲ್ಲ ಹಂಚಿಕೆಯನ್ನೂ ಸಿಂಧುಗೊಳಿಸಿದೆ. ಸಂಪುಟ ಸಭೆಯ ನಂತರ ನಡೆದ ಮಾಧ್ಯಮಗೋಷ್ಠಿಯಲ್ಲಿ ವಿಷಯವನ್ನು ಸ್ವತಃ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳುವ ಮೂಲಕ ಅಚ್ಚರಿಮೂಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.